ADVERTISEMENT

ಪಂಚಾಯಿತಿ ಪೈಪ್‌ಗಳು ಅಧ್ಯಕ್ಷರ ಮನೆಯಲ್ಲಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2015, 5:40 IST
Last Updated 16 ಡಿಸೆಂಬರ್ 2015, 5:40 IST

ಕೊಪ್ಪ: ತಾಲ್ಲೂಕಿನ ಅಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಮೋರಿಗಳಿಗೆ ಅಳವಡಿಸಲು ಖರೀದಿಸಿದ್ದ ಸಿಮೆಂಟ್ ಪೈಪ್‌ಗಳನ್ನು ಪಂಚಾಯಿತಿ ಅಧ್ಯಕ್ಷರ ಮನೆಯಲ್ಲಿ ಸಂಗ್ರಹಿಸಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

14ನೇ ಹಣಕಾಸು ಯೋಜನೆ ಅನು ದಾನದಲ್ಲಿ, ಅಗಳಗಂಡಿ ಪಂಚಾಯಿತಿಗೆ ಇದೇ 11ರಂದು ಸ್ಥಳೀಯ ಟಿಎಪಿ ಸಿಎಂಎಸ್ ಶಾಖೆಯಿಂದ ₹ 60 ಸಾವಿರ ಮೌಲ್ಯದ 26 ಪೈಪುಗಳನ್ನು ಖರೀದಿ ಸಿದ್ದು, ಅವುಗಳನ್ನು ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಗ್ರಹಿಸಿಡುವ ಬದಲು ಭದ್ರತೆಯ ಕಾರಣ ನೀಡಿ ಅಧ್ಯಕ್ಷೆ ಬಿ.ಇ. ಸವಿತಾ ತಮ್ಮ ಮನೆಗೆ ಸಾಗಿಸಿರುವುದಕ್ಕೆ ಸದಸ್ಯ ಆತ್ಮಾರಾಂ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪಂಚಾಯಿತಿ ಸದಸ್ಯ ಆತ್ಮಾರಾಂ ಪ್ರತಿಕ್ರಿಯಿಸಿ, ಪಂಚಾಯಿತಿ ಯಲ್ಲಿ ಬಿಜೆಪಿ ಬೆಂಬಲಿತ 8 ಸದಸ್ಯರಿದ್ದು, ಆಡಳಿತ ಚುಕ್ಕಾಣಿ ಅವರ ಕೈಯ್ಯಲ್ಲಿದೆ. ಕಾಂಗ್ರೆಸ್ ಬೆಂಬಲಿತ ಏಕೈಕ ಸದಸ್ಯನಾದ ತಮಗೆ ಪಂಚಾಯಿತಿಯ ಯಾವುದೇ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಗ್ರಾಮೀಣ ರಸ್ತೆಗಳ ಮೋರಿಗಳಿಗೆ ಬಳಸಲು ಖರೀದಿಸಿದ್ದ ಪೈಪ್‌ಗಳನ್ನು ಪಂಚಾಯಿತಿಗೆ ಜಮಾ ಮಾಡದೆ ಬಿಲ್ ಪಾವತಿಸಲು ನಿರಾಕರಿಸಿದ ಪಿಡಿಒಗೆ ದಬಾಯಿಸಿ, ತಾಲ್ಲೂಕು ಪಂಚಾಯಿತಿ ಇಒ ಮೂಲಕ ಒತ್ತಡ ಹೇರಲಾಗಿದೆ. ಇದರ ವಿರುದ್ಧ ತಾವು ಆಕ್ಷೇಪಿಸಿದಾಗ ಅಧ್ಯಕ್ಷೆಯ ಪತಿ ಹಾಗೂ ಬೆಂಬಲಿಗರು ನನ್ನ ವಿರುದ್ಧ ಜಗಳವಾಡಿದ್ದಾರೆ. ಕೊನೆಗೆ ಪೈಪ್‌ಗಳು ಕಚೇರಿ ದಾಸ್ತಾನಿನಲ್ಲಿರದೆ ಅಧ್ಯಕ್ಷರ ಸುಪರ್ದಿಯಲ್ಲಿದ್ದು, ಅವರೇ ಜವಾಬ್ದಾರರೆಂದು ಬರೆದುಕೊಟ್ಟು ಬಿಲ್ ಪಾವತಿಸಿಕೊಂಡಿದ್ದಾರೆ’ ಎಂದರು.  

‘ಈ ಬಗ್ಗೆ ತಾವು ಈಗಾಗಲೇ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದು, ಪಂಚಾಯಿತಿ ವೆಚ್ಚದಲ್ಲಿ ಖರೀದಿಸಿದ ಪೈಪ್‌ಗಳನ್ನು ಕೂಡಲೇ ಪಂಚಾಯಿತಿ ಸುಪರ್ದಿಗೆ ಒಪ್ಪಿಸಬೇಕು. ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ ಪಂಚಾಯಿತಿ ಆಸ್ತಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟು, ಮತದಾ ರರ ಓಲೈಕೆಗಾಗಿ ದುರ್ಬಳಕೆ ಮಾಡು ತ್ತಿದ್ದು, ಇದರ ವಿರುದ್ಧ ಸಂಬಂಧಪಟ್ಟ ವರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಭದ್ರತೆ ಕಾರಣ : ತಮ್ಮ ಮೇಲೆ ಬಂದಿ ರುವ ಆರೋಪದ ಬಗ್ಗೆ ಪಂಚಾಯಿತಿ ಅಧ್ಯಕ್ಷೆ ಬಿ.ಇ. ಸವಿತಾ ಪ್ರತಿಕ್ರಿಯಿಸಿ, ಭದ್ರತೆಯ ಉದ್ದೇಶದಿಂದ ಪೈಪ್‌ಗಳನ್ನು ತಮ್ಮ ಮನೆಯಲ್ಲಿ ಸಂಗ್ರಹಿಸಿಡಲಾಗಿದೆ. ಈ ಹಿಂದೆ ಫಲಾನುಭವಿಗಳಿಗೆ ವಿತರಿ ಸಲು ಪಂಚಾಯಿತಿ ಆವರಣದಲ್ಲಿ ಸಂಗ್ರ ಹಿಸಿಟ್ಟಿದ್ದ ಗಿಡಗಳು ಕಳವಾಗಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಅಧ್ಯಕ್ಷರೂ ಪಂಚಾಯಿತಿ ಸೌಲಭ್ಯಗಳನ್ನು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟು ಫಲಾನುಭವಿ ಗಳಿಗೆ ವಿತರಿಸಿದ್ದರು. ಅದರಂತೆ ತಾವು ಭದ್ರತೆಯ ದೃಷ್ಟಿಯಿಂದ ಪಂಚಾಯಿತಿಗೆ ಖರೀದಿಸಿದ  ಪೈಪ್‌ಗಳನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದು, ಪಂಚಾಯಿತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ವಿತರಿಸಲಾಗುವುದು. ಇದರಲ್ಲಿ ಬೇರೆ ಯಾವುದೇ ದುರುದ್ದೇಶವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.