ADVERTISEMENT

ಚಾರಿತ್ರ್ಯ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯ

​ಪ್ರಜಾವಾಣಿ ವಾರ್ತೆ
Published 24 ಮೇ 2017, 7:39 IST
Last Updated 24 ಮೇ 2017, 7:39 IST

ತರೀಕೆರೆ: ಮನುಷ್ಯನ ವ್ಯಕ್ತಿತ್ವ ವಿಕಾಸಗೊಳ್ಳುವುದು ಚಾರಿತ್ರ್ಯದಿಂದಲೇ ಹೊರತು ಮಾತಿನಿಂದಲ್ಲ. ದೊಡ್ಡ ಮಾತುಗಳನ್ನಾಡುವುದರಿಂದ ಮನುಷ್ಯ ಪ್ರಬುದ್ಧನಾಗಲಾರ. ಸಣ್ಣ ವಿಷಯಗಳನ್ನು ಅರ್ಥೈಸಿಕೊಂಡು ಬದುಕಿದಾಗ ಜೀವನ ಸಾರ್ಥಕಗೊಳ್ಳುತ್ತದೆ ಎಂದು ರಂಭಾ ಪುರಿ ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲ್ಲೂಕಿನ ದೋರನಾಳು ಗ್ರಾಮದಲ್ಲಿ ಏರ್ಪಡಿಸ ಲಾಗಿದ್ದ ಶ್ರೀ ಬಸವೇಶ್ವರಸ್ವಾಮಿ ಮತ್ತು ಶ್ರೀ ಸಿದ್ಧೇಶ್ವರಸ್ವಾಮಿ ದೇವಾಲಯಗಳ ದಶಮಾನೋತ್ಸವ ಅಂಗವಾಗಿ ಜರುಗಿದ ಇಷ್ಟಲಿಂಗ ಮಹಾಪೂಜಾ ಧಾರ್ಮಿಕ ಹಾಗೂ ಭಾವೈಕ್ಯ ಜಾಗೃತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಂಸ್ಕೃತಿಯ ಅರಿವು ಮುಖ್ಯ. ಚಾರಿತ್ರ್ಯ ನಿರ್ಮಾಣಕ್ಕೆ ಸಂಸ್ಕಾರ ಅವಶ್ಯಕ. ಪರಿಶ್ರಮವಿಲ್ಲದೇ ಯಶಸ್ಸು ಬಯಸುವುದೆಂದರೆ ಬೀಜ ಬಿತ್ತದೆ ಫಲ ಬಯಸಿದಂತಾಗುತ್ತದೆ. ಕಾಯಿಸಿದ ಚಿನ್ನ ಒಡವೆಯಾಗುತ್ತದೆ. ಬಡಿದ ತಾಮ್ರ ತಂತಿಯಾಗುತ್ತದೆ.

ADVERTISEMENT

ಕೆತ್ತಿದ ಕಲ್ಲು ಸುಂದರ ಮೂರ್ತಿಯಾಗುವಂತೆ ಯೋಗ್ಯ ಗುರುವಿನ ಸಂಸ್ಕಾರ, ಮಾರ್ಗದರ್ಶನ ದಿಂದ ಬದುಕು ಉಜ್ವಲಗೊಳ್ಳುವುದು ಎಂದು ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದಲ್ಲಿ ನಿರೂಪಿಸಿದ್ದಾರೆ. ದ್ವೇಷದಿಂದ ನಿದ್ದೆ, ಹಸಿವು, ಆರೋಗ್ಯ ಎಲ್ಲವೂ ಕಳೆದು ಹೋಗುತ್ತದೆ. ಪ್ರೀತಿ ವಾತ್ಸಲ್ಯದಿಂದ ಏನೆಲ್ಲ ಪಡೆಯಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ‘10 ವರ್ಷಗಳ ಹಿಂದೆ ಗ್ರಾಮದಲ್ಲಿ ಶ್ರೀಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಇದೀಗ ಮತ್ತೆ ರಂಭಾಪುರಿ ಶ್ರೀ ಬಂದಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ. ಭೀಕರ ಬರಗಾಲದಿಂದಾಗಿ ಇಲ್ಲಿನ ರೈತರು ಅಡಿಕೆ ತೋಟ ಉಳಿಸಿಕೊಳ್ಳಲು ದಿನಕ್ಕೆ ಸುಮಾರು ₹ 4 ರಿಂದ 5 ಲಕ್ಷ ನೀರಿನ ಟ್ಯಾಂಕರ್‌ಗಳಿಗೆ ಖರ್ಚು ಮಾಡುತ್ತಿದ್ದಾರೆ. ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯವಾಗಬೇಕು ಎನ್ನುವುದು ಈ ಭಾಗದ ಜನರ ಬಹು ದಿನದ ಕನಸಾಗಿದೆ’ ಎಂದರು.

ಕಾಂಗ್ರೆಸ್ ಮುಖಂಡ ದೋರನಾಳು ಪರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ರಂಭಾಪುರಿ ಶ್ರೀಗಳು ಸಮಾಜ ತಿದ್ದುವ ಕೆಲಸವನ್ನು ಅವಿರತವಾಗಿ ಮಾಡುತ್ತಿದ್ದಾರೆ. ಶರಣರ, ಮಹಾನ್ ಚಿಂತಕರ ಬಗ್ಗೆ ಪೋಷಕರು ಮಕ್ಕಳಿಗೆ ತಿಳಿಸಬೇಕು. ಪ್ರಕೃತಿ ವಿರುದ್ಧ ವಾಗಿ ಮನುಷ್ಯ ಬಾಳ್ವೆ ನಡೆಸಿದ ಕಾರಣ ಇಂದು ವಿಪತ್ತು ಎದುರಾಗಿದೆ. ಜಾಗೃತಿ ಕಾರ್ಯಕ್ರಮಗಳು  ಮುಖ್ಯ’ ಎಂದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ,  ಗುರು ಮೂರ್ತಿ ಶಿವಾಚಾರ್ಯರು, ಯತೀಶ್ವರ ಶಿವಾಚಾರ್ಯರು, ರಾಚೋಟೇಶ್ವರ ಶಿವಾಚಾರ್ಯರು, ಅಭಿನವ ಸಿದ್ಧಲಿಂಗ ಶಿವಾಚಾರ್ಯರು, ನಂದೀಶ್ವರ ಶಿವಾಚಾ ರ್ಯರು, ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಮಾಜಿ ಶಾಸಕ ಎಸ್.ಎಂ. ನಾಗರಾಜು ಉದ್ಘಾಟಿಸಿದರು. ಹೊಳಲ್ಕೆರೆ ಮಾಜಿ ಶಾಸಕ ಪಿ. ರಮೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ, ಸದಸ್ಯ ಕೆ.ಆರ್.ಆನಂದಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಸದಸ್ಯೆ ಕಲ್ಪನಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ, ಟಿಎಪಿಸಿಎಂಎಸ್ ಅಧ್ಯಕ್ಷ ವಸಂತ ಕುಮಾರ್, ಉಪಾಧ್ಯಕ್ಷೆ ಎಚ್. ಗೀತಾ ರಮೇಶಮೂರ್ತಿ, ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಡಿ.ಈ. ಚಂದ್ರಶೇಖರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.