ADVERTISEMENT

ಸೆಪ್ಟೆಂಬರ್ ಒಳಗೆ ಅರ್ಜಿ ವಿಲೇವಾರಿ ಮಾಡಿ

​ಪ್ರಜಾವಾಣಿ ವಾರ್ತೆ
Published 18 ಮೇ 2017, 5:27 IST
Last Updated 18 ಮೇ 2017, 5:27 IST

ಚಿಕ್ಕಬಳ್ಳಾಪುರ: ‘ತಾಲ್ಲೂಕಿನಲ್ಲಿ ಬಾಕಿ ಇರುವ ಬಗರ್ ಹುಕುಂ ಸಾಗುವಳಿ ಅರ್ಜಿಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ವಿಲೇವಾರಿ ಮಾಡಿ, ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಲು ಕ್ರಮಕೈಗೊಳ್ಳಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಕಚೇರಿಯಲ್ಲಿ ಬುಧವಾರ ನಡೆದ ಬಗರ್ ಹುಕುಂ ಸಾಗುವಳಿ ಸಮಿತಿ ಸಭೆಯಲ್ಲಿ ಮಂಡಿಕಲ್ ಹಾಗೂ ಕಸಬಾ ಹೋಬಳಿಗಳ 29 ಕಡತಗಳನ್ನು ಇತ್ಯರ್ಥಗೊಳಿಸಿ, 69 ಫಲಾನುಭವಿಗಳಿಗೆ ಸುಮಾರು 135 ಎಕರೆ ಭೂಮಿ ಮಂಜೂರು ಮಾಡಿದ ಬಳಿಕ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ 4,000 ಅರ್ಜಿಗಳು ಬಾಕಿ ಇವೆ. ವಾರಕ್ಕೆ ಕನಿಷ್ಠ 200 ಅರ್ಜಿಗಳಂತೆ ಮೂರು ಹಂತದಲ್ಲಿ ವಿಲೇವಾರಿ ಕೆಲಸ ಮಾಡಬೇಕು. ಒಂದೊಂದು ತಿಂಗಳಿಗೆ ಒಂದು ಹೋಬಳಿಯಂತೆ ಸೆಪ್ಟೆಂಬರ್ ಅಂತ್ಯದೊಳಗೆ ಎಲ್ಲಾ ಅರ್ಜಿಗಳನ್ನು ಇತ್ಯರ್ಥಪಡಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಆದ್ಯತೆ ಮೆರೆಗೆ ಭೂಮಿ ಮಂಜೂರು ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಅಧಿಕಾರಿಗಳು ಅರ್ಜಿ ಹಾಕಿಕೊಂಡ ರೈತ ಸಾಗುವಳಿ ಮಾಡುತ್ತಿರುವ ಭೂಮಿಗೆ ಭೇಟಿ ಪರಿಶೀಲನೆ ಮಾಡಿ ಸರ್ಕಾರಿ ಭೂಮಿ ಮಂಜೂರು ಮಾಡಲು ಆತ ಅರ್ಹ ಫಲಾನುಭವಿಯೇ ಎಂಬುದು ತಿಳಿದುಕೊಳ್ಳಬೇಕು. ನಾನು ಕೂಡ ಕೆಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ’ ಎಂದು ತಿಳಿಸಿದರು.

‘ರೈತರನ್ನು ರಿಯಲ್ ಎಸ್ಟೇಟ್ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ತಪ್ಪಿಸುವ ಉದ್ದೇಶದಿಂದ ಸರ್ಕಾರ ಈಗಿರುವ ನಿಯಮವನ್ನು ಪರಿಷ್ಕರಣೆ ಮಾಡಿದೆ. ಹೊಸ ನಿಯಮಾವಳಿಗಳ ಪ್ರಕಾರ ಬಗರ್ ಹುಕುಂ ಸಾಗುವಳಿಯಲ್ಲಿ ಮಂಜೂರಾದ ಭೂಮಿಯನ್ನು ರೈತ 25 ವರ್ಷಗಳ ವರೆಗೆ ಮಾರಾಟ ಅಥವಾ ಪರಭಾರೆ ಮಾಡಲಾಗದು’ ಎಂದರು.

ಸಮಿತಿ ಸದಸ್ಯ ಸುಬ್ಬರಾಯಪ್ಪ ಮಾತನಾಡಿ, ‘ಸಮಿತಿ ಸಭೆ ನಡೆಸುವ ದಿನಕ್ಕೆ ಎರಡ್ಮೂರು ದಿನಗಳ ಮುಂಚೆ ಕಂದಾಯ ಇಲಾಖೆ ಅಧಿಕಾರಿಗಳು ಫಲಾನುಭವಿಗಳ ಪಟ್ಟಿಯನ್ನು ಸದಸ್ಯರಿಗೆ ನೀಡಿದರೆ ಅವರು ಅರ್ಹರೋ, ಅಲ್ಲವೋ ಎಂದು ಪತ್ತೆ ಮಾಡಲು ಅನುಕೂಲವಾಗುತ್ತದೆ’ ಎಂದರು.

ಸಮಿತಿ ಸದಸ್ಯರಾದ ನಂದಿ ಮುನಿಸ್ವಾಮಿ, ಮುಸ್ಟೂರು ನಾರಾಯಣಮ್ಮ ಹಾಗೂ ತಹಶೀಲ್ದಾರ್ ನರಸಿಂಹಮೂರ್ತಿ ಸಭೆಯಲ್ಲಿ ಹಾಜರಿದ್ದರು.

**

ಸಾಗುವಳಿ ಚೀಟಿ ವಿತರಣೆಯಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಅಧಿಕಾರಿಗಳು ಸಂಶಯಕ್ಕೆ ಎಡೆ ಮಾಡಿಕೊಡದಂತೆ ಕೆಲಸ ಮಾಡಬೇಕು.
-ಡಾ.ಕೆ.ಸುಧಾಕರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.