ADVERTISEMENT

ಶಾಸಕರ ಕಾಟಾಚಾರದ ನಗರ ಪ್ರದಕ್ಷಿಣೆ

ಕೊನೆಗೂ ಬಂದ ಶಾಸಕರು, ನಗರದಲ್ಲಿನ ಸಮಸ್ಯೆಗಳ ಸುಳಿ ಬಿಚ್ಚಿದ ಜನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 9:25 IST
Last Updated 26 ಸೆಪ್ಟೆಂಬರ್ 2016, 9:25 IST
ನಗರದಲ್ಲಿ ಶಾಸಕ ಡಾ.ಸುಧಾಕರ್‌ ಅಧಿಕಾರಿಗೊಂದಿಗೆ ನಗರ ಪ್ರದಕ್ಷಿಣೆ ಮಾಡಿದರು.
ನಗರದಲ್ಲಿ ಶಾಸಕ ಡಾ.ಸುಧಾಕರ್‌ ಅಧಿಕಾರಿಗೊಂದಿಗೆ ನಗರ ಪ್ರದಕ್ಷಿಣೆ ಮಾಡಿದರು.   

ಚಿಕ್ಕಬಳ್ಳಾಪುರ: ‘ಸಾರ್, ₹ 150 ತಗೊಂಡ್ರು 8 ದಿನಕ್ಕೆ ಒಂದ್‌ ಸಲ ನೀರು ಬಿಡ್ತಾರೆ. ಚರಂಡಿ ಪಕ್ಕಾನೇ ಬೋರ್‌ವೆಲ್‌ ಕೊರೆಸವ್ರೆ. ಕಲ್ಲು ಪುಡೀನ ಚರಂಡಿಯೊಳಗೆ ಬಿಟ್ಟವ್ರೇ. ಮಳೆ ಬಂದ್ರೆ ನೀರು ಮುಂದೆ ಹೋಗಲ್ಲ. ಮಣ್ಣು ತೆಗೀರಿ ಅಂತ ನಗರಸಭೆಗೆ ಹೇಳಿ ಸುಸ್ತಾಗಿ ಬಿಟ್ಟಿದ್ದೀವಿ’...

ನಗರದ 26ನೇ ವಾರ್ಡ್‌ ಪಾಂಡುರಂಗಸ್ವಾಮಿ ದೇವಾಲಯ ಬೀದಿಯ ನಿವಾಸಿ ಮಂಜುನಾಥ್‌, ಭಾನುವಾರ ಬೆಳಿಗ್ಗೆ ನಗರ ಪ್ರದಕ್ಷಿಣೆ ನಡೆಸಿದ ಶಾಸಕ ಕೆ.ಸುಧಾಕರ್‌ ಬಳಿ ಅಹವಾಲು ಹೇಳಿಕೊಂಡಿದ್ದು ಹೀಗೆ...

ಕಿಷ್ಕಿಂಧೆಯಂಥ ರಸ್ತೆಗಳು, ಕುಸಿದ ಚರಂಡಿ, ಎಲ್ಲೆಂದರಲ್ಲಿ ಸುರಿದ ಕಸದ ರಾಶಿಯಿಂದ ರೋಸಿ ಹೋಗಿದ್ದ ಜನರು, ಶಾಸಕ ಸುಧಾಕರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಅಂತಹ ಕಡೆಗಳಲ್ಲಿ ಸಾವಕಾಶದಿಂದಲೇ ಜನರ ಅಹವಾಲು ಸ್ವೀಕರಿಸಿ, ಸಮಾಧಾನ ಹೇಳಿದರು.

‘ರಸ್ತೆಗಳಿಗೆ ಶೀಘ್ರ ಕಾಂಕ್ರಿಟ್‌ ಹಾಕುತ್ತೇವೆ. ಒಡೆದು ಹೋಗಿರುವ ಪೈಪ್‌ಲೇನ್‌ ಹಾಗೂ ಚರಂಡಿಯನ್ನು ಸರಿಪಡಿಸುತ್ತೇವೆ’ ಎಂದು ಭರವಸೆ ನೀಡಿದರು.

ಗಂಗಮ್ಮ ಗುಡಿ ರಸ್ತೆ, ವಾಸವಿ ಧರ್ಮಶಾಲಾ ರಸ್ತೆಯ ಮೂಲೆಗಳಲ್ಲಿ ಕಸ ಇದ್ದರೂ, ಕಂಡು ಕಾಣದಂತೆ ಮುಂದೆ ಸಾಗಿದರು. ಐದು ವಾರ್ಡ್‌ಗಳಲ್ಲಿ(26 ರಿಂದ 31) ಶಾಸಕರು ನಗರ ಪ್ರದಕ್ಷಿಣೆ ಮಾಡುವ ಸಂಗತಿ ಮೊದಲೇ ತಿಳಿಸಿದ್ದರಿಂದ ಅಲ್ಲಲ್ಲಿ ಕಸ ತೆಗೆದು, ಚರಂಡಿ ಸ್ವಚ್ಛ ಮಾಡಿ ಬ್ಲೀಚಿಂಗ್‌ ಪೌಡರ್‌ ಹಾಕಲಾಗಿತ್ತು.

ವಿವಿಧ ಸಮುದಾಯಗಳ ದೇವಾಲಯಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು. 26ನೇ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ಸಸಿ ವಿತರಿಸಿದರು. ನಗರದ ಅಭಿವೃದ್ಧಿಯ ಬಗ್ಗೆ ಮೂರು ವರ್ಷದಲ್ಲಿ ಇಲ್ಲದ ಕಾಳಜಿ ಈಗ ಬಂದಿದೆ. ಇದೆಲ್ಲಾ ಚುನಾವಣೆ ಗಿಮಿಕ್‌ ಎಂದು ಅಂಗಡಿ ಮಾಲೀಕರು, ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು.

ಪೈಪ್‌ಲೇನ್‌ ನಿರ್ಮಾಣ ಬಾಕಿ: ‘ನಗರಸಭೆ ವತಿಯಿಂದ 31 ಬೋರ್‌ವೆಲ್‌ ಕೊರೆಸಲಾಗಿದೆ. ಎಲ್ಲದರಲ್ಲೂ ನೀರು ಬರುತ್ತಿದ್ದು, ಪೈಪ್‌ಲೇನ್‌ ಹಾಕುವುದು ಮಾತ್ರ ಬಾಕಿ ಇದೆ. ಶೀಘ್ರವೇ ಪೈಪ್‌ಲೇನ್‌ ನಿರ್ಮಿಸಿ ನೀರು ಪೂರೈಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಉಮಾಕಾಂತ್‌ ಹೇಳಿದರು.

ಪಾಂಡುರಂಗ ದೇವಾಲಯ ರಸ್ತೆಯಲ್ಲಿ ಸ್ಥಳೀಯ ಆಗ್ರಹಕ್ಕೆ ಈ ಮೇಲಿನಂತೆ ತಿಳಿಸಿದಾಗ, ‘ಅದಕ್ಕೆ ದುಡ್ಡು ಕೊಟ್ಟಿದ್ದು ನಾನೇ’ ಎಂದು ಶಾಸಕ ಸುಧಾಕರ್‌ ಹೇಳುತ್ತಾ ಮುಂದಡಿ ಇಟ್ಟರು.

ಅದೇ ಬೀದಿಯ ನಿವಾಸಿ ಶೌಖತ್‌, ‘8 ತಿಂಗಳಾದರೂ ಖಾತೆ ಮಾಡಿಕೊಟ್ಟಿಲ್ಲ. ₹ 20–30 ಸಾವಿರ ಕೊಟ್ಟರೆ ಎಂಟೇ ದಿನದಲ್ಲಿ ಖಾತೆ ಕೊಡ್ತಾರೆ, ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು. ಆಗ ಮಧ್ಯಪ್ರವೇಶಿಸಿದ ಪೌರಾಯುಕ್ತರು, ‘ನಗರದಲ್ಲಿ ಯಾರಿಗೂ ಹೊಸ ಖಾತೆ ಕೊಟ್ಟಿಲ್ಲ. ಖಾತೆ ಕೋರಿ ಬಂದಿರುವ 68 ಅರ್ಜಿಗಳ ವಿಲೇವಾರಿ ಬಾಕಿ ಇದೆ’ ಎಂದರು.

ಅಧಿಕಾರಿ ವಿರುದ್ಧ ಕ್ರಮ : ‘ಜಿಲ್ಲಾ ಕ್ರೀಡಾಂಗಣದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅಲ್ಲಿನ ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಅಧಿಕಾರಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಂಬಂಧಪಟ್ಟ ಸಚಿವರಿಗೆ ಶಿಫಾರಸು ಮಾಡಲಾಗುವುದು’ ಎಂದು ಶಾಸಕ ಸುಧಾಕರ್‌ ಹೇಳಿದರು.

‘ಕ್ರೀಡಾಂಗಣದಲ್ಲಿ ಯಾವುದೇ ಮೂಲಸೌಕರ್ಯವಿಲ್ಲ. ಸ್ಕೇಟಿಂಗ್‌ ಟ್ರ್ಯಾಕ್‌, ಓಪನ್‌ ಜಿಮ್‌, ವಾಕಿಂಗ್‌ ಟ್ರ್ಯಾಕ್‌, ಸಿಂಥೆಟಿಕ್‌ ಟ್ರ್ಯಾಕ್‌, ಪಂದ್ಯಾವಳಿಗೆ ಫ್ಲಡ್‌ಲೈಟ್‌, ಬಾಸ್ಕೆಟ್‌ಬಾಲ್‌, ವಾಲಿಬಾಲ್‌ ಅಂಕಣಗಳನ್ನು ಎರಡು ತಿಂಗಳಲ್ಲಿ ನಿರ್ಮಿಸಲಾಗುವುದು’ ಎಂದರು.

‘ಅಪ್ಪಯ್ಯನಕುಂಟೆ ಗ್ರಾಮದಲ್ಲಿ 20 ಎಕರೆ ಜಾಗದಲ್ಲಿ ಅತ್ಯುತ್ತಮ ಬಹುಪಯೋಗಿ ಮೈದಾನ ನಿರ್ಮಿಸಲಾಗುವುದು. ಅಲ್ಲಿ ವಾರಕ್ಕೆ ಒಂದು ದಿನ  ದೇಶಿಯ ಕರಕುಶಲಗಳ ಮೇಳ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

***
₹ 100 ಕೋಟಿಯಲ್ಲಿ ಅಭಿವೃದ್ಧಿ
ವಿಷನ್‌ 20–20 ಯೋಜನೆಯಡಿ  ₹ 100 ಕೋಟಿ ವೆಚ್ಚದಲ್ಲಿ ನಗರದ ಅಭಿವೃದ್ಧಿಗಾಗೆ ನೀಲನಕ್ಷೆ ರೂಪಿಸಲಾಗುತ್ತಿದೆ ಎಂದು ಶಾಸಕ ಡಾ. ಸುಧಾಕರ್‌ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದ ಅಭಿವೃದ್ಧಿಗಾಗಿ ₹ 50 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಆ ಹಣವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿ ತಿಂಗಳ ಒಂದು ಭಾನುವಾರದಂದು 5 ವಾರ್ಡ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಜನರ ಕುಂದುಕೊರತೆ ಆಲಿಸಲು ನಿರ್ಧರಿಸಿದ್ದೇನೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.