ADVERTISEMENT

ಭೂಮಿಗೆ ಇಳಿದು ಬಂದ ಸ್ವರ್ಗಲೋಕ

ಯುವ ಕಲಾವಿದರ ಪ್ರತಿಭಾ ಪ್ರದರ್ಶನ; ಕದ್ರಿ ಗೋಪಾಲನಾಥನ್‌ ಸ್ಯಾಕ್ಸೋಪೋನ್ ವಾದನಕ್ಕೆ ಮನಸೋತ ಜನ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 13:25 IST
Last Updated 26 ಜುಲೈ 2018, 13:25 IST
ಕೈವಾರದ ಸಂಗೀತೋತ್ಸವದಲ್ಲಿ ಭರತನಾಟ್ಯದ ದೃಶ್ಯ.
ಕೈವಾರದ ಸಂಗೀತೋತ್ಸವದಲ್ಲಿ ಭರತನಾಟ್ಯದ ದೃಶ್ಯ.   

ಚಿಂತಾಮಣಿ: ಕೈವಾರದಲ್ಲಿ ನಡೆಯುತ್ತಿರುವ ಗುರುಪೂಜಾ ಸಂಗೀತೋತ್ಸವದಲ್ಲಿ ಎರಡನೇ ದಿನವಾದ ಗುರುವಾರವೂ ಸಹ ಸಾವಿರಾರು ಜನ ಸಂಗೀತ ಪ್ರಿಯರು, ವಿದ್ವಾಂಸರು ಭಾಗವಹಿಸಿದ್ದರು.

ಗ್ರಾಮದ ಬೀದಿ ಬೀದಿಯಲ್ಲೂ ಸಂಗೀತದ ರಸದೌತಣವನ್ನು ಜನರು ಕುಳಿತಲ್ಲೇ ಸವಿಯುತ್ತಿದ್ದರು. ಉದಯೋನ್ಮುಖ ಸಂಗೀತಗಾರರಿಗೆ ಹಿರಿಯ ಸಂಗೀತಗಾರರನ್ನು ಕಂಡು ಹಾಗೂ ಅವರ ಗಾಯನವನ್ನು ಕೇಳಿ ಗಾನಗಂಧರ್ವ ಲೋಕದಲ್ಲಿ ವಿಹರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಂಗೀತೋತ್ಸವದ ಸಭಾಂಗಣ ಹಾಗೂ ಹೊರಗಡೆ ಜನಜಂಗುಳಿ ತುಂಬಿ ತುಳುಕುತ್ತಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಂಗೀತದ ಲಹರಿ ನಿರಂತರವಾಗಿ ಹರಿಯುತ್ತಿತ್ತು.

ADVERTISEMENT

ಸಂಜೆ ಚೆನ್ನೈನ ಸಿಕ್ಕಿಲ್ ಗುರುಚರಣ್ ಅವರ ಸಂಗೀತ ಕಛೇರಿ ಶೋತೃಗಳನ್ನು ಮಂತ್ರಮುಗ್ದರನ್ನಾಗಿ ಮಾಡಿತ್ತು. ಲಯಬದ್ಧವಾಗಿ ನುಡಿಸುತ್ತಿದ್ದ ಎಲ್.ರಾಮಕೃಷ್ಣನ್ ಪಿಟೀಲು, ಸುಮೇಶ್ ನಾರಾಯಣನ್ ಮೃದಂಗ, ರಾಜಶೇಖರ್ ಮೋರ್ಸಿಂಗ್‌ಗೆ ಸಂಗೀತಪ್ರಿಯರು ಮನಸೋತರು. ಚೆನ್ನೈನ ಶಶಾಂಕ್ ಕೊಳಲು ವಾದನ ಶೋತೃಗಳು ತಮ್ಮನ್ನು ತಾವೇ ಮರೆತು ಆಲಾಪನೆ ಮಾಡುತ್ತಿದ್ದರು. ಅವರ ಕೊಳಲುವಾದನಕ್ಕೆ ನಿಶಾಂತ್ ಚಂದ್ರನ್ ಪಿಟೀಲು, ಜಯಚಂದ್ರರಾವ್ ಮೃದಂಗ, ಗಿರಿಧರ್ ಉಡುಪ ಘಟಂ ಸಾಥ್ ನೀಡಿದವು.

ಕದ್ರಿ ಗೋಪಾಲನಾಥನ್‌ ಅವರ ಸ್ಯಾಕ್ಸೋಪೋನ್ ವಾದನಕ್ಕೆ ನೆರೆದಿದ್ದ ಜನರೆಲ್ಲ ಸಮ್ಮೋಹನಗೊಂಡಿದ್ದರು. ಅವರಿಗೆ ಪಕ್ಕವಾದ್ಯಗಳಲ್ಲಿ ಎ.ವಿ.ರವಿ ಪಿಟೀಲು, ಪತ್ರಿ ಸತೀಶ್‌ಕುಮಾರ್‌ ಮೃದಂಗ, ರಾಜೇಂದ್ರ ನಾಕೋಡ್ ತಬಲ ನುಡಿಸುವ ಮೂಲಕ ತಮ್ಮ ಪ್ರತಿಭೆ ಮೆರೆದರು.

ಚೆನ್ನೈನ ಯು.ರಾಜೇಶ್ ಅವರ ಮ್ಯಾಂಡೋಲಿನ್‌ ವಾದನ, ವಿಜಯವಾಡದ ರಾಮಲಿಂಗಶಾಸ್ತ್ರೀ ನೇತೃತ್ವದ ನರ್ತನ ಶಾಲಾ ತಂಡದ ನೃತ್ಯ ರೂಪಕ ಸಂಗೀತಪ್ರಿಯರ ಮನದಲ್ಲಿ ಗಟ್ಟಿಯಾಗಿ ಉಳಿಯುವಂತೆ ಮಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.