ADVERTISEMENT

ಅಭಿವೃದ್ಧಿ ಗುರಿ; ನಿಭಾವಣೆ ಸವಾಲು

ಕಾಫಿನಾಡು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ ಸಿ.ಟಿ.ರವಿ

ಬಿ.ಜೆ.ಧನ್ಯಪ್ರಸಾದ್
Published 25 ಮೇ 2018, 7:55 IST
Last Updated 25 ಮೇ 2018, 7:55 IST

ಚಿಕ್ಕಮಗಳೂರು: ಜಿಲ್ಲಾ ಕೇಂದ್ರವನ್ನು ಒಳಗೊಂಡಿರುವ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ವಿದ್ಯಾಲಯ ಆರಂಭ, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವುದು, ಬಯಲುಸೀಮೆಯ ಕೆರೆಗಳನ್ನು ತುಂಬಿಸಲು ನೀರಾವರಿ ಸೌಲಭ್ಯ, ಕರಗಡ ನೀರಾವರಿ 2ನೇ ಹಂತ ಅನುಷ್ಠಾನ, ಪ್ರವಾಸೋದ್ಯಮ ಸುಸ್ಥಿರ ಅಭಿವೃದ್ಧಿಗೆ ಶಾಸಕರು ಮುಂಚೂಣಿಯಲ್ಲಿ ಗಮನ ಹರಿಸಬೇಕಿದೆ.

ಲಕ್ಯಾ, ಸಖರಾಯಪಟ್ಟಣ, ಕಸಬಾ ಹೋಬಳಿಯ 63 ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಅನುಮೋದನೆ ಪಡೆದು ಯೋಜನೆ ಅನುಷ್ಠಾನಗೊಳಿಸುವುದಕ್ಕೆ ಆದ್ಯತೆ ನೀಡಬೇಕಿದೆ. ಜಲಪಾತ, ಭದ್ರಾ ಜಲಾಶಯದಿಂದ ನೀರು ಹರಿಸಿ ಕೆರೆಗಳನ್ನು ತುಂಬಿಸುವುದಾಗಿ ನೀಡಿರುವ ಭರವಸೆಯನ್ನು ಸಾಕಾರಗೊಳಿಸಬೇಕು ಎಂಬುದು ಈ ಭಾಗದ ಜನರ ಕೋರಿಕೆ.

ಕರಗಡ ಏತ ನೀರಾವರಿ ಯೋಜನೆಯ ಎರಡನೇ ಹಂತದ ಕಾಮಗಾರಿ ಅನುಷ್ಠಾನಕ್ಕೆ ಗಮನ ಹರಿಸಬೇಕಿದೆ. ಕಳಾಸಪುರ ಭಾಗದ ಕೆರೆಗಳಿಗೆ ಸರಾಗವಾಗಿ ನೀರು ಹರಿಯುವಂತೆ ಮಾಡುವ ಸವಾಲು ಶಾಸಕ ಸಿ.ಟಿ.ರವಿ ಅವರ ಹೆಗಲಿಗೆ ಇದೆ. ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂಬುದು ಗ್ರಾಮಸ್ಥರ ಮನವಿ.

ADVERTISEMENT

ಕಡೂರು– ಚಿಕ್ಕಮಗಳೂರು– ಮೂಡಿಗೆರೆ ರಸ್ತೆಗೆ ಅನುದಾನ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ತ್ವರಿತವಾಗಿ ಕಾಮಗಾರಿ ಆರಂಭಿಸಬೇಕಿದೆ. ನಗರದ ಅಮೃತ್‌ ಯೋಜನೆ (24x7 ಕುಡಿಯುವ ನೀರು), ಒಳಚರಂಡಿ (ಯುಜಿಡಿ) ನಿರ್ಮಾಣ ಯೋಜನೆಗಳ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಮುಗಿಸಬೇಕಿದೆ.

ಚಿಕ್ಕಮಗಳೂರಿಗೆ ಮಂಜೂರಾಗಿರುವ ವೈದ್ಯಕೀಯ ವಿದ್ಯಾಲಯ, ಎಂಜಿನಿಯರಿಂಗ್‌ ಕಾಲೇಜು ಆರಂಭಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಿದೆ. ಅನುದಾನ ಮಂಜೂರು ಮಾಡಿಸಿ ಕಟ್ಟಡಗಳ ನಿರ್ಮಿಸುವ ಕೆಲಸ ಆಗಬೇಕಿದೆ. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವಕ್ಕೆ ಅನುಮೋದನೆ ಪಡೆದು, ಈ ಆಸ್ಪತ್ರೆಯನ್ನು ಅತ್ಯಾಧನಿಕ ಸೌಲಭ್ಯಗಳ ಆಸ್ಪತ್ರೆಯಾಗಿಸಬೇಕಿದೆ. ಪ್ರಣಾಳಿಕೆಗಳಲ್ಲೂ ಈ ವಿಷಯಗಳನ್ನು ಪ್ರಸ್ತಾಪಿಸಿದ್ದು, ಪ್ರಾಶಸ್ತ್ಯ ನೀಡಿ ಇವುಗಳನ್ನು ಈಡೇರಿಸಬೇಕು ಎಂಬುದು ಜನರ ಆಶಯ.

ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಗಮನ ಹರಿಸಬೇಕು. ಜಿಲ್ಲೆಯಲ್ಲಿ ಪ್ರತ್ಯೇಕ ಹಾಲಿನ ಡೇರಿ ಸ್ಥಾಪಿಸಬೇಕು. ಉದ್ಯೋಗಕ್ಕಾಗಿ ಯುವಜನರು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಚಿತ್ತ ಹರಿಸಬೇಕು. ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು ಎಂಬುದು ನಾಗರಿಕರ ಆಶಯವಾಗಿದೆ.

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ನಗರದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಅನುಮೋದನೆ ಪಡೆದು ಕಾಮಗಾರಿ ಆರಂಭಿಸಬೇಕು. ಗಿರಿಶ್ರೇಣಿ ಮಾರ್ಗದಲ್ಲಿ ಮಿನಿ ಬಸ್‌ ಸೌಲಭ್ಯ ಕಲ್ಪಿಸಬೇಕು. ನಗರದಲ್ಲಿ ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು. ಪ್ರವಾಸೋದ್ಯಮ ಸುಸ್ಥಿರ ಅಭಿವೃದ್ಧಿಗೆ ಕ್ರಮ ವಹಿಸಬೇಕು. ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣ ಮಾಡಬೇಕು ಎಂಬುದು ಜನರ ಒತ್ತಾಸೆಗಳಾಗಿವೆ.

ಕಾರ್ಮಿಕರ ಅನುಕೂಲ ನಿಟ್ಟಿನಲ್ಲಿ ಜಿಲ್ಲೆಗೆ ಇಎಸ್‌ಐ ಮಂಜೂರು, ಕೃಷಿ ಉತ್ಪನ್ನಗಳ ಅತ್ಯಾಧುನಿಕ ಮಾರುಕಟ್ಟೆ, ಶಿಥಲೀಕರಣ ಘಟಕ ಸ್ಥಾಪಿಸಬೇಕು. ಕಾಫಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ಜಿಲ್ಲೆಯಲ್ಲಿ ಪೆಪ್ಪರ್‌ ಪಾರ್ಕ್‌ ಸ್ಥಾಪಸಿಬೇಕು. ಇವೆಲ್ಲವನ್ನೂ ಸಾಕಾರಗೊಳಿಸಬೇಕು ಎಂಬುದು ಕ್ಷೇತ್ರದ ಜನರ ಬೇಡಿಕೆ.

**
ಪ್ರವಾಸೋದ್ಯಮ ಅಭಿವೃದ್ಧಿಗೆ ಮಹಾಯೋಜನೆ ರೂಪಿಸಬೇಕು. ಪರಿಸರಕ್ಕೆ ಧಕ್ಕೆಯಾಗದಂತೆ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕು
– ಶ್ರೀದೇವ್‌ ಹುಲಿಕೆರೆ, ಪರಿಸರವಾದಿ 

**
ನಗರದ ಒಳಚರಂಡಿ ಕಾಮಗಾರಿಗೆ ಇರುವ ಅಡ್ಡಿ ಪರಿಹರಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಅಭಿವೃದ್ಧಿಗೆ ಆದ್ಯತೆ ನೀಡಬೇಕು
ಎಚ್‌.ಎಂ.ರುದ್ರಸ್ವಾಮಿ, ನಿವೃತ್ತ ಡಿಡಿಪಿಯು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.