ADVERTISEMENT

ಜಿಲ್ಲೆಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 8:46 IST
Last Updated 7 ಜುಲೈ 2017, 8:46 IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಬಹಳಷ್ಟು ಹುದ್ದೆಗಳು ಖಾಲಿ ಇದ್ದು, ಈ ಸಂಬಂಧಪಟ್ಟ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿ ನೇಮಕಕ್ಕೆ ಶೀಘ್ರದಲ್ಲಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ರೋಷನ್‌ ಬೇಗ್‌ ಇಲ್ಲಿ ಗುರುವಾರ  ತಿಳಿಸಿದರು.

ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ‘ಕಂದಾಯ ಇಲಾಖೆಯಲ್ಲಿ 688, ಜಿಲ್ಲಾಸ್ಪತ್ರೆಯಲ್ಲಿ 103, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 25 ಹುದ್ದೆಗಳು ಖಾಲಿ ಇವೆ. ವಿವಿಧ ಇಲಾಖೆಗಳಲ್ಲಿ ಹುದ್ದೆಗಳ ಖಾಲಿ  ಇರುವ ಬಗ್ಗೆ ಸಂಬಂಧಪಟ್ಟ ಸಚಿವರ ಗಮನ ಸೆಳೆಯುತ್ತೇನೆ’ ಎಂದರು. 

‘ನಗರದಲ್ಲಿ 2011ರಲ್ಲಿ ಕೈಗೆತ್ತಿಕೊಂಡಿರುವ ಒಳಚರಂಡಿ (ಯುಜಿಡಿ) ನಿರ್ಮಾಣ ಯೋಜನೆಯು ಈವರೆಗೂ ಮುಗಿದಿಲ್ಲ. 20013ರಲ್ಲಿಯೇ ಪೂರ್ಣಗೊಳ್ಳಬೇಕಿತ್ತು. ಗುತ್ತಿಗೆದಾರರಿಗೆ ಕಾಮಗಾರಿ ಅವಧಿಯನ್ನು ಎರಡು ಬಾರಿ ವಿಸ್ತರಿಸಲಾಗಿದೆ. ಆದರೂ ಕಾಮಗಾರಿ ಮುಗಿದಿಲ್ಲ. ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ADVERTISEMENT

ಕರಗಡ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಮೇ 15ರ ಒಳಗೆ ಮುಗಿಸಲು ಹಿಂದಿನ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಗಡುವು ನೀಡಿ, ಪೂರ್ಣಗೊಳಿಸದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದರೂ ಕಾಮಗಾರಿ ಮುಗಿಸಿಲ್ಲ. ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

‘ಸಂಬಂಧಪಟ್ಟ ಗುತ್ತಿಗೆದಾರ ಮತ್ತು ಎಂಜಿನಿಯರ್‌ಗೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ. ಕಾಮಗಾರಿ ಶೇ 90 ಪೂರ್ಣಗೊಂಡಿದೆ. ಶೀಘ್ರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು’ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಸಚಿವರಿಗೆ ಮಾಹಿತಿ ನೀಡಿದರು.

‘ಯಗಚಿ ನದಿಯಿಂದ ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕಿನ 18 ಗ್ರಾಮಗಳಿಗೆ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ರೋಷನ್‌ ಬೇಗ್‌ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿ ಗುರು ದತ್ತಾತ್ರೇಯ ಪೀಠದ ವಿವಾದ ಇತ್ಯರ್ಥಪಡಿಸುವುದು ಹೇಗೆ ಎಂಬ ಕುರಿತು ಶಿಫಾರಸು ಮಾಡಲು ಸರ್ಕಾರವು ಸಚಿವ ಸಂಪುಟ ಉಪ ಸಮಿತಿ ರಚಿಸಿದೆ. ಕಾನೂನು ಸಚಿವ, ಗೃಹ ಸಚಿವ, ಹಜ್‌ ಸಚಿವ ಇವರೆಲ್ಲರೂ ಸಮಿತಿಯಲ್ಲಿದ್ದಾರೆ.

ಸಮುದಾಯಗಳ ಮುಖಂಡರ ಸಲಹೆಗಳನ್ನು ಪಡೆದು ಸಮಿತಿ ನಿರ್ಧಾರ ಕೈಗೊಳ್ಳಲಿದೆ’ ಎಂದು ಪ್ರತಿಕ್ರಿಯಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ರಾಗಪ್ರಿಯಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಇದ್ದರು.

ಡಿಸಾಲ್ಟೇಷನ್ ಘಟಕ; ಕಾರ್ಯ ಸಾಧ್ಯತೆ ವರದಿ ಸಿದ್ಧ
ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ (ಡಿಸಾಲ್ಟೇಷನ್) ಘಟಕವನ್ನು ಮಂಗಳೂರಿನಲ್ಲಿ ಸ್ಥಾಪಿಸಲು ಇಸ್ರೇಲ್‌ ಕಂಪೆನಿಯೊಂದು ಮುಂದೆ ಬಂದಿದೆ ಎಂದು ರೋಷನ್‌ ಬೇಗ್‌ ತಿಳಿಸಿದರು.

ಇದು ₹1600 ಕೋಟಿ ವೆಚ್ಚದ ಯೋಜನೆಯಾಗಿದ್ದು, ತಜ್ಞರು ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕಾರ್ಯಸಾಧ್ಯತೆ ವರದಿಯನ್ನು (ಫಿಸಿಬಿಲಿಟಿ ರಿಪೋರ್ಟ್‌) ತಯಾರಿಸಿದ್ದಾರೆ.  200 ಎಂಎಲ್‌ಡಿ ಸಾಮರ್ಥ್ಯದ ಘಟಕ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ತಮಿಳುನಾಡಿನ ಮಂಜೂರಿನಲ್ಲಿರುವ ಘಟಕದ ಮಾದರಿಯಲ್ಲಿ ಇದನ್ನೂ ನಿರ್ಮಿಸಲಾಗುವುದು. ಈ ಯೋಜನೆ ಅನುಷ್ಠಾನವಾದರೆ ವರ್ಷಪೂರ್ತಿ ನೀರಿನ ಸಮಸ್ಯೆ ಇರುವುದಿಲ್ಲ. ಈ ಯೋಜನೆಯನ್ನು ಸುತ್ತಮುತ್ತಲಿನ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ನಡೆದಿದೆ ಎಂದರು.

ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚನೆ
ಚಿಕ್ಕಮಗಳೂರು: ನಗರದಲ್ಲಿ ಒಳಚರಂಡಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ರೋಷನ್ ಬೇಗ್ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಒಳಚರಂಡಿ ವ್ಯವಸ್ಥೆ ಸರಿ ಇಲ್ಲದಿದ್ದರೆ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುತ್ತವೆ. ಈ ನಿಟ್ಟಿನಲ್ಲಿ  ನಗರಸಭೆ ಕ್ರಮಕೈಗೊಳ್ಳಬೇಕು ಎಂದರು.

ವಿದ್ಯಾರ್ಥಿನಿಲಯಗಳಲ್ಲಿ ಊಟ ಹಾಗೂ ನೀರಿನ ವ್ಯವಸ್ಥೆಯ ಉತ್ತಮವಾಗಿ ಕಲ್ಪಿಸಬೇಕು ಎಂದು ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲಾಧಿಕಾರಿ ಜಿ.ಸತ್ಯವತಿ ಮಾತನಾಡಿ, ‘2016ರಲ್ಲಿ ಜಿಲ್ಲೆಯ 6 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿತ್ತು.

ಬರ ಪರಿಹಾರಕ್ಕಾಗಿ ₹13 ಕೋಟಿ 60 ಲಕ್ಷ ಮಂಜೂರು ಮಾಡಲಾಗಿತ್ತು. ಜಿಲ್ಲೆಯಾದ್ಯಂತ 11 ಮೇವು ಬ್ಯಾಂಕ್‌ ತೆರೆಯಲಾಗಿದೆ. ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ  ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ ಗೋಶಾಲೆ ತೆರೆಯಲಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಲು ನೀರು ಸರಬರಾಜು ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು  ಅವರು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 93 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆರ್‌ಟಿಜಿಎಸ್ ಮೂಲಕ ಟ್ಯಾಂಕರ್ ಮಾಲೀಕರಿಗೆ ಹಣ ಪಾವತಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ರಾಗಪ್ರಿಯಾ ತಿಳಿಸಿದರು. ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.