ADVERTISEMENT

ಹೊರ ರಾಜ್ಯಗಳಲ್ಲಿ ಮಾವು ಮೇಳ

ಮಾವು ಬೆಳೆಗಾರರ ಅಧ್ಯಯನ ಪ್ರವಾಸಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 5:50 IST
Last Updated 22 ಮಾರ್ಚ್ 2017, 5:50 IST

ಚಿಕ್ಕಬಳ್ಳಾಪುರ: ‘ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಹೊರ ರಾಜ್ಯಗಳಲ್ಲಿ ಕೂಡ ಮಾವು ಮೇಳ ಆಯೋಜಿಸಲು ಚಿಂತನೆ ನಡೆಸಿದ್ದೇವೆ’ ಎಂದು ನಿಗಮದ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಹೇಳಿದರು.

ತಾಲ್ಲೂಕಿನ ನಂದಿ ಕ್ರಾಸ್ ಬಳಿ ಇರುವ ತೋಟಗಾರಿಕಾ ಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಾವು ಬೆಳೆಗಾರರ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈವರೆಗೆ ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ಮಾತ್ರ ಮಾವು ಮೇಳ ಆಯೋಜಿಸುತ್ತ ಬರಲಾಗುತ್ತಿದ್ದು, ಇದರಿಂದಾಗಿ ದೂರದ ಪ್ರದೇಶಗಳ ನಾಗರಿಕರಿಗೆ ಮೇಳದಲ್ಲಿ ಭಾಗವಹಿಸಲು ಕಷ್ಟವಾಗುತ್ತಿತ್ತು. ಅದರಿಂದಾಗಿ ಈ ವರ್ಷದಿಂದ ಬೆಂಗಳೂರಿನಲ್ಲಿ 20 ಕಡೆಗಳಲ್ಲಿ ಮೇಳ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಕಳೆದ ವರ್ಷ ಗೋವಾದಲ್ಲಿ ಮಾವು ಮೇಳ ಏರ್ಪಡಿಸಲಾಗಿತ್ತಾದರೂ ವ್ಯವಸ್ಥೆ ಅಚ್ಚುಕಟ್ಟಾಗಿರಲಿಲ್ಲ. ಈ ವರ್ಷ ಗೋವಾದಲ್ಲಿ 10 ರಿಂದ 15 ಮಳಿಗೆ ಸ್ಥಾಪಿಸಿ ವ್ಯವಸ್ಥಿತವಾಗಿ ಮೇಳ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳ ಲಾಗುತ್ತಿದೆ. ಜತೆಗೆ ಕೇರಳ, ನವ ದೆಹಲಿಯಲ್ಲಿ ಕೂಡ ಮೇಳ ಆಯೋ ಜಿಸಲು ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಮಾರ್ಚ್‌ 24ರಂದು ನಡೆಯುವ ರೈತರ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳ ಲಾಗುತ್ತದೆ’ ಎಂದರು.

‘ಈ ಅಧ್ಯಯನ ಪ್ರವಾಸ ಐದು ದಿನಗಳ ಕಾಲ ನಡೆಯಲಿದೆ. ಇದರಲ್ಲಿ 47 ಮಾವು ಬೆಳೆಗಾರರು ಧಾರವಾಡ, ಮಹಾರಾಷ್ಟ್ರದ ಕೊಲ್ಹಾಪುರ, ದಾಪೋಲಿ, ದೇವಘಡ್, ವೆಂಗ್ರುಲ, ಪಣಜಿಗೆ ತೆರಳಿ ಮಾವು ಬೆಳೆ ವಿಧಾನಗಳ ಕುರಿತು ಅಧ್ಯಯನ ನಡೆಸಲಿದ್ದಾರೆ’ ಎಂದು ಹೇಳಿದರು.

ಪ್ರವಾಸಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಎಪಿಎಂಸಿ ಅಧ್ಯಕ್ಷ ಗೋವಿಂದಸ್ವಾಮಿ, ಉಪಾಧ್ಯಕ್ಷ ವೆಂಕಟಕೃಷ್ಣಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ, ಮಾವು ಬೆಳೆಗಾರರ ಸಂಘ ಅಧ್ಯಕ್ಷ ಎನ್.ವಿ. ರಾಮಚಂದ್ರ ಚೆಟ್ಟಿ, ಮುಖಂಡರಾದ ಕೃಷ್ಣಮೂರ್ತಿ, ಶ್ರೀನಿವಾಸ್, ಮಾವು ಅಭಿವೃದ್ಧಿ ನಿಗಮದ ಎಂಡಿ ಕದಿರೇಗೌಡ, ಬಿ. ರಘು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.