ADVERTISEMENT

ಸಮಾಜಮುಖಿ ಸೇವೆಯಿಂದ ಸಂತೃಪ್ತಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 4:51 IST
Last Updated 23 ಮೇ 2017, 4:51 IST

ಶಿಡ್ಲಘಟ್ಟ: ಜೀವನಪ್ರೀತಿ, ಸಮಾಜಮುಖಿ ಗುಣವನ್ನು ಯುವಜನರು ರೂಢಿಸಿಕೊಂಡಾಗ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಸಾಧ್ಯ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.

ನಗರದಲ್ಲಿ ಸೋಮವಾರ ಕನ್ನಡ ಸಾರಸ್ವತ ಪರಿಚಾರಿಕೆ (ಕಸಾಪ) ವತಿಯಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ಸಮಾಜಪರ ಸೇವೆಯಿಂದ ಆತ್ಮ ಸಂತೃಪ್ತಿ ಸಿಗಲಿದೆ ಎಂದು ಹೇಳಿದರು.

ಇತರ ವಿದ್ಯಾರ್ಥಿಗಳ ಓದಿಗೆ ಪ್ರೇರಣೆ ನೀಡುವುದೇ ಪ್ರತಿಭಾ ಪುರಸ್ಕಾರದ ಉದ್ದೇಶ. ಎಸ್ಸೆಸ್ಸೆಲ್ಸಿ, ಪಿಯುಸಿ ಜೊತೆಗೆ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದವರು, ಕನ್ನಡ ಶಿಕ್ಷಕರು, ಸರ್ಕಾರಿ ಶಾಲೆ ಮತ್ತು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯದಲ್ಲಿದ್ದು ಓದಿ, ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನೂ ಪುರಸ್ಕರಿಸಿ, ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ವಿದ್ಯಾರ್ಥಿ ಮಾರ್ಗದರ್ಶಿ ಸಂಜೀವ್‌ ಕುಮಾರ್‌ ಮಾತನಾಡಿ, ಅಂಕ ಗಳಿಸಿದರಷ್ಟೇ ಸಾಲದು, ವ್ಯಕ್ತಿತ್ವ, ಕೌಶಲ ವೃದ್ಧಿಗೂ ಗಮನ ನೀಡಬೇಕು. ಓದಿನ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಿಸಿ ಕೊಳ್ಳಬೇಕು. ವಿವಿಧ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಪರಿಚಾರಿಕೆ ಅಧ್ಯಕ್ಷ ಬಿ.ಆರ್. ಅನಂತಕೃಷ್ಣ ಮಾತನಾಡಿ, ‘ಹುಟ್ಟುವಾಗಲೇ ಯಾರೂ ಸಾಧಕರಾಗುವುದಿಲ್ಲ. ಉತ್ತಮ ಗುಣ ಬೆಳೆಸಿಕೊಂಡು ಕಷ್ಟಪಟ್ಟು ಗುರಿ ಮುಟ್ಟಿದಾಗ ಸಾಧಕರಾಗಲು ಸಾಧ್ಯ’ ಎಂದು ನುಡಿದರು.

ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ನರಸಿಂಹಮೂರ್ತಿ ಅವರಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೆಡ್ಡಿ ಅವರು ಪ್ರೋತ್ಸಾಹಕರವಾಗಿ ಲ್ಯಾಪ್‌ಟಾಪ್‌ ನೀಡಿದರು.

ತಾಲ್ಲೂಕು ಶಿಕ್ಷಣಾಧಿಕಾರಿ ಎಸ್‌. ರಘುನಾಥರೆಡ್ಡಿ, ಅಮೃತ್‌ ಕುಮಾರ್‌, ಪರಿಚಾರಿಕೆ ಸದಸ್ಯರಾದ ಎ.ಎಂ. ತ್ಯಾಗರಾಜ್, ಸತೀಶ್, ಚಾಂದ್‌ಪಾಷ, ದೇವರಾಜ್, ಕೊತ್ತನೂರು ನಾಗರಾಜ್, ಅಂಬರೀಷ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.