ADVERTISEMENT

ತತ್ಕೊಳ: 10 ಸಾವಿರ ಎಕರೆ ಅರಣ್ಯ ಭಸ್ಮ

ಬೆಂಕಿಯುಂಡೆಯಾಗಿರುವ ಮೀಸಲು ಅರಣ್ಯ; ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ

ಕೆ.ವಾಸುದೇವ
Published 6 ಮಾರ್ಚ್ 2017, 9:41 IST
Last Updated 6 ಮಾರ್ಚ್ 2017, 9:41 IST
ತತ್ಕೊಳ: 10 ಸಾವಿರ ಎಕರೆ ಅರಣ್ಯ ಭಸ್ಮ
ತತ್ಕೊಳ: 10 ಸಾವಿರ ಎಕರೆ ಅರಣ್ಯ ಭಸ್ಮ   
ಮೂಡಿಗೆರೆ: 10 ವರ್ಷಗಳ ಹಿಂದೆ ಒತ್ತುವರಿ ವಿಚಾರವಾಗಿ ರಾಷ್ಟ್ರದ ಗಮನ ಸೆಳೆದಿದ್ದ ತತ್ಕೊಳ ಮೀಸಲು ಅರಣ್ಯದಲ್ಲಿ ಕಳೆದ ಆರು ದಿನಗಳಿಂದ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 10 ಸಾವಿರ ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.
 
ಮೂಡಿಗೆರೆ ಹಾಗೂ ಆಲ್ದೂರು ಅರಣ್ಯ ವಲಯವನ್ನು ಒಳಗೊಂಡಿರುವ ತತ್ಕೊಳ ಮೀಸಲು ಅರಣ್ಯ ಪ್ರದೇಶವು ಸುಮಾರು 25 ಸಾವಿರ ಎಕರೆಗೂ ಅಧಿಕ ಪ್ರದೇಶವನ್ನು ಒಳಗೊಂಡಿರುವ ಮೀಸಲು ಅರಣ್ಯವಾಗಿದ್ದು, ಅರ್ಧಕ್ಕಿಂತ ಹೆಚ್ಚಿನ ಭಾಗ ಸುಟ್ಟು ಕರಕಲಾಗಿದೆ.
 
ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ, ಬಾಳೆಹಳ್ಳಿ, ಕುಂಡ್ರ, ಬೆಳಗೋಡು ಮೂಲಕ ಸಾರಗೋಡು, ಮತ್ತೋಡಿ ವರೆಗೂ, ಹುಲ್ಲೆಮನೆ ಕುಂದೂರು, ತತ್ಕೊಳ, ಬೈರಿಗದ್ದೆ, ಕೋಣಬಸರಿ ಎಸ್ಟೇಟ್‌ ಚಿಕ್ಕಳ್ಳದ ಮೂಲಕ ಆಲ್ದೂರು ವಲಯದವರೆಗೂ ಕಾಳ್ಗಿಚ್ಚು ವ್ಯಾಪಿಸಿದ್ದು, ಪ್ರತಿ ದಿನವೂ ಸುಮಾರು 500 ರಿಂದ 800 ಎಕರೆ ಪ್ರದೇಶ ಬೆಂಕಿಗೆ ಆಹುತಿ ಯಾಗುತ್ತಿದೆ. 
 
ತತ್ಕೊಳ ಮೀಸಲು ಅರಣ್ಯದಲ್ಲಿ ಬೀಟೆ, ಹೊನ್ನೆ, ಮತ್ತಿ, ತೇಗದಂತಹ ಬೆಲೆಬಾಳುವ ಮರಗಳಿದ್ದು, ಬೆಂಕಿಯ ಕೆನ್ನಾಲಿಗೆಗೆ ಬೃಹತ್‌ ಮರಗಳೆಲ್ಲವೂ ಸುಟ್ಟು ಹೋಗಿವೆ. ಈ ಅರಣ್ಯವು ಪಶ್ಚಿಮ ಘಟ್ಟದ ವ್ಯಾಪ್ತಿಗೆ ಸೇರಿಸಿರುವ ಬಾಳೂರು ಮೀಸಲು ಅರಣ್ಯಕ್ಕೆ ಹೊಂದಿ ಕೊಂಡಿದ್ದು, ಅಪರೂಪದ ಜೀವ ಸಂಪತ್ತಾದ ಕಡವೆ, ಜಿಂಕೆ, ಕಾಡೆಮ್ಮೆ, ಕಾಳಿಂಗಸರ್ಪ, ನವಿಲು, ಕಾಡು ಹಂದಿಗಳಿಗೆ ಹೆಸರುವಾಸಿ ಯಾಗಿದ್ದು, ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ಬೆಂಕಿಯ ಕೆನ್ನಾಲಿಗೆಗೆ ಅಪರೂಪದ ಜೀವ ಸಂಪತ್ತು ಬಲಿಯಾಗುತ್ತಿದೆ.
 
ಅರಣ್ಯ ಪ್ರದೇಶದ ಅಂಚಿನಲ್ಲಿರುವ ಪ್ರಾಣಿಗಳು, ಅರಣ್ಯಕ್ಕೆ ಹೊಂದಿಕೊಂಡಿರುವ ಕಾಫಿ ತೋಟ ಗಳಿಗೆ ದಾಟುತ್ತಿದ್ದು, ಸಾರ ಗೋಡು, ಕೋಣಬಸರಿ ಎಸ್ಟೇಟ್‌, ಕುಂಡ್ರ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 7 ಕಾಳಿಂಗ ಸರ್ಪಗಳು ಕಾಣಿಸಿಕೊಂಡಿವೆ. ಆದರೆ ದಟ್ಟಾರಣ್ಯದ ಮಧ್ಯ ಭಾಗದಲ್ಲಿ ಸಿಲುಕಿಕೊಂಡಿರುವ ಕಾಡು ಪ್ರಾಣಿಗಳು ಬೆಂಕಿಯ ಕೆನ್ನಾಲಿ ಗೆಯನ್ನು ದಾಟಲಾಗದೇ ಬೆಂಕಿಗೆ ಆಹುತಿ ಯಾಗಿವೆ. ಅಪರೂಪದ ಪಕ್ಷಿ ಸಂಪತ್ತು ಕೂಡ ಮೀಸಲು ಅರಣ್ಯದೊಳಗಿನ ಅಗ್ನಿಗೆ ಆಹುತಿಯಾಗಿವೆ.
 
ಪ್ರತಿ ದಿನವೂ ಅರಣ್ಯ ಇಲಾಖೆಯ 10-15 ಮಂದಿ ಸಿಬ್ಬಂದಿ ಬೆಂಕಿ ಪ್ರದೇಶಕ್ಕೆ ಭೇಟಿ ನೀಡಿ, ಬೆಂಕಿಯು ಊರೊಳಗೆ ಪ್ರವೇಶಿಸದಂತೆ ಸ್ಥಳೀಯರ ನೆರವಿನಿಂದ ಕಾರ್ಯಚರಣೆ ನಡೆ ಸುತ್ತಿದ್ದು, ಅರಣ್ಯದೊಳಗಿನ ಬೆಂಕಿ ನಂದಿಸಲಾಗದೇ ಕೈ ಚೆಲ್ಲಿದ್ದಾರೆ. 
 
ತತ್ಕೊಳ ಅರಣ್ಯಕ್ಕೆ ಬೆಂಕಿ ತಗುಲಿ ರುವ ಕುರಿತು ಸಹಾಯಕ ಅರಣ್ಯ ಸಂರಕ್ಷಕ ಮುದ್ದಣ್ಣ ಅವರನ್ನು ‘ಪ್ರಜಾ ವಾಣಿ’ ಸಂಪರ್ಕಸಿದಾಗ, ‘3 ದಿನಗಳಿಂದ ಬೆಂಕಿ ಕಾಣಿಸಿಕೊಂಡಿದೆ. ಇದು ಗ್ರೌಂಡಿಂಗ್‌ ಬೆಂಕಿಯಾಗಿರುವು ದರಿಂದ ಹೆಚ್ಚಿನ ಅನಾಹುತವಾಗಿಲ್ಲ. ಸುಮಾರು 100 ಎಕರೆ ಸುಟ್ಟು ಹೋಗಿರ ಬಹುದು ಎಂದ ಅವರು, ತಕ್ಷಣವೇ ಅಷ್ಟು ಸುಟ್ಟಿರಲಿಕ್ಕಿಲ್ಲ, ಒಂದು 25 ಅಥವಾ 30 ಎಕರೆ ಸುಟ್ಟಿರಬಹುದು’ ಎಂದರು.
 
15 ವರ್ಷಗಳ ಹಿಂದೆ ಸುಪ್ರೀಂ ಕೋರ್ಟ್‌ ಆದೇಶದನ್ವಯ ಈ ಪ್ರದೇಶ ದಲ್ಲಿ ವಾಸಿಸುತ್ತಿದ್ದ ಜನತೆಯನ್ನು ಸ್ಥಳಾಂ ತರ ಮಾಡಿದ್ದು, ‘ನಾವಿದ್ದಾಗ ಕಾಡು ಉತ್ತಮವಾಗಿತ್ತು, ನಾವು ಒಕ್ಕಲೆದ್ದ ನಂತರ ಕಾಡಿನಲ್ಲಿ ಅನೇಕ ಅರಣ್ಯ ನಾಶ ಚಟುವಟಿಕೆಗಳು ನಡೆಯುತ್ತಿವೆ, ನಮ್ಮನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ ಪರಿಸರ ವಾದಿ ಸಂಘಟನೆಗಳು ಈಗ ಕಣ್ಮುಂದೆ ಅರಣ್ಯ ಸುಟ್ಟು ಹೋಗುತ್ತಿದ್ದರೂ ಧ್ವನಿ ಎತ್ತುತ್ತಿಲ್ಲ. ಅರಣ್ಯ ಇಲಾಖೆ ಕೂಡ ಬೆಂಕಿ ನಂದಿಸಲು ಮುಂದಾಗುತ್ತಿಲ್ಲ.

ಇವೆಲ್ಲವೂ ಬಡವರ ಮೇಲೆ ಮಾತ್ರ ಕಾನೂನಿನ ಚಾಟಿ ಪ್ರಹಾರವೇ ಹೊರತು ನಿಜವಾದ ಅರಣ್ಯ ರಕ್ಷಣೆಯ ಕಾಳಜಿಯಲ್ಲ ಎನಿಸುತ್ತಿದೆ’ ಎಂದು ತತ್ಕೊಳ ಮೀಸಲು ಅರಣ್ಯದಿಂದ ಒಕ್ಕಲೆದ್ದು ಬಂದಿರುವ ಗಣೇಶ್‌ ಕಾಳ್ಗಿಚ್ಚಿನ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತೋರಿರುವ ನಿರ್ಲಕ್ಷ್ಯ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
 
ಅಮೂಲ್ಯ ಸಂಪತ್ತಿರುವ ತತ್ಕೊಳ ಮೀಸಲು ಅರಣ್ಯ ಪ್ರದೇಶ ರಕ್ಷಣೆಗೆ  ಸ್ಥಳೀಯರು ನೆರವು ನೀಡಲು ಸಿದ್ದರಿದ್ದು, ಅರಣ್ಯವು ಸಂಪೂರ್ಣ ಬೆಂಕಿಗೆ ಆಹುತಿ ಯಾಗುವ ಮುನ್ನ ಅರಣ್ಯ ಇಲಾಖೆ ಬೆಂಕಿನಂದಿಸಿ ಅಪರೂಪದ ಜೀವ ಸಂಪತ್ತನ್ನು ರಕ್ಷಿಸಿಕೊಳ್ಳಬೇಕು ಎಂಬುದು ಸುತ್ತಮುತ್ತಲ ಗ್ರಾಮಸ್ಥರ ಒತ್ತಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.