ADVERTISEMENT

ದೇಶಕ್ಕೆ ಅಗತ್ಯವಾದುದನ್ನು ನೀಡಲು ಬಿಜೆಪಿ ಕಟಿಬದ್ಧ: ಶಾಸಕ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 10:09 IST
Last Updated 17 ಮಾರ್ಚ್ 2018, 10:09 IST

ಕಡೂರು: ದೇಶಕ್ಕೆ ಪ್ರಸ್ತುತ ಅಗತ್ಯವಾಗಿರುವುದನ್ನು ನೀಡಲು ನರೇಂದ್ರ ಮೋದಿಯವರ ಸರ್ಕಾರ ಕಟಿಬದ್ಧವಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಕಡೂರಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಕಮಲ ಜಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಜೆಪಿಯ ಧ್ಯೇಯೋದ್ದೇಶ ಮತ್ತು ನರೇಂದ್ರ ಮೋದಿಯವರ ಸರ್ಕಾರದ ಸಾಧನೆ ತಿಳಿಸುವ ವಿಶಿಷ್ಟ ಕಾರ್ಯಕ್ರಮ ಕಮಲಜಾತ್ರೆ ಎಂದರು.

ಸ್ವಾತಂತ್ರ್ಯ ಬಂದು 70 ವರ್ಷವಾದರೂ ಬಹಳಷ್ಟು ಜನರಿಗೆ ಬ್ಯಾಂಕ್ ಖಾತೆಯಿರಲಿಲ್ಲ. ದೇಶಕ್ಕೆ ಟೋಪಿ ಹಾಕಿರುವ ಶ್ರೀಮಂತರಿಗೆ ₹10 ಲಕ್ಷ ಕೋಟಿ ಸಾಲ ನೀಡಿರುವುದು ಕಾಂಗ್ರೆಸ್ ಸರ್ಕಾರ. ಅದನ್ನು ಬಿಜೆಪಿ ತಲೆಗೆ ಕಟ್ಟಲು ಪ್ರಯತ್ನ ನಡೆದಿದೆ. ಆದರೆ, ಬಡವರಿಗೂ ಸಾಲ ಸಿಗುವಂತೆ ಮಾಡಿ ತಾನೇ ಖಾತರಿ ನೀಡುವ ಮಹತ್ತರವಾದ ಕಾರ್ಯ ಮಾಡಿದ್ದು ನರೇಂದ್ರ ಮೋದಿ ಸರ್ಕಾರ.

ADVERTISEMENT

ದೇಶದ ಬಡಜನತೆ ಸಶಕ್ತವಾಗಲು, ಸ್ವಾಭಿಮಾನದಿಂದ ಬದುಕಲು ಶ್ರಮಿಸುತ್ತಿರುವ ಮೋದಿಯವರ ಸರ್ಕಾರದ ಸಾಧನೆಗಳನ್ನು ಇಲ್ಲಿ ಅರಿತು ಮುಂದಿನ ಚುನಾವಣೆಯಲ್ಲಿ ಸಮಾನತೆಯ ಪ್ರತಿಪಾದಕ, ಜಾತಿರಹಿತ ಅಭಿವೃದ್ಧಿಯ ಸರ್ಕಾರವನ್ನು ಚುನಾಯಿಸಬೇಕು ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಬೆಳ್ಳಿಪ್ರಕಾಶ್, ಮುಖಂಡರಾದ ಡಾ.ವೈ.ಸಿ.ವಿಶ್ವನಾಥ್, ಬೀರೂರು ದೇವರಾಜ್, ವಿಜಯಕುಮಾರ್ ಇದ್ದರು.

ಮನರಂಜನೆಗೂ ವ್ಯವಸ್ಥೆ
ಕಮಲ ಜಾತ್ರೆಯಲ್ಲಿ ಮೋದಿ ಸರ್ಕಾರದ ಮತ್ತು ಬಿಜೆಪಿ ಸಾಧನೆಗಳನ್ನು ಬಿಂಬಿಸುವ ಜತೆಗೆ ಕೌಟುಂಬಿಕ ಮನರಂಜನೆಗೂ ವ್ಯವಸ್ಥೆ ಮಾಡಲಾಗಿದೆ.

ಚಾಟ್ಸ್ ಮತ್ತು ದೇಸಿ ತಿಂಡಿಗಳು ಮತ್ತು ಮಕ್ಕಳಿಗೆ ಹಲವು ವಿಧದ ಆಟೋಟಗಳೂ ಇದ್ದವು. ಲೇಸರ್‍ ಶೋ ಮತ್ತು ಬಿ.ಸಿ.ಪಾಟೀಲರ ಜಾದು ಪ್ರದರ್ಶನ ಗಮನ ಸೆಳೆಯಿತು. ಶಾಸಕ ಸಿ.ಟಿ.ರವಿ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಯುವಕರು ಮುಗಿಬಿದ್ದಿದ್ದರು. ಮುಂದಿನ ಮೂರು ದಿನಗಳು ಕಮಲ ಜಾತ್ರೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.