ADVERTISEMENT

‘ಜಗತ್ತಿಗೆ ಜ್ಞಾನಜ್ಯೋತಿ ಬೆಳಗಿಸಿದ ಭಾರತ’

ಸತ್ಸಂಗದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಉಪದೇಶ 

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 8:48 IST
Last Updated 16 ನವೆಂಬರ್ 2017, 8:48 IST

ಚಿಕ್ಕಮಗಳೂರು: ಇಡೀ ಜಗತ್ತಿಗೆ ಜ್ಞಾನ ದಾಸೋಹವನ್ನು ಉಣಬಡಿಸಿದ ದೇಶ ಭಾರತ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಬಿಜಿಎಸ್‌ ಸೇವಾ ಸಮಿತಿ ವತಿಯಿಂದ ನಗರದ ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸತ್ಸಂಗದಲ್ಲಿ ‘ಈಶಾವಾಸ್ಯ ಉಪನಿಷತ್ತು’ ಕುರಿತು ಉಪದೇಶ ನೀಡಿದರು.

‘ಭಾರತವು ನಾಗರಿಕತೆಗಳ ತೊಟ್ಟಿಲು ಎಂದು ವಿಲ್‌ ಡುರಾಂಟ್‌ ಹೇಳಿದ್ದಾರೆ. ಈ ದೇಶದ ಇತಿಹಾಸವನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿರುವವರು ಹೇಳಿರುವುದನ್ನು ಭಾರತದ ಘನತೆಯ ಅರಿವಾಗುತ್ತದೆ. ದೇಶದ ಬಗ್ಗೆ ನಂಬಿಕೆ, ವಿಶ್ವಾಸ ಮೂಡುತ್ತದೆ’ ಎಂದು ಹೇಳಿದರು.

ADVERTISEMENT

‘ಜ್ಞಾನದ ತಳಹದಿಯ ಮೇಲೆ ಪರಂಪರೆ ಕಟ್ಟಿದ ದೇಶ ಇದು. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಪ್ರಪಂಚದಲ್ಲಿ ನಾವಿದ್ದೇವೆ. ಯುವಪೀಳಿಗೆಗೆ ನಮ್ಮ ದೇಶದ ಘನತೆ, ಮಹನೀಯರ ಸಂದೇಶಗಳನ್ನು ತಿಳಿಸಬೇಕು. ಜ್ಞಾನದ ನುಡಿಗಳನ್ನು ಶಾಲಾಕಾಲೇಜು, ಮನೆಗಳಲ್ಲಿ ಮಕ್ಕಳಿಗೆ ಕಲಿಸಬೇಕು’ ಎಂದರು.

‘ಓಂಕಾರ ಮಂತ್ರವು ಯಾವುದೇ ಜಾತಿ, ಧರ್ಮಕ್ಕೆ ಸೇರಿಲ್ಲ. ಜಗತ್ತಿನ ವ್ಯುತ್ಪತ್ತಿಗೆ ಕಾರಣವಾದ ಮಂತ್ರ ಇದು. ಈ ಮಂತ್ರದಿಂದ ವೇದ, ಉಪನಿಷತ್ತಿನಂಥ ಜ್ಞಾನ ಶಾಖೆಗಳು ಒಡಮೂಡಿವೆ’ ಎಂದರು.

‘ಈಶಾವಾಸ್ಯ ಉಪನಿಷತ್ತು 18 ಮಂತ್ರಗಳನ್ನು ಒಳಗೊಂಡಿದೆ. ಒಂದೊಂದು ಮಂತ್ರವನ್ನು ಅರ್ಥ ಮಾಡಿಕೊಳ್ಳಲು ಬಹಳಷ್ಟು ಕಾಲ ಬೇಕು. ಉಪನಿಷತ್ತಿನ ಜ್ಞಾನ ಅರಿತರೆ ಸಾಧಕರು ಸಾಧನೆಯ ಕಡೆಗೆ ಮುಖ ಮಾಡಲು ಸಾಧ್ಯವಾಗುತ್ತದೆ’ ಎಂದರು.

‘ಮೌನವಾಗಿ ಅಂತಃಕರಣ ಶುದ್ಧಿಯಿಂದ ಗುರುವಿನ ಪದತಲದಲ್ಲಿ ಕುಳಿತು ಸತ್ಯ ಅರಿಯಲು ಹೊರಡು ವುದೇ ಉಪನಿಷತ್ತಿನ ಬ್ರಹ್ಮಜ್ಞಾನ. ಉಪನಿಷತ್ತುಗಳು ಎಷ್ಟಿವೆ ಎಂಬ ವಿಷಯ ಬಹಳ ಚರ್ಚೆಗೆ ಒಳಗಾಗಿದೆ. ಉಪನಿಷತ್ತುಗಳ ಅಧ್ಯಯನ ಜ್ಞಾನದ ಹರವನ್ನು ವಿಸ್ತರಿಸುತ್ತದೆ’ ಎಂದು ಹೇಳಿದರು.

ಉಪದೇಶ ಆರಂಭಿಸುವು ದಕ್ಕೂ ಮುನ್ನ ಎರಡು ಭಜನೆ ಗೀತೆಗಳನ್ನು ಹಾಡಿದರು.

ನಿರ್ಮಲಾನಂದ ನಾಥ ಸ್ವಾಮೀಜಿ ಯನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆತರಲಾಯಿತು. ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಪತ್ರಕರ್ತ ಗಿರಿಜಾಶಂಕರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಈಶಾ ವಾಸ್ಯ ಉಪನಿಷತ್ತು 18 ಶ್ಲೋಕಗಳನ್ನು ಒಳಗೊಂಡಿದೆ. ಸಮತೋಲನ ಬದುಕಿನ ಕುರಿತು ಅಂಶಗಳು ಈ ಉಪನಿಷತ್ತಿನಲ್ಲಿ ಇವೆ ಎಂದರು. ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಇದ್ದರು.

***

ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸುವುದೇ ಧರ್ಮದ ಕಾಯಕ. ಆದರೆ, ಧರ್ಮದ ಹೆಸರಿನಲ್ಲಿ ಸಾಮರಸ್ಯ ಹದಗೆಡುತ್ತಿರುವುದು ಬೇಸರದ ಸಂಗತಿ
- ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.