ADVERTISEMENT

ಕೊಪ್ಪ:114 ಕಡತಗಳ ವಿಲೇವಾರಿ

ಶೃಂಗೇರಿ ಕ್ಷೇತ್ರ ಅಕ್ರಮ-–ಸಕ್ರಮ ಸಮಿತಿ 14ನೇ ಸಭೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 8:38 IST
Last Updated 17 ಜನವರಿ 2017, 8:38 IST
ಕೊಪ್ಪ:114 ಕಡತಗಳ ವಿಲೇವಾರಿ
ಕೊಪ್ಪ:114 ಕಡತಗಳ ವಿಲೇವಾರಿ   

ಕೊಪ್ಪ: ಅಕ್ರಮ ಸಕ್ರಮಮೀಕರಣ ಯೋಜನೆ ಅನುಷ್ಠಾನಕ್ಕೆ ಸಂಬಂಧ ಪಟ್ಟಂತೆ ಶೃಂಗೇರಿ ಕ್ಷೇತ್ರ ಅಕ್ರಮ ಸಕ್ರಮೀಕರಣ ಸಮಿತಿಯ 14ನೇ ಸಭೆ ಇತ್ತೀಚೆಗೆ ಬಾಳಗಡಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ, ಸಮಿತಿ ಅಧ್ಯಕ್ಷ ಶಾಸಕ ಡಿ.ಎನ್.ಜೀವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.

ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಅರ್ಜಿದಾರರ ಸಮಕ್ಷಮ ನಡೆದ ಸಮಿತಿ ಸಭೆಗೆ 114 ಅಕ್ರಮ ಸಾಗುವಳಿದಾರರ  ಅರ್ಜಿಗಳನ್ನು ಹಾಜರುಪಡಿಸಲಾಯಿತು. ಆ ಪೈಕಿ 58  ಮೊದಲ ಹಂತದ ಪರಿಶೀಲನೆ ನಡೆಸಿ, ಎರಡನೇ ಹಂತದ ಪರಿಶೀಲನೆಗೆ ಕಾಯ್ದಿ ರಿಸಲಾಯಿತು. 56 ಅರ್ಜಿಗಳ ಸ್ಥಿರೀ ಕರಣಕ್ಕೆ ಶಿಫಾರಸು ಮಾಡಲಾಯಿತು.

ಈ ಸಂದರ್ಭದಲ್ಲಿ ಅರ್ಜಿದಾರರ ನ್ನುದ್ದೇಶಿಸಿ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ‘ಯಾವುದೇ ಕಾರಣಕ್ಕೂ ಬೇರೆಯವರ ಸಣ್ಣಪುಟ್ಟ ಒತ್ತುವರಿ ಜಾಗದ ಬೇಲಿ ಕೀಳಿಸುವ ಸಣ್ಣತನಕ್ಕೆ ಕೈಹಾಕಬೇಡಿ. ಅದರಿಂದ ಕಾನೂನು ಸಮಸ್ಯೆ ಎದುರಾಗಿ ಎಲ್ಲ ರೈತರಿಗೂ  ತೊಂದರೆ ಆಗಬಹುದು’ ಎಂದು ಕಿವಿಮಾತು ಹೇಳಿದರು.

‘ಫಲಾನುಭವಿಗಳ ನ್ಯಾಯಯುತ ಅರ್ಜಿಗಳನ್ನು ಪರಿಗಣಿಸಿ ಮಂಜೂರಾತಿ ಪತ್ರ ನೀಡಲಾಗುವುದು. ಈ ಪ್ರಕ್ರಿಯೆ ಯಲ್ಲಿ ಯಾವುದೇ ಭ್ರಷ್ಟಾ ಚಾರಕ್ಕೆ ಆಸ್ಪದ ನೀಡಬಾರದೆಂಬ ಉದ್ದೇಶದಿಂದ ಅರ್ಜಿದಾರರ ಸಮಕ್ಷಮದಲ್ಲೇ ಸಭೆ ಯನ್ನು ಪಾರದರ್ಶಕವಾಗಿ ನಡೆಸಲಾ ಗುತ್ತಿದೆ. ಆದರೂ ಅರ್ಜಿದಾರರಿಂದ ಹಣ ವಸೂಲಾತಿ ನಡೆಯುತ್ತಿದೆಯೆಂಬ ದೂರುಗಳು ಕೇಳಿ ಬರುತ್ತಿವೆ. ಇದನ್ನು ಸಹಿಸಲಾಗದು. ಸಮಿತಿ ಅಧ್ಯಕ್ಷನಾದ ನನಗಾಗಲೀ, ಸದಸ್ಯರಿಗಾಗಲೀ ಯಾರೂ ಹಣ ನೀಡಬೇಕಿಲ್ಲ. ಉಳಿದಂತೆ ಯಾವುದೇ ಪಕ್ಷದ ಪುಢಾರಿಗಳು, ದಲ್ಲಾಳಿಗಳು, ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡಿದರೆ ಸಮಿತಿ ಗಮನಕ್ಕೆ ತನ್ನಿ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ನಮ್ಮ ಅರ್ಜಿಗಳು ಇನ್ನೂ ಪರಿಶೀಲನೆಗೆ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದರೆ ‘ಅರ್ಜಿಯೇ ಇಲ್ಲ ಎನ್ನುತ್ತಿ ದ್ದಾರೆ. ಹಳ್ಳಿಯಿಂದ ಕೆಲಸ ಬಿಟ್ಟು, ಪ್ರಯಾಣಕ್ಕೆ ಹಣ ಖರ್ಚು ಮಾಡಿ ತಾಲ್ಲೂಕು ಕಚೇರಿಗೆ ಬರುವ ನಾವು ತಿಂಗಳುಗಟ್ಟಲೆ ಅಲೆದರೂ ಪ್ರಯೋಜನ ವಾಗುತ್ತಿಲ್ಲ. ನೀವಾದರೂ ನ್ಯಾಯ ಕೊಡಿಸಿ’ ಎಂದು ಕೆಲವು ಅರ್ಜಿದಾರರು ತಮ್ಮ ಗೋಳನ್ನು ಸಮಿತಿ ಮುಂದೆ ತೋಡಿಕೊಂಡರು.

ಇದರಿಂದ ಅಸಮಾಧಾನಗೊಂಡ ಶಾಸಕರು ‘ಬಡವರಿಗೆ ಯಾಕ್ರೀ ತೊಂದರೆ ಕೊಡುತ್ತೀರಿ?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರಲ್ಲದೆ, ‘ಈ ತರಹದ ಆರೋಪ ಗಳು ಇನ್ನು ಮುಂದೆ ಸಮಿತಿ ಗಮನಕ್ಕೆ ಬಂದರೆ ಸಹಿಸುವುದಿಲ್ಲ. ಇವರ ಅರ್ಜಿ ಗಳನ್ನು ಈಗಲೇ ಹುಡುಕಿಸಿ ಮುಂದಿನ ಸಭೆಗೆ ಹಾಜರುಪಡಿಸಿ’ ಎಂದು ತಹಶೀಲ್ದಾರರಿಗೆ ತಾಕೀತು ಮಾಡಿದರು.

ಸಮಿತಿ ಸದಸ್ಯರಾದ ಕೆ.ಜಿ. ಶೋಭಿಂತ್, ಬಿ.ಎಸ್. ಸುಬ್ರಹ್ಮಣ್ಯ, ಸೌಭಾಗ್ಯ ಗೋಪಾಲನ್, ತಹಶೀಲ್ದಾರ್ ಎ.ಎಲ್. ಸ್ವಾಮಿ, ಶಿರಸ್ತೇದಾರ್ ಪ್ರವೀಣ್ ಮುಂತಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.