ADVERTISEMENT

ತಾಲ್ಲೂಕಿನ 32 ಕೆರೆಗಳಿಗೆ ಶೀಘ್ರ ನೀರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 9:18 IST
Last Updated 3 ಸೆಪ್ಟೆಂಬರ್ 2017, 9:18 IST

ಕಡೂರು: ಭದ್ರಾ ನೀರಿನಿಂದ ಕಡೂರು ತಾಲ್ಲೂಕಿನ 32 ಕೆರೆಗಳನ್ನು ತುಂಬಿಸುವ ಕಾಲ ಅತ್ಯಂತ ಸನಿಹದಲ್ಲಿದೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.ಕಡೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಚಿತ್ರದುರ್ಗ ಕಾಲುವೆಯ ಮೂಲಕ ಕಡೂರು ತಾಲ್ಲೂಕಿನ 3 ಕೆರೆಗಳು ಮಾತ್ರ ತುಂಬುವ ಅವಕಾಶವಿತ್ತು. ಆದರೆ ನಂತರ ಸದಾನಂದಗೌಡರು ಮುಖ್ಯಮಂತ್ರಿಯಾದಾಗ ಮತ್ತೆ ಸರ್ವೆ ಮಾಡಿಸಿದ್ದರಿಂದ 32 ಕೆರೆಗಳನ್ನು ತುಂಬಿಸುವ ಅವಕಾಶ ಲಭ್ಯವಾಯಿತು. ಇದರಲ್ಲಿ ನನ್ನ ಪರಿಶ್ರಮವಿರುವುದು ವಾಸ್ತವ’ ಎಂದರು.

‘ಈ ವಿಚಾರವಾಗಿ ಹಲವಾರು ಪರ ವಿರೋಧದ ಮಾತುಗಳ ಕೇಳಿ ಬಂದಿದ್ದು, ರಸ್ತೆ ಸಂಪರ್ಕ ಮತ್ತು ನೀರಾವರಿ ಎಂದು ಶಾಸಕನಾಗಿ ಆಯ್ಕೆಯಾದ ಕೂಡಲೇ ಹೇಳಿದಂತೆಯೇ ಕ್ಷೇತ್ರದಲ್ಲಿ ಆಗಿರುವ ರಸ್ತೆ ಕಾಮಗಾರಿಗಳು ಎಲ್ಲರಿಗೂ ಗೋಚರವಾಗುತ್ತಿದೆ. ಆದರೆ ಈ ಕೆರೆಗಳಿಗೆ ತುಂಬಿಸುವ ವಿಚಾರದಲ್ಲಿ ಹಲವರು ವ್ಯಂಗ್ಯವಾಡಿದ್ದಾರೆ’ ಎಂದರು.

ಭೂಸ್ವಾಧೀನ ಪ್ರಕ್ರಿಯೆ ಆರಂಭವಾದಾಗಲೂ ಸಹ ವ್ಯಂಗ್ಯ ಮುಂದುವರೆಸಿದವರಿದ್ದಾರೆ. ಆದರೆ ನನ್ನ ಪ್ರಯತ್ನದಲ್ಲಿ ನಂಬಿಕೆ ಇತ್ತು. ನಿರಂತರ ಪ್ರಯತ್ನದಿಂದ ಇದೀಗ ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕಿನ 32 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ₹171 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇದೇ 14 ಟೆಂಡರ್ ಪರಿಶೀಲನೆಗೆ ಕಡೇ ದಿನ. ಅಂದೇ ಕಾಮಗಾರಿಯ ಏಜೆನ್ಸಿ ನಿಗದಿಯಾಗಲಿದ್ದು, ತಾಲ್ಲೂಕಿನ 32 ಕೆರೆಗಳು ತುಂಬುವ ಬಹು ದೊಡ್ಡ ಕನಸು ನನಸಾಗಲಿದೆ’ ಎಂದು ತಿಳಿಸಿ ಪೂರಕ ದಾಖಲೆಗಳನ್ನು ನೀಡಿದರು.

ADVERTISEMENT

‘ಕಡೂರು ಮತ್ತು ಬೀರೂರು ಪಟ್ಟಣಗಳಿಗೆ ನೀರು ನೀಡುವ ಭದ್ರಾ ಕುಡಿಯುವ ನೀರಿನ ಯೋಜನೆಯ ಕನಸು ಕಂಡವರು ದಿವಂಗತ ಶಾಸಕ ಕೆ.ಎಂ.ಕೃಷ್ಣಮೂರ್ತಿ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆ ನಂತರದಲ್ಲಿ ಸ್ಥಗಿತಗೊಂಡಿದ್ದ ಯೋಜನೆಯನ್ನು ಪೂರ್ಣಗೊಳಿಸಿರುವಲ್ಲಿ ನನ್ನ ಪಾತ್ರ ಇದ್ದು, 32 ಕೆರೆ ತುಂಬಿಸುವ ವಿಚಾರದಲ್ಲಿ ಈ ಅಭಿವೃದ್ಧಿ ಕಾರ್ಯವನ್ನು ವಿರೋಧ ಪಕ್ಷಗಳ ನಾಯಕರು ಒಪ್ಪಿಕೊಳ್ಳುತ್ತಾರೆಂಬ ನಂಬಿಕೆ ಇದ್ದು, ಈ ಅಭಿವೃದ್ಧಿ ಕಾಮಗಾರಿಗಳನ್ನು ನೋಡಿಯೂ ಮತ್ತೆ ಟೀಕೆ ಮಾತನಾಡುತ್ತಾರೆ ಎಂದರೆ ಅವರ ಮನಸ್ಥಿತಿ ಸರಿಯಿಲ್ಲವೆಂದೆನಿಸುತ್ತದೆ’ ಎಂದರು.

ಜಿಲ್ಲಾಧಿಕಾರಿಗಳೊಡನೆ ಗೋಶಾಲೆಯ ಬಗ್ಗೆ ಪ್ರಸ್ತಾಪಿಸಿದ್ದು, ತಾಲ್ಲೂಕಿನ ಚಿಕ್ಕಬಾಸೂರಿನಲ್ಲಿ ಗೋಶಾಲೆ ತೆಗೆಯುವ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಮದಗದ ಕೆರೆಯಿಂದ ಆರಂಭಿಕವಾಗಿ ಎಮ್ಮೆದೊಡ್ಡಿ ಭಾಗದ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯೊದನ್ನು ರೂಪಿಸುವ ಬಗ್ಗೆ ಡಿಸಿ ಅವರೊಡನೆ ಮಾತನಾಡಿದ್ದೇನೆ.ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಸೀಗೇಹಡ್ಲು ಹರೀಶ್, ಎಂ.ಕೆ.ಮಹೇಶ್ವರಪ್ಪ, ಯರದಕೆರೆ ರಾಜಪ್ಪ ಇದ್ದರು.

ಅಂಕಿ ಅಂಶ
ಕಡೂರು ತಾಲ್ಲೂಕಿನಲ್ಲಿ ಯೋಜನೆಯ ಒಟ್ಟು ಉದ್ದ 65 ಕಿ.ಮೀ.
ಯೋಜನೆಯಲ್ಲಿ ಕಡೂರು ತಾಲ್ಲೂಕಿಗೆ ಬಿಡುಗಡೆಯಾಗಿರುವ ಹಣ-171 ಕೋಟಿ.
2 ಕೋಟಿ ವಿಶೇಷ ಅನುದಾನ ಚಿಕ್ಕಂಗಳ ಭಾಗದ ಗ್ರಾಮಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೀಸಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.