ADVERTISEMENT

ಸಮುದಾಯದ ಏಳಿಗೆ ದೃಷ್ಟಿಯಿಂದ ಸಂಘಟಿತರಾಗಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2017, 11:22 IST
Last Updated 5 ಏಪ್ರಿಲ್ 2017, 11:22 IST
ಚಿಕ್ಕಬಳ್ಳಾಪುರದ ಪ್ರಮುಖ ಬೀದಿಗಳಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರವುಳ್ಳ ಅಲಂಕೃತ ರಥಗಳನ್ನು ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು
ಚಿಕ್ಕಬಳ್ಳಾಪುರದ ಪ್ರಮುಖ ಬೀದಿಗಳಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರವುಳ್ಳ ಅಲಂಕೃತ ರಥಗಳನ್ನು ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು   

ಚಿಕ್ಕಬಳ್ಳಾಪುರ: ‘ಮಡಿವಾಳ ಸಮುದಾಯದವರು ಸಂಘಟಿತರಾಗಲು ಹಿಂದೆಟು ಹಾಕುತ್ತಿದ್ದಾರೆ. ಸಮುದಾಯದ ಏಳಿಗೆ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಎಲ್ಲರೂ ಸಂಘಟಿತರಾದಾಗ ಮಾತ್ರ ಮಾಚಿದೇವರ ಜಯಂತಿಗೆ ಅರ್ಥ ಬರುತ್ತದೆ’ ಎಂದು ಮಾಚಿದೇವ ಗುರುಪೀಠ ವಿಶ್ವಸ್ತ ಸಮಿತಿಯ ಅಧ್ಯಕ್ಷ ಶಿವಯೋಗಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಡಿವಾಳ ಮಾಚಿದೇವರ ದ್ವಿತೀಯ ವರ್ಷದ ಜಯಂತ್ಯುತ್ಸವದ ಪ್ರಯುಕ್ತ ಜಿಲ್ಲೆಯಲ್ಲಿರುವ ಮಡಿವಾಳ ಮಾಚಿದೇವರ ಸಂಘಗಳ ಸಹಯೋಗದಲ್ಲಿ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ‘ಜಿಲ್ಲಾ ಮಡಿವಾಳರ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಕ್ರಾಂತಿಗೆ ಕಾರಣರಾದ ವಚನಕಾರರ ಪೈಕಿ ಮಾಚಿದೇವರ ವಚನಗಳನ್ನು ಹೆಚ್ಚಾಗಿ ಎಲ್ಲಿಯೂ ಉಲ್ಲೇಖ ಮಾಡುತ್ತಿಲ್ಲ. ಸರ್ಕಾರ ಕೂಡ ಉಳಿದ ವಚನಕಾರರಿಗೆ ನೀಡುವ ಆದ್ಯತೆಯನ್ನು ಮಾಚಿದೇವರಿಗೆ ನೀಡುತ್ತಿಲ್ಲ. ಈ ತಾರತಮ್ಯವನ್ನು ಖಂಡಿಸಬೇಕು. ಮಡಿವಾಳ ಸಮುದಾಯದವರು ಕೂಡ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು.

ADVERTISEMENT

ಕೆ.ವಿ ಮತ್ತು ಪಂಚಗಿರಿ ದತ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ವಿ.ನವೀನ್‌ ಕಿರಣ್ ಮಾತನಾಡಿ, ‘ಮಡಿವಾಳ ಸಮುದಯದವರು ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರುವ ಅಗತ್ಯವಿದೆ. ಈ ಸಮುದಾಯದ ವಿದ್ಯಾರ್ಥಿಗಳಿಗೆ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡುತ್ತೇನೆ. ಇಂತಹ ಕಾರ್ಯಕ್ರಮಗಳ ಮೂಲಕ ನೀವು ನಿಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಕೆಲಸ ಮಾಡಬೇಕು. ಆಗ ಸರ್ಕಾರ ನಿಮ್ಮನ್ನು ಕೂಡ ಗಂಭೀರವಾಗಿ ಪರಿಗಣಿಸಿ, ಗುರುತಿಸುವ ಕೆಲಸ ಮಾಡುತ್ತದೆ’ ಎಂದು ತಿಳಿಸಿದರು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ರಾಜ್ಯದಲ್ಲಿ ಮೊದಲ ಬಾರಿಗೆ ಎಚ್‌.ಡಿ.ದೇವೇಗೌಡ ಅವರು ಮಡಿವಾಳ ಸಮುದಾಯದವರಿಗೆ ರಾಜಕೀಯ ಮೀಸಲಾತಿ ದೊರಕಿಸಿ ಕೊಟ್ಟರು. ಯಾವುದೇ ಒಂದು ಸಮುದಾಯದವರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಪಕ್ಷಗಳು ಅವರಿಗೆ ವಿವಿಧ ಹುದ್ದೆಗಳನ್ನು ನೀಡುತ್ತವೆ. ಹೀಗಾಗಿ ಈ ಸಮುದಾಯದವರು ಕೂಡ ರಾಜಕೀಯವಾಗಿ ಗುರುತಿಸಿಕೊಳ್ಳುವ ಕೆಲಸ ಮಾಡಬೇಕು’ ಎಂದು ತಿಳಿಸಿದರು. 

ಮಡಿವಾಳ ಸಮುದಾಯದ ಮುಖಂಡ ರಾಜು ಸೊರಬ ಮಾತನಾಡಿ, ‘ಶತಮಾನಗಳಿಂದ ಶೋಷಣೆಗೆ ಒಳಗಾಗುತ್ತ ಬರುತ್ತಿರುವ ಮಡಿವಾಳ ಜನಾಂಗ ಇಂದಿಗೂ ಸಮಾಜದಲ್ಲಿ ಹಿಂದುಳಿದಿದೆ. ರಾಜಕಾರಣಿಗಳು ರಾಜಕೀಯಕ್ಕೆ ಮತ್ತು ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮನ್ನು ಬಳಸಿಕೊಳ್ಳುದ್ದಾರೆ. ನಮ್ಮ ಬೇಡಿಕೆಗಳನ್ನು ಮಾತ್ರ ಈಡೇರಿಸುವ ಪ್ರಯತ್ನ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಡಿವಾಳರನ್ನು ಈವರೆಗೆ ಬಂದ ಪ್ರತಿಯೊಂದು ಸರ್ಕಾರವು ನಿರ್ಲಕ್ಷಿಸುತ್ತಲೇ ಬಂದಿವೆ. ರಾಜಕೀಯ ಅಧಿಕಾರ ನೀಡುವ ಮನಸು ಮಾಡಲಿಲ್ಲ. ಇನ್ನು ಜನಪ್ರತಿನಿಧಿಗಳು ನಮ್ಮ ಜನಾಂಗದ ಸಭೆ ಸಮಾರಂಭಗಳಿಗೆ ಆಹ್ವಾನಿಸಿದರೂ ಬರುವುದಿಲ್ಲ. ನಾವು ರಾಜಕೀಯವಾಗಿ ಬಲಿಷ್ಠರಾಗದ ಹೊರತು ಈ ಪರಿಸ್ಥಿತಿ ಬದಲಾಗುವುದಿಲ್ಲ’ ಎಂದು ತಿಳಿಸಿದರು.

‘ತುರ್ತಾಗಿ ನಮ್ಮ ಸಮುದಾಯಕ್ಕೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ನಿಲಯಗಳು, ಸಮುದಾಯ ಭವನಗಳು ಬೇಕಿದೆ. ಸಮುದಾಯದ ಯುವ ಜನರು ಬಟ್ಟೆ ತೊಳೆಯುವುದು ಬಿಟ್ಟು ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮುದಾಯದ ಏಳಿಗೆಗೆ ಕೈಜೋಡಿಸುವ ಕೆಲಸ ಮಾಡಬೇಕು. ಅಂದಾಗ ಮಾತ್ರ ನಮಗೆ ರಾಜಕೀಯ ಪ್ರಾತಿನಿಧ್ಯ ದೊರೆಯುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರವುಳ್ಳ ಅಲಂಕೃತ ರಥಗಳನ್ನು ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಮಡಿವಾಳ ಮಾಚಿದೇವರ ಸಂಘದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಾಲಕೃಷ್ಣಪ್ಪ, ಮಾಜಿ ಪ್ರಧಾನ ಕಾರ್ಯದರ್ಶಿ ಪುಟ್ಟರಂಗಯ್ಯ, ಜಿಲ್ಲಾ ಘಟಕದ ಅಧ್ಯಕ್ಷೆ ಪದ್ಮಾವತಮ್ಮ ಮುದ್ದುರಾಜ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಸಂಚಾರಿ ಪೊಲೀಸ್ ಠಾಣೆಯ ಎಸ್‌ಐ ಎಂ.ವೇಣುಗೋಪಾಲ್, ನಂದಮೂರಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಕುಮಾರ್, ಮುಖಂಡರಾದ ಎ.ವಿ.ಬೈರೇಗೌಡ, ಡಾ.ಪ್ರಸಾದ್, ನಾರಾಯಣಸ್ವಾಮಿ, ದಿನೇಶ್, ವೇಣು, ಮುನಿನಾರಾಯಣ, ಆರ್.ರಾಜಶೇಖರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.