ADVERTISEMENT

ಕುಡಿಯುವ ನೀರು; ಜನವರಿಯಲ್ಲಿ ಅನುದಾನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 8:40 IST
Last Updated 22 ಡಿಸೆಂಬರ್ 2017, 8:40 IST
ಚಿಕ್ಕಮಗಳೂರಿನಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ, ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ ಪಾಲ್ಗೊಂಡಿದ್ದರು.
ಚಿಕ್ಕಮಗಳೂರಿನಲ್ಲಿ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ, ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ ಪಾಲ್ಗೊಂಡಿದ್ದರು.   

ಚಿಕ್ಕಮಗಳೂರು: ಜಿಲ್ಲೆಯ ಕುಡಿಯುವ ನೀರಿನ ನಿರ್ವಹಣೆಗೆ ಜನವರಿ ಮೊದಲ ವಾರದಲ್ಲಿ ₹ 23 ಕೋಟಿ ಅನುದಾನ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೋಷನ್‌ ಬೇಗ್‌ ತಿಳಿಸಿದರು.

ಗುರುವಾರ ನಡೆದ ಕೆಡಿಪಿ ಪ್ರಗತಿಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ‘ಕುಡಿಯುವ ನೀರಿನ ಅನುದಾನದ ಪ್ರಸ್ತಾವ ಪರಿಶೀಲಿಸಲಾಗಿದೆ. ಈ ನಿಟ್ಟಿನಲ್ಲಿ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗಿದೆ’ ಎಂದು ಸಭೆಗೆ ತಿಳಿಸಿದರು.

ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಸರ್ಕಾರಕ್ಕೆ ಮನವಿ ಮಾಡಿದರೂ ಅನುದಾನ ಬಿಡುಗಡೆಯಾಗಿಲ್ಲ. ಜಿಲ್ಲೆಯಲ್ಲಿ ನಾಲ್ಕು ಬಹುಗ್ರಾಮ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌.ಚೈತ್ರಶ್ರೀ ಪ್ರಸ್ತಾಪಿಸಿದರು.

ADVERTISEMENT

ಕಡೂರು, ಸಖರಾಯಪಟ್ಟಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಗ್ರಾಮೀಣ ನೀರು ಸರಬರಾಜು ವಿಭಾಗದಲ್ಲಿ ಕೆಲಸ ಮಾಡುವವರಿಗೆ ಒಂಬತ್ತು ತಿಂಗಳಿಂದ ಸಂಭಾವನೆ ನೀಡಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಹೇಳಿದರು.

ಕರಕುಚ್ಚಿ–ಬೇಲೇನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ನೀರಿಗಾಗಿ ತತ್ವಾರ ಹೇಳತೀರದು. ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್‌ ಕೋರಿದರು.

ಕೆಲವೆಡೆ ತಾಂಡ್ಯಾಗಳು, ದಲಿತರ ಕಾಲೊನಿಗಳಿಗೆ ನೀರು ಸರಿಯಾಗಿ ಪೂರೈಸುತ್ತಿಲ್ಲ. ಬಣಕಲ್‌ನಲ್ಲಿ ಕೊಳವೆಬಾವಿಯಲ್ಲಿ ನೀರು ಇದ್ದರೂ, ಪಂಪ್‌ಸೆಟ್‌ ಅಳವಡಿಸಲು ಕ್ರಮ ಕೈಗೊಂಡಿಲ್ಲ. ಕಳಸ ಬಹುಗ್ರಾಮ ಯೋಜನೆ ಮಂಜೂರಿಗೆ ಕ್ರಮವಹಿಸುವ ನಿಟ್ಟಿನಲ್ಲಿ ಎಂಜಿನಿಯರ್‌ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಹೇಳಿದರು.

ಹೊಸದಾಗಿ ಕೊರೆಸಿದ ಕೊಳವೆ ಬಾವಿಗಳಿಗೆ ಹೊಸ ಮೋಟಾರ್‌–ಪಂಪ್‌ಸೆಟ್‌ ತರಲು ಅನುದಾನ, ಅನುಮೋದನೆಗಾಗಿ ಕಾಲಹರಣ ಮಾಡದೆ, ನೀರಿಲ್ಲದ ಕೊಳವೆ ಬಾವಿಗಳಲ್ಲಿನ ಪಂಪ್‌ಸೆಟ್‌ಗಳನ್ನು ತೆಗೆದು ಅಳವಡಿಸಿಕೊಳ್ಳಲು ಕ್ರಮ ವಹಿಸಬೇಕು. ಇದಕ್ಕೆ ಅವಕಾಶ ಇದೆ. ಎಂಜಿನಿಯರ್‌ಗಳು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸಲಹೆ ನೀಡಿದರು.

ಕಳಸ ಕುಡಿಯುವ ನೀರಿನ ಯೋಜನೆಗೆ ಮಂಜೂರಾತಿ ತ್ವರಿತವಾಗಿ ಕ್ರಮ ವಹಿಸಬೇಕು. ಜಿಲ್ಲೆಗೆ ಜ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೂ ಮುನ್ನ ಕ್ರಮ ವಹಿಸಬೇಕು ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಅವರು ಸೂಚಿಸಿದರು.

ಫಾರಂ ನಂ 50, 53ರಲ್ಲಿ 40 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. 1998ರಲ್ಲಿ ಅರ್ಜಿ ಸಲ್ಲಿಕೆ ನಡೆದಿದ್ದು, 2017ರಲ್ಲಿ ವಿಲೇವಾರಿ ನಡೆಯುತ್ತಿದೆ. ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ಈಚೆಗೆ ಕಡತ ಪರಿಶೀಲಿಸಲಾಯಿತು. ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು ಎಂದು ದಾಖಲೆಯೊಂದರಲ್ಲಿ ಭೂಮಾಪಕರೊಬ್ಬರು ಷರಾ ಬರೆದಿರುವುದು ಕಂಡುಬಂತು. ಬಲಾಢ್ಯರ ಕಡತಗಳನ್ನು ಅನುಮೋದನೆ ಮಾಡಲಾಗಿದೆ. ಕಡುಬಡವರಿಗೆ ಅರಣ್ಯ ಇಲಾಖೆ ಅನುಮತಿ ಪಡೆಯುವಂತೆ ಷರಾ ಬರೆಯಲಾಗಿದೆ. ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಶಾಸಕ ಡಿ.ಎನ್‌.ಜೀವರಾಜ್‌ ಆಕ್ರೋಶ ವ್ಯಕ್ತಪಡಿಸಿದರು.

ಭೂಮಾಪಕರಿಗೆ ಷರಾ ಬರೆಯುವ ಅಧಿಕಾರ ಇಲ್ಲ. ಹಾಗೇ ಮಾಡಿದ್ದರೆ ನೋಟಿಸ್‌ ನೀಡಲಾಗುವುದು. ಗೋಮಾಳದಲ್ಲಿ ಜಾಗ ಮಂಜೂರು ಮಾಡಲು ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯುವ ಅಗತ್ಯ ಇಲ್ಲ. ಎಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ ಎಂದು ಶ್ರೀರಂಗಯ್ಯ ತಿಳಿಸಿದರು.

ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್‌ ಹೋಬಳಿಯ ಬಸ್ತಿ ಗ್ರಾಮದ ಬಿ.ಎಸ್‌.ನಾರಾಯಣಗೌಡ ಅವರ ಜಮೀನಿನಲ್ಲಿನ ಕಾಫಿಗಿಡ, ಕರಿಮೆಣಸು ಬಳ್ಳಿಯನ್ನು ಅರಣ್ಯ ಸಿಬ್ಬಂದಿ ಖುಲ್ಲಾಗೊಳಿಸಿದ್ದಾರೆ. ಡಿಎಫ್‌ಒ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಜೀವರಾಜ್‌ ಹೇಳಿದರು.

ಅರಣ್ಯ ಇಲಾಖೆಯವರು ಸುಪ್ರೀಂಕೋರ್ಟ್‌ಗೆ ಡಿ.31ರೊಳಗೆ ತೆರವು ಕಾರ್ಯದ ಅನುಪಾಲನ ವರದಿ ನೀಡಬೇಕಿರುವುದರಿಂದ, ಖುಲ್ಲಾ ಮಾಡಿದ್ದಾರೆ. ನಾರಾಯಣ ಗೌಡರ ಜಮೀನಿನಲ್ಲಿನ ಬೆಳೆ ಹಾಳು ಮಾಡಿದ್ದು ಖಂಡನೀಯ ಎಂದು ರೋಷನ್‌ ಬೇಗ್‌ ಹೇಳಿದರು.

ಮೂಡಿಗೆರೆಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಿಲ್ಲ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಮಣ್ಣ ಬಣಕಲ್‌ ಹೇಳಿದರು.

ತೋಟಗಾರಿಕೆ ವಿದ್ಯಾಲಯಕ್ಕೆ ಹಿಂದೆ ಮಂಜೂರು ಮಾಡಿರುವ ಜಾಗದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗ ಇದೆ. ಈ ನಿಟ್ಟಿನಲ್ಲಿ ವಿದ್ಯಾಲಯದ ಡೀನ್‌, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಕೊಟ್ಟಿಗೆಹಾರದಲ್ಲಿ ಮಸೀದಿ ಸಮೀಪ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ ಎಂದು ಮೋಟಮ್ಮ ಹೇಳಿದರು.

ಅಲ್ಲಿ ಮದ್ಯದಂಗಡಿ ಆರಂಭಿಸಲು ಅನುಮತಿ ನೀಡಿಲ್ಲ ಎಂದು ಅಬಕಾರಿ ಅಧಿಕಾರಿ ತಿಳಿಸಿದರು. ಮದ್ಯದಂಗಡಿಗಳಿಗೆ ಅನುಮತಿ ನೀಡುವಾಗ ಪೊಲೀಸರಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಪಡೆಯಲು ಸೂಚಿಸಿದರೆ ಒಳಿತು ಎಂದು ಅಣ್ಣಾಮಲೈ ಹೇಳಿದರು.

ಎಪಿಎಲ್‌ ಕಾರ್ಡ್‌ಗಳನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಜೀವರಾಜ್‌ ದೂರಿದರು.  ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗೆ 39542 ಅರ್ಜಿಗಳು ಸಲ್ಲಿಕೆಯಾಗಿದ್ದವು. 26,906 ಅನುಮೋದನೆಯಾಗಿವೆ. ಪಡಿತರ ಚೀಟಿಗಳನ್ನು ಅಂಚೆ ಮೂಲಕ ಕಳಿಸಲಾಗುತ್ತಿದೆ. ಈ ತಿಂಗಳ ಅಂತ್ಯದ ಹೊತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿ ತಿಳಿಸಿದರು.

* * 

ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರು, ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಇದೇ 29ರಂದು ಸಭೆ ನಡೆಸಲಾಗುವುದು
ರೋಷನ್‌ ಬೇಗ್‌
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.