ADVERTISEMENT

ಅನುಕಂಪ ಬೇಡ, ಸಮಾನತೆ ಬೇಕು

‘ವಿಶ್ವ ಅಂಗವಿಕಲರ ದಿನಾಚರಣೆ’ ಅಂಗವಾಗಿ ಅಂಗವಿಕಲರಿಂದ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 6:30 IST
Last Updated 1 ಜನವರಿ 2018, 6:30 IST
ತ್ರಿಚಕ್ರ ವಾಹನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿದ  ಅಂಗವಿಕಲರು
ತ್ರಿಚಕ್ರ ವಾಹನಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿದ ಅಂಗವಿಕಲರು   

ಚಿಕ್ಕಬಳ್ಳಾಪುರ: ‘ವಿಶ್ವ ಅಂಗವಿಕಲರ ದಿನಾಚರಣೆ’ ಅಂಗವಾಗಿ ಕರ್ನಾಟಕ ಅಂಗವಿಕಲರ ಸಂಘಟನೆ ವತಿಯಿಂದ ನಗರದಲ್ಲಿ ಭಾನುವಾರ ರ‍್ಯಾಲಿ ನಡೆಸಲಾಯಿತು.

ನಗರದ ಎಂ.ಜಿ.ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ತ್ರಿಚಕ್ರ ವಾಹನಗಳಲ್ಲಿ ಅಂಗವಿಕಲರು ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಕಾರ್ಯದರ್ಶಿ ಉಷಾ ಕಿರಣ್, ‘ಅಂಗವೈಕಲ್ಯ ಹೊಂದಿದ ಮಾತ್ರಕ್ಕೆ ಯಾರೂ ದೃತಿಗೆಡಬಾರದು. ಮುನ್ನುಗ್ಗಿ ಕೆಲಸ ಮಾಡುವ ಛಲ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಅಂಗವಿಕಲರನ್ನು ಅನುಕಂಪದಿಂದ ನೋಡುವ ಬದಲು ಎಲ್ಲರಿಗೂ ಸಮಾನ ಅವಕಾಶ ಕೊಡಿ. ಎಲ್ಲರಲ್ಲೂ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ. ಅದನ್ನು ಹೊರ ತರಲು ಸರ್ಕಾರ ಪ್ರೋತ್ಸಾಹ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರು ಅಂಗವಿಕಲರನ್ನು ಗೌರವಿಸಲು ಮುಂದಾಗಬೇಕು. ಸಾಮಾನ್ಯರಂತೆ ಬಾಳಿ ಬದುಕಲು ಅಂಗವಿಕರ ಕಷ್ಟಗಳಿಗೆ ಪ್ರತಿಯೊಬ್ಬರೂ ನೆರವಾಗಬೇಕು. ಅಂಗವಿಕರನ್ನು ಹೀಯಾಳಿಸುವ ಮನೋಭಾವ ಬಿಡಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಎಲ್ಲರೂ ಕೈ ಜೋಡಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಮುಂದಾಗೋಣ’ ಎಂದು ಹೇಳಿದರು.

‘ಸರ್ಕಾರ ಅಂಗವಿಕರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸ್ವಾವಲಂಬಿ ಜೀವನ ನಡೆಸಲು ಸ್ವಯಂ ಉದ್ಯೋಗ ಕಲ್ಪಿಸಬೇಕು. ಪ್ರತಿಯೊಬ್ಬ ಮಗುವಿಗೂ ಪೊಲಿಯೊ ಲಸಿಕೆ ಹಾಕಿಸಬೇಕು’ ಎಂದರು.

ಸಂಘಟನೆ ಅಧ್ಯಕ್ಷ ಕೆ.ಜಿ. ಸುಬ್ರಮಣ್ಯಂ, ಪದಾಧಿಕಾರಿಗಳಾದ ಪಿ.ವಿ ಕುಶಕುಮಾರ, ಕೆ.ಸಿ ಮಮತ, ಕೆ.ಬಿ.ಸುಶೀಲಮ್ಮ, ಬಿ.ಎನ್ ನರಸಿಂಹಮೂರ್ತಿ, ಆರ್. ಚಂದ್ರಶೇಖರ್‌, ಮಂಜುನಾಥ್‌, ನರಸಿಂಹಮೂರ್ತಿ, ಕೃಷ್ಣಪ್ಪ, ಸಂತೋಷ್, ಗಂಗಾಧರ ಜಾಥಾದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.