ADVERTISEMENT

ಖಾಲಿ ತಟ್ಟೆ ಬಾರಿಸಿ ಪ್ರತಿಭಟನಾ ಪ್ರದರ್ಶನ

ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:20 IST
Last Updated 10 ಜನವರಿ 2017, 7:20 IST
ಚಿಕ್ಕಮಗಳೂರು: ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ಕ್ರಮದಿಂದ ಜನಸಾಮಾನ್ಯರಿಗೆ ಆಗಿರುವ ಆರ್ಥಿಕ ತೊಂದರೆ ಖಂಡಿಸಿ ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪಕ್ಷದ ಕಾರ್ಯಕರ್ತರು ಖಾಲಿ ತಟ್ಟೆ ಚಳವಳಿ ನಡೆಸಿದರು.
 
ಕಾಂಗ್ರೆಸ್ ಮಹಿಳಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಪಕ್ಷದ ಮಹಿಳಾ ಕಾರ್ಯಕರ್ತರು ಧರಣಿ ನಡೆಸಿದರು.
 
ಕೊರಳಿಗೆ ತರಕಾರಿ ಹಾರ ಹಾಕಿ ಕೊಂಡು, ಊಟದ ಖಾಲಿ ತಟ್ಟೆಗಳನ್ನು ಚಮಚದಲ್ಲಿ ಬಾರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
 
ಪಕ್ಷದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವನಮಾಲ ದೇವರಾಜ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರಿಗೆ ಕಪ್ಪುಹಣದ ವ್ಯಾಮೋಹ ತೋರಿಸಿ ರಾಜಕೀಯ ಮಾಡುತ್ತಿದ್ದಾರೆ. ಕಪ್ಪು ಹಣವನ್ನು ವಿದೇಶದಿಂದ ತರುತ್ತೇನೆ. ದೇಶದ ಜನರ ಪ್ರತಿ ಖಾತೆಗೆ ₹15 ಲಕ್ಷ ತುಂಬುತ್ತೇನೆ ಎಂದು ಹೇಳಿ ಅಧಿಕಾರ ಹಿಡಿದಿದ್ದರು. ಕೊಟ್ಟ ಮಾತನ್ನು ಮರೆತು ಈಗ ಗರಿಷ್ಠ ಮುಖಬೆಲೆ ನೋಟು ಅಮಾನ್ಯಗೊ ಳಿಸಿದ್ದಾರೆ. ಇದರಿಂದ ಯಾವ ಶ್ರೀಮಂತರಿಗೂ ಅನನುಕೂಲವಾಗಲಿಲ್ಲ.
 
ಆದರೆ, ಜನಸಾಮಾನ್ಯರು, ರೈತರು, ಸಣ್ಣಪುಟ್ಟ ವ್ಯವಹಾರ ನಡೆಸುವವರು, ರಸ್ತೆಬದಿ ವ್ಯಾಪಾರಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಮಾತನಾಡಿ, ನೋಟು ನಿಷೇಧ ವಿಚಾರವನ್ನು ಸಂಸತ್‌ನಲ್ಲೂ ಚರ್ಚೆ ಮಾಡದೆ, ಸರ್ವಾಧಿಕಾರಿಯಂತೆ ಪ್ರಧಾನಿ ತೆಗೆದು ಕೊಂಡಿರುವ ನಿರ್ಧಾರದಿಂದ ಜನಸಾ ಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡು ವುದಾಗಿ ನೋಟು ನಿಷೇಧ ಮಾಡಿದ ಕ್ರಮ ಗುಡ್ಡ ಅಗೆದು ಸತ್ತ ಇಲಿ ಹಿಡಿದಂತಾಗಿದೆ. ಪ್ರಧಾನಿ ಮೋದಿ ಹಿಟ್ಲರ್‌ನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
 
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಡಾ.ಡಿ. ಎಲ್.ವಿಜಯ್‌ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ಇಡೀ ದೇಶವೇ ಜರ್ಜರಿತ ವಾಗಿದೆ. ಶೇ 50 ಮಹಿಳೆಯರು ಸಂಕಷ್ಟ ಎದುರಿಸುವಂತಾಗಿದೆ ಎಂದು ದೂರಿದರು.
 
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಅವರಿಗೆ ಪ್ರತಿಭಟನಾಕಾರರು ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು.
 
ಪಕ್ಷದ ಮುಖಂಡರಾದ ಟಿ.ಡಿ. ರಾಜೇಗೌಡ, ಸಚಿನ್‌ ಮಿಗಾ, ಕೆ.ಎಸ್‌.ಶಾಂತೇಗೌಡ, ಎಂ.ಸಿ.ಶಿ ವಾನಂದಸ್ವಾಮಿ, ಡಾ.ಅಂಶುಮಂತ್, ನಿಸಾರ್, ನಯನ ಮೋಟಮ್ಮ, ಚೇತನಾ, ಉಮಾ, ಶೋಭಾರಾಣಿ ಮತ್ತಿತರರು ಹಾಜರಿದ್ದರು. 
 
**
‘ನೋಟು ಅಮಾನ್ಯೀಕರಣಗೊಳಿಸುವ ಹಿಂದಿನ 6 ತಿಂಗಳಲ್ಲಿ ₹25 ಲಕ್ಷ ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವವರ ಹೆಸರನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು’
-ವನಮಾಲ ದೇವರಾಜ್
ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.