ADVERTISEMENT

ಕುಕ್ಕಸಮುದ್ರ ಕೆರೆಗೆ ಬೇಕು ಕಾಯಕಲ್ಪ

ಕೆರೆಯಲ್ಲಿ ಶಾಶ್ವತ ನೀರು ನಿಂತರೆ ಚೌಳಹಿರಿಯೂರು, ಹೊಸದುರ್ಗ ಬರಮುಕ್ತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:15 IST
Last Updated 9 ಮಾರ್ಚ್ 2017, 10:15 IST
ಕುಕ್ಕಸಮುದ್ರ ಕೆರೆಗೆ ಬೇಕು ಕಾಯಕಲ್ಪ
ಕುಕ್ಕಸಮುದ್ರ ಕೆರೆಗೆ ಬೇಕು ಕಾಯಕಲ್ಪ   
ಬೀರೂರು: ಇಲ್ಲಿನ ರೈತರಿಗೆ ಕೃಷಿ ಚಟು  ವಟಿಕೆಯ ಜೀವನಾಡಿ ‘ಕುಕ್ಕ ಸಮುದ್ರ’ ಕೆರೆ ಹೂಳು ತುಂಬಿಕೊಂಡು ನೀರಿಲ್ಲದೇ ರೈತರು ಪರಿತಪಿಸುವಂತಾಗಿದೆ. ತರೀಕೆರೆ ತಾಲ್ಲೂಕಿನ ಹಣ್ಣೆ, ಬುಕ್ಕಾಂಬುದಿ, ಶಿವನಿ, ಅಜ್ಜಂಪುರ, ಚನ್ನಗಿರಿ ತಾಲ್ಲೂಕಿನ ಉಬ್ರಾಣಿ, ತಾವರೆಕೆರೆ ಭಾಗಗಳಲ್ಲಿ ಮಳೆ ಸುರಿದರೆ ಹರಿದು ಬರುವ ನೀರಿಗೆ ಕುಕ್ಕಸಮುದ್ರ ಕೆರೆಯೇ ಆಶ್ರಯತಾಣ. 

ಆದರೆ ಕೆರೆಗೆ ಏರಿಯೂ ಇಲ್ಲ, ಬರುವ ನೀರು ಹೆಚ್ಚಾಗುತ್ತಿದ್ದಂತೆ ಕೆರೆಯ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಇರುವ ಕೋಡಿ ಮೂಲಕ ಹರಿದು ಹೋಗಿ ವಾಣಿವಿಲಾಸ ಸಾಗರ ಸೇರುತ್ತದೆ. ಹೂಳಿನಿಂದ ತುಂಬಿರುವ ಕಾರಣ ಹೆಚ್ಚು ನೀರು ಸಂಗ್ರಹವಾಗುವ ಸಾಮರ್ಥ್ಯ ಇಲ್ಲ.

ಇಲ್ಲಿ ನೀರು ತುಂಬಿಕೊಂಡರೆ ಕಲ್ಲಳ್ಳಿ, ಕಲ್ಕೆರೆ, ರಂಗಾಪುರ, ಕುರುಬರಹಳ್ಳಿ, ಎಚ್‌. ತಿಮ್ಮಾಪುರ, ತಾಂಡ್ಯ, ಚೌಳಹಿರಿ ಯೂರು, ಹೊಸದುರ್ಗ, ಗಂಗನಹಳ್ಳಿ, ಮಂಜುನಾಥಪುರ, ಗುಮ್ಮನಹಳ್ಳಿ ಮುಂತಾದ ಕಡೆಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಸಹಸ್ರಾರು ಎಕರೆ ಭೂಮಿ ಯಲ್ಲಿ ಕೃಷಿ ಚಟುವಟಿಕೆಗೆ ಉಪಯೋಗ ವಾಗಲಿದೆ. ಜನ, ಜಾನುವಾರುಗಳ ನೀರಿನ ದಾಹವೂ ತಗ್ಗಲಿದೆ.
 
ಇಲ್ಲಿನ ಕಲ್ಕೆರೆಯಲ್ಲಿ 1895ರ ಹೊತ್ತಿಗೆ ಮೈಸೂರು ಅರಸರ ದೂರದೃಷ್ಟಿಯ ಫಲವಾಗಿ ಸುಮಾರು 1ಸಾವಿರ ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ‘ಕುಕ್ಕಸಮುದ್ರ’ ಕೆರೆ ನೀರಿನಿಂದ ತುಂಬಿದರೆ ಕಾಣಿಸುವುದು ಸಮುದ್ರ ದಂತೆಯೇ. ಚೌಳಹಿರಿಯೂರು, ಕಲ್ಕೆರೆ, ಚಿಕ್ಕಬಳ್ಳೇಕೆರೆ ಗ್ರಾಮ ಪಂಚಾಯಿ ತಿಗಳ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವಿಶಾಲವಾದ ಕೆರೆ ಮಳೆ ಬಂದು ಮೈದುಂಬಿದರೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಅಂತರ್ಜಲ ವೃದ್ಧಿಯಾಗುತ್ತದೆ. ಪಕ್ಕದ ಹೊಸದುರ್ಗ ಪಟ್ಟಣಕ್ಕೆ ಕುಡಿಯುವ ನೀರಿನ ಆಸರೆಯಾಗಿ ಮತ್ತು ಹಿರಿ ಯೂರು ಸಮೀಪದ ವಾಣಿವಿಲಾಸ ಸಾಗರದ ಪ್ರಮುಖ ಆಕರವಾಗಿಯೂ ಕುಕ್ಕಸಮುದ್ರ ಕೆರೆ ಪ್ರಸಿದ್ಧಿ. 
 
ಆದರೆ ಇಂದು ಈ ಕೆರೆ ಹೂಳಿನಿಂದ ತುಂಬಿಹೋಗಿ ನೀರು ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯವನ್ನೇ ಕಳೆದು ಕೊಂಡಿದೆ. ಕುಕ್ಕಸಮುದ್ರ ಕೆರೆಗೆ ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಏತ ನೀರಾವರಿ ಯೋಜನೆಯಿಂದ ನೀರು ಹರಿಸ ಬಹುದಾದ ಅವಕಾಶವಿದೆ, ಆದರೆ ತರೀಕೆರೆ ತಾಲ್ಲೂಕು ಬುಕ್ಕಾಂಬುಧಿಯ ಪರ್ವತರಾಯನಕೆರೆ ತುಂಬಿದ ಕೂಡಲೇ ಮೂಲದಲ್ಲಿ ನೀರು ನಿಲ್ಲಿಸುವ ಕಾರಣ ಇಲ್ಲಿ ನಿರಂತರ ಜಲಸಂಗ್ರಹದ ಅವಕಾಶ ತಪ್ಪಿಹೋಗಿದೆ.
 
ಪರ್ವತರಾಯನ ಕೆರೆಯಿಂದ ಇಲ್ಲಿಗೆ ನೀರು ಹರಿದುಬರುವ ಹಳ್ಳದ ವ್ಯವಸ್ಥೆ ಇದ್ದರೂ ಸುಮಾರು 30 ಕಿ.ಮೀ ದೂರ ಇರುವ ಈ ಕೆರೆಗೆ ನೀರು ಹರಿಸುವುದು ಸಾಧ್ಯವಾಗುವುದಿಲ್ಲ ಎನ್ನುವ ಉದ್ದೇಶದಿಂದ ಇಲ್ಲಿಗೆ ನೀರು ಹರಿಸಲು ಮುಂದಾಗಿಲ್ಲ. ಆದರೆ ಪೈಪ್‌ಲೈನ್‌ ಅಳವಡಿಸಿ ನೀರು ಹರಿಸಲು ಇರುವ ಸಾಧ್ಯತೆ ಬಗ್ಗೆ ಸಣ್ಣ ನೀರಾವರಿ ಇಲಾಖೆ ಗಮನ ಹರಿಸಬೇಕಿದೆ. 
 
ಸದ್ಯ ಭದ್ರಾ ಬಲದಂಡೆ ನಾಲೆ ಮೂಲಕ ಕಾಮಗಾರಿ ನಡೆಸಿ ಚಿತ್ರ ದುರ್ಗಕ್ಕೆ ನೀರು ಪೂರೈಸುವ ಕೆಲಸ ನಡೆ ದಿದ್ದು ಬುಕ್ಕಾಂಬುಧಿ ಮೂಲಕ ಕುಕ್ಕಸಮುದ್ರ ಕೆರೆಗೆ ಹರಿದು ಬರುತ್ತಿದ್ದ ಹಳ್ಳಕ್ಕೆ ಅಡ್ಡಲಾಗಿ ಹೋಗಿರುವ ನಾಲೆ  ಹರಿದು ಬರುವ ನೀರಿಗೆ ತಡೆಗೋಡೆ ನಿರ್ಮಿಸಿದಂತೆ ಆಗಿದೆ. ಇದರಿಂದ ಬರುವ ಮಳೆಗಾಲದಲ್ಲಿಯೂ ಕೆರೆಗೆ ನೀರು ಹರಿದುಬರುವ ಸಾಧ್ಯತೆ ಕಡಿಮೆ ಯಾಗಿದ್ದು, ಮೊದಲೇ ಬರದಿಂದ ಕಂಗೆ ಟ್ಟಿರುವ ಈ ಭಾಗದ ಜನರಿಗೆ ಕುಡಿ ಯುವ ನೀರಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ.
 
‘ಎಲ್ಲದಕ್ಕೂ ಮೊದಲು ಅಂದರೆ ಕೆರೆಗೆ ನೀರು ಹರಿಸುವ ಮುನ್ನ ಈ ವಿಶಾಲಕೆರೆಯ ಏರಿ ಎತ್ತರಿಸುವ ಮತ್ತು ತುರ್ತಾಗಿ ಹೂಳು ಎತ್ತಿಸುವ ಕೆಲಸ ಆದರೆ ಮಾತ್ರ ಕೆರೆಯಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಇಲ್ಲದಿದ್ದರೆ ಎಷ್ಟೇ ನೀರು ಹರಿಸಿ ದರೂ ಹೂಳು ತುಂಬಿ ತಟ್ಟೆಯಂ ತಾಗಿ ರುವ ಕೆರೆಯಲ್ಲಿ ಮಳೆಗಾಲ ಮುಗಿದು ಬೇಸಿಗೆ ಆರಂಭವಾಗುವ ವೇಳೆಗೆ ಸಂಗ್ರಹ ಇರುವುದಿಲ್ಲ. ಇಲ್ಲಿ ನಿರಂತರ ವಾಗಿ ನೀರು ಇದ್ದರೆ ಚೌಳಹಿರಿಯೂರು ಹೋಬಳಿಯಲ್ಲಿ ಮುಂದಿನ 25 ವರ್ಷಗಳವರೆಗೆ ಬರ ಎನ್ನುವುದು ಕಾಲಿ ಡುವುದಿಲ್ಲ’ ಎನ್ನುವುದು ಗ್ರಾಮ ಪಂಚಾಯಿತಿ ಸದಸ್ಯ ಲಿಂಗರಾಜು ಮತ್ತು ರೈತಮುಖಂಡ ಮಲ್ಲೇಗೌಡರ ಅನಿಸಿಕೆ.

ಒಟ್ಟಿನಲ್ಲಿ ಕುಕ್ಕಸಮುದ್ರ ಕೆರೆ ಅಭಿವೃದ್ಧಿಯಾಗುವ ಮೂಲಕ ಬಯಲುಸೀಮೆಯ ಬರದ ಬೇಗೆ ತಗ್ಗಿ ಇಲ್ಲಿನ ಕೃಷಿ, ಕುಡಿಯುವ ನೀರು, ಅಂತರ್ಜಲ ವೃದ್ಧಿಯ ಸಮಸ್ಯೆ ನೀಗಿದರೆ ಅಭಿವೃದ್ಧಿ ಎನ್ನುವುದು ಮರೀಚಿಕೆ ಯಾಗಲಾರದು. ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಲಿ ಎನ್ನುವುದು ಇಲ್ಲಿನ ಜನರ ಆಶಯವೂ ಆಗಿದೆ.
ಎನ್‌.ಸೋಮಶೇಖರ್ 

ಹಲವು ಅನುಕೂಲ
‘ಭದ್ರಾ ಬಲದಂಡೆ ನಾಲೆ ಮೂಲಕ ಕಡೂರು ತಾಲ್ಲೂಕಿನ ಕೆರೆಗಳಿಗೆ ನೀರುಹರಿಸುವ ಯೋಜನೆಯಲ್ಲಿ ಚಿತ್ರದುರ್ಗ ನಾಲೆ ಮೂಲಕ ನೀರು ಪಡೆಯುವ ಫಲಾನುಭವಿ ಪಟ್ಟಿಯಲ್ಲಿ ಕುಕ್ಕಸಮುದ್ರ ಕೆರೆಯೂ ಸೇರ್ಪಡೆ ಯಾಗಿದೆ. ಕೆರೆ ಅಭಿವೃದ್ಧಿಯಾಗದೆ ನೀರು ಹರಿಸುವುದು ಸಾಧುವಲ್ಲ.

ಇಲ್ಲಿ ಸುತ್ತಮುತ್ತಲ ಹಳ್ಳಿಗಳಲ್ಲಿ ಈಗಾಗಲೇ ಅಂತರ್ಜಲ ಕುಸಿದು ಕೊಳವೆಬಾವಿಗಳ ನೀರಿನಲ್ಲಿ ಫ್ಲೋರೈಡ್‌ ಅಂಶ ವಿಪರೀತ ವಾಗಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರಾದ ಪ್ರದೀಪ್‌ ಮತ್ತು ಸಿದ್ದಲಿಂಗಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.