ADVERTISEMENT

ನಂದಿಬಟ್ಟಲು: ಕಾಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 7:10 IST
Last Updated 6 ಸೆಪ್ಟೆಂಬರ್ 2017, 7:10 IST

ತರೀಕೆರೆ: ತಾಲ್ಲೂಕಿನ ಲಿಂಗದಹಳ್ಳಿ ಹೋಬಳಿಯ ಉಡೇವಾ ಸಾಮಾನ್ಯ ಅರಣ್ಯ ವಿಭಾಗಕ್ಕೆ ಸೇರಿದ ನಂದಿಬಟ್ಟಲು ಗ್ರಾಮದ ರೈತ ಸಿದ್ಧನಾಯ್ಕ ಅವರ ಜಮೀನಿನಲ್ಲಿ ಮಂಗಳವಾರ ಒಂಟಿ ಕೋರೆಯ ಸುಮಾರು 25 ವರ್ಷ ಪ್ರಾಯದ ಗಂಡು ಕಾಡಾನೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ.

ಆನೆಯ ಸೊಂಡಿಲಿನ ಹಿಂಭಾಗದಲ್ಲಿ ಗಾಯದ ಗುರುತನ್ನು ಪತ್ತೆ ಹಚ್ಚಲಾಗಿದ್ದು, ವಿದ್ಯುತ್ ತಂತಿ ಸ್ಪರ್ಶದಿಂದಾಗಿ ಆನೆ ಸತ್ತಿರಬಹುದೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯ ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸಾವಿನ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿಗಳಾದ ರವೀಂದ್ರ ಕುಮಾರ್, ಶರಣಬಸಪ್ಪ, ವಲಯಾರಣ್ಯಾಧಿಕಾರಿ ಸಂತೋಷ್ ಸಾಗರ್, ಮೆಸ್ಕಾಂ ಸಹಾ ಯಕ ಕಾರ್ಯಪಾಲಕ ಎಂಜಿನಿಯರ್‌ ರುದ್ರಸ್ವಾಮಿ, ಪೊಲೀಸ್ ಸಬ್‍ ಇನ್‌ಸ್ಪೆಕ್ಟರ್ ಮಂಜುಳಬಾಯಿ, ಸಿಬ್ಬಂದಿ ಸಂತೋಷ್, ಎಂ.ಎಸ್. ಪ್ರದೀಪ್, ಮಂಜುನಾಥ್ ಮಾಮೇನಿ ಇದ್ದರು.

ADVERTISEMENT

ಗ್ರಾಮಸ್ಥರ ಆಗ್ರಹ: ತಣಿಗೆಬೈಲು ವನ್ಯಜೀವಿ ವಲಯಾರಣ್ಯದ ವ್ಯಾಪ್ತಿಯಲ್ಲಿ ನಾಲ್ಕೈದು ವರ್ಷಗಳ ಅವಧಿಯಲ್ಲಿ ಲಾಲ್‌ಬಾಗ್ ಕಾಫಿ ತೋಟ, ನಂದಿಬಟ್ಟಲು ಗ್ರಾಮದ ವ್ಯಾಪ್ತಿಯಲ್ಲಿ ಮೂರು ಹಾಗೂ ಗುಡ್ಡದ ಬೀರನಹಳ್ಳಿ ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ. ಕಾಡು ಪ್ರಾಣಿಗಳ ಜೀವ ರಕ್ಷಣೆಗೆ ಇಲಾಖೆ ಕೂಡಲೇ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆಯು ಬ್ಯಾಟರಿ ಚಾಲಿತ ಬೇಲಿಯನ್ನು ದುರಸ್ತಿ ಮಾಡಿ ಕಾಡುಪ್ರಾಣಿಗಳ ದಾಳಿಯಿಂದ ರೈತರ ಬೆಳೆಗಳ ರಕ್ಷಣೆ ಮಾಡುವಂತೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡಿದ್ದರೂ ಸಹ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆರ್. ಪ್ರಭು ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.