ADVERTISEMENT

ಸರ್ಕಾರದ ನಿಯಮದಡಿ ಸಮಾಜ ಸೇವೆ ಮಾಡಿ: ಶಾಸಕ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 6:45 IST
Last Updated 10 ಜುಲೈ 2017, 6:45 IST

ಶಿಡ್ಲಘಟ್ಟ: ‘ಕ್ಷೇತ್ರದಲ್ಲಿ ಸಮಾಜಮುಖಿ ಕೆಲಸ ಮಾಡುವ ಸಮಾಜ ಸೇವಕರು ಅಥವಾ ಚಾರಿಟೆಬಲ್ ಟ್ರಸ್ಟ್‌ಗಳ  ಕೆಲಸಗಳಿಗೆ ನನ್ನ ವಿರೋಧವಿಲ್ಲ. ಅವರು ಮಾಡುವ ಕೆಲಸಗಳು ಜನರಿಗೆ ತಲುಪಬೇಕಾದರೆ  ಸರ್ಕಾರದ ನೀತಿ, ನಿಯಮಾನುಸಾರ ಮಾಡಬೇಕು’ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರ,‘ಯಾವುದೇ  ರಾಜಕೀಯ ಪಕ್ಷ, ಟ್ರಸ್ಟ್ ಮತ್ತು ಖಾಸಗಿ ವ್ಯಕ್ತಿಗಳು ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ಉಚಿತವಾಗಿ ನೀಡಬೇಕಾದರೆ ಆ ವಾಹನವನ್ನು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರ ಹೆಸರಿಗೆ ನೋಂದಣಿ ಮಾಡಿಸಬೇಕು  ಎಂದು ಹೇಳಿದ್ದೇನೆ ಹೊರತು  ಸಾಮಾಜಿಕ ಸೇವೆಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ’ ಎಂದರು.

‘ಎಚ್.ಡಿ.ದೇವೆಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾ ಟ್ರಸ್ಟ್  ಉಚಿತವಾಗಿ ಅಂಬುಲೆನ್ಸ್ ಸೇವೆ ಆರಂಭಿಸಿದರೆ  ಯಾವುದೇ ತಕರಾರಿಲ್ಲ. ಒಂದು ವೇಳೆ ಅದನ್ನು ಸರ್ಕಾರಿ ಆಸ್ಪತ್ರೆಗೆ ನೀಡಬೇಕಾದಲ್ಲಿ ಸರ್ಕಾರಿ ನಿಯಮಾನುಸಾರ ವಾಹನ ನೀಡಬೇಕು. ವಾಹನದ ಮೇಲೆ ಯಾವುದೇ ವ್ಯಕ್ತಿಯ ಭಾವಚಿತ್ರ, ಟ್ರಸ್ಟ್‌ ಹೆಸರು, ಪಕ್ಷದ ಚಿಹ್ನೆ   ಇರಬಾರದು’ ಎಂದರು. ‘ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೂ ಮಾಹಿತಿ ನೀಡಿದ್ದು ಮುಂ ದಿನ ದಿನಗಳಲ್ಲಿ  ಅವರ ತೀರ್ಮಾನದಂತೆ ಮುಂದುವರಿಯುತ್ತೇನೆ’ ಎಂದರು.

ADVERTISEMENT

‘ಜುಲೈ 2ರಂದ ಜಯ ಪ್ರಕಾಶ್ ನಾರಾಯಣ್ ಸೇವಾ ಟ್ರಸ್ಟ್ ವತಿಯಿಂದ ಸಾದಲಿ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ಆಂಬುಲೆನ್ಸ್ ನೀಡಲಾಗಿತ್ತು. ತಾಲ್ಲೂಕು ಆರೋಗ್ಯಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಖಾಸಗಿ ವ್ಯಕ್ತಿಗಳು ಅಥವಾ, ಚಾರಿಟೆಬಲ್ ಟ್ರಸ್ಟ್  ನೀಡುವ ಆಂಬುಲೆನ್ಸ್ ಗಳನ್ನು ಸರ್ಕಾರದ ಆದೇಶದಂತೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆಯೇ? ಇವ್ಯಾವುದು ಇಲ್ಲದೇ ತಾವು ಯಾವ ರೀತಿ ವಾಹನ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದೆ.

ಇದಕ್ಕೆ ತಾಲ್ಲೂಕು ಆರೋಗ್ಯಾಧಿಕಾರಿ  ವಿವಿಧ ಪ್ರಾಥಮಿಕ ಕೇಂದ್ರಗಳ ವೈದ್ಯರಿಗೆ ಪತ್ರ ಮುಖೇನ ನಿರ್ದೇಶನ ನೀಡಿದ್ದು ಅದರಲ್ಲಿ ಸರ್ಕಾರದ ಆದೇಶ ಎನ್ನುವುದರ ಬದಲಿಗೆ ಶಾಸಕರ ಆದೇಶ ಎಂದು ನಮೂದಿಸಿದ್ದಾರೆ. ಇದು  ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿ ದೆಯೇ ಹೊರತು ಇದರಲ್ಲಿ ನನ್ನ ತಪ್ಪೇನೂ ಇಲ್ಲ’ ಎಂದರು. ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷಾ, ಸ್ಥಾಯಿಸಮಿತಿ ಅದ್ಯಕ್ಷ ಪಿ.ಕೆ.ಕಿಷನ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಆಶ್ವತ್ಥ ನಾರಾಯಣ ಇದ್ದರು.

***

ಬಿ ಫಾರಂ ನನಗೆ ಖಚಿತ
‘ಮುಂದಿನ ಚುನಾವಣೆಯಲ್ಲಿ ಪಕ್ಷದ ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಭರವಸೆ ವರಿಷ್ಠರಿಂದ ದೊರೆತಿದೆ.  ಬಿ ಫಾರಂ ಕುರಿತಂತೆ ಗೊಂದಲವಿಲ್ಲ’ ಎಂದು ಎಂ.ರಾಜಣ್ಣ ತಿಳಿಸಿದರು. ‘ಬಿ.ಎನ್.ರವಿಕುಮಾರ್ ಹಾಗೂ ನಮ್ಮ ನಡುವೆ ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಲ್ಲ. ನಾಲ್ಕೈದು ತಿಂಗಳಿಂದ ಅವರ ಕಾರ್ಯ ವೈಖರಿ ಬದಲಾಗಿದೆ. ಅವರ ಟ್ರಸ್ಟ್‌ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸದೇ ಇದ್ದ ಕಾರಣ ನಾನು ಭಾಗವಹಿಸಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.