ADVERTISEMENT

ಜೀವಿಗಳ ಉಳಿವಿಗೆ ಭೂ ಸಂರಕ್ಷಣೆ ಅಗತ್ಯ

ಕಾನೂನು ಸೇವಾ ಸಮಿತಿಯಿಂದ ವಿಶ್ವ ಭೂ ದಿನಾಚರಣೆ: ಪ್ರಕೃತಿ ಕಲ್ಯಾಣ್‌ಪುರ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 7:28 IST
Last Updated 23 ಏಪ್ರಿಲ್ 2018, 7:28 IST

ಮೂಡಿಗೆರೆ: ಜಗತ್ತಿನ ಎಲ್ಲ ಜೀವಿಗಳ ಉಳಿವಿಗೆ ಭೂಮಿಯ ಸಂರಕ್ಷಣೆ ಅಗತ್ಯವಾಗಿದೆ ಎಂದು ಜೆಎಂಎಫ್‌ ನ್ಯಾಯಾಲಯದ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್‌ಪುರ್‌ ಅಭಿಪ್ರಾಯಪಟ್ಟರು.

ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ಪಟ್ಟಣದ ಜೆಎಂಎಫ್‌ ನ್ಯಾಯಾಲಯದಲ್ಲಿ ಭಾನುವಾರ ನಡೆದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಲ್ಲ ಜೀವಿಗಳಿಗೂ ಭೂಮಿ ಆಸರೆಯಾಗಿದ್ದು, ಮಾನವನ ಸೋಮಾರಿತನ ಹಾಗೂ ಅಪರಿಮಿತ ಬಯಕೆಗಳಿಂದಾಗಿ ದಿನದಿಂದ ದಿನಕ್ಕೆ ಭೂಮಿ ನಶಿಸುತ್ತಿದೆ. ಮಾನವನ ಈ ಕೃತ್ಯದಿಂದಾಗಿ ಭೂಮಿಯ ಮೇಲಿರುವ ಎಲ್ಲ ಜೀವಿಗಳಿಗೂ ಅಪಾಯ ಎದುರಾಗಲಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಭವಿಷ್ಯದಲ್ಲಿ ಭುಮಯನ್ನು ಕಳೆದುಕೊಂಡ ಜೀವಿಗಳು ಅತಂತ್ರವಾಗುವ ಅಪಾಯ ಎದುರಾಗುತ್ತದೆ ಎಂಧರು.

ADVERTISEMENT

‘ಭೂಮಿಯನ್ನು ಕಲುಷಿತಗೊಳಿಸುವಲ್ಲಿ ಪ್ಲಾಸ್ಟಿಕ್‌ ಪ್ರಧಾನ ಪಾತ್ರ ವಹಿಸಲಿದ್ದು, ಪ್ರತಿಯೊಬ್ಬರೂ ಪ್ಲಾಸ್ಟಿಕ್‌ ಬಳಕೆಯನ್ನು ಸ್ವಯಂ ಘೋಷಿತವಾಗಿ ನಿಷೇಧಿಸಿಕೊಂಡರೆ ಭೂಮಿ ಕಲುಷಿತವಾಗುವುದನ್ನು ತಪ್ಪಿಸಬಹುದು’ ಎಂದರು.

ವಕೀಲೆ ಪಾರ್ವತಿ ಮಾತನಾಡಿ, ‘ಭೂಮಿಯ ಸಂರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು, ಖಾಲಿ ಪ್ರದೇಶಗಳಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ, ಭೂ ಸವಕಳಿಯನ್ನು ತಡೆಯಬೇಕು. ವ್ಯರ್ಥವಾಗಿ ಹರಿಯುವ ನೀರನ್ನು ತಡೆದು, ಭೂಮಿಯ ಅಂತರ್ಜಲವನ್ನು ಹೆಚ್ಚಿಸಿ ಭೂಮಿಯ ತಾಪವನ್ನು ಕಡಿಮೆಗೊಳಿಸಬೇಕು. ಕೊಳವೆ ಬಾವಿಗಳನ್ನು ಕುಗ್ಗಿಸಿ, ಭೂಮಿಯ ಅಂತರ್ಜಲವನ್ನು ಹೆಚ್ಚಿಸಬೇಕು. ನಾವು ಭೂಮಿಯನ್ನು ಬಳಕೆ ಮಾಡಿಕೊಂಡಂತೆ, ಮುಂದಿನ ಪೀಳಿಗೆಗೂ ಭೂಮಿಯ ಬಳಕೆಗೆ ಯೋಗ್ಯವಾಗಿ ಬಿಟ್ಟುಕೊಡುವಂತಾಗಬೇಕು’ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎನ್‌. ಅಶೋಕ್‌ ಮಾತನಾಡಿ, ‘ಸರಳ ಜೀವನ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿದ್ದು, ಸರಳತೆಯನ್ನು ಅಳವಡಿಸಿಕೊಂಡರೆ ಭೂಮಿಯ ನಾಶವನ್ನು ತಡೆಯಬಹುದು’ ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ಸುನೀಲ್‌ ಪಾಟೀಲ್‌, ವಕೀಲರ ಸಂಘದ ಕಾರ್ಯದರ್ಶಿ ಸುರೇಶ್‌, ವಕೀಲರಾದ ಬಿ.ಟಿ. ನಟರಾಜ್‌, ಡಿ.ಎಸ್‌. ರಘು, ಜಗದೀಶ್‌, ಅಶೋಕ್‌, ನಾಗರಾಜ್‌ ಕಾರ್ಯಕ್ರಮದಲ್ಲಿ ಇದ್ದರು.

**

ಭೂ ಸಂರಕ್ಷಣೆ ಕಾರ್ಯ ತುರ್ತಾಗಿ ನಡೆಯದಿದ್ದರೆ ಜೀವಿಗಳ ಉಳಿವಿಗೆ ಸಂಚಕಾರ ಬಂದೊದಗುತ್ತದೆ – ಪ್ರಕೃತಿ ಕಲ್ಯಾಣ್‌ಪುರ್‌, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.