ADVERTISEMENT

ಪರಿಶಿಷ್ಟ ಜನಾಂಗಕ್ಕೆ ₹ 6.27 ಕೋಟಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 6:06 IST
Last Updated 15 ಮಾರ್ಚ್ 2017, 6:06 IST

ಮೂಡಿಗೆರೆ: ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕಾವೇರಿ ನೀರಾವರಿ ನಿಗಮದಿಂದ ₹ 6.27 ಕೋಟಿ ಮಂಜೂರಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ತಿಳಿಸಿದರು.

ತಾಲ್ಲೂಕಿನ ಹೆಸ್ಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗುಳದಲ್ಲಿ ಮಂಗಳವಾರ ಕಾವೇರಿ ನೀರಾವರಿ ನಿಗಮದಿಂದ ಮಂಜೂರಾಗಿರುವ ₹ 6.27 ಕೋಟಿ ಅನುದಾನದ ಕಾಮ ಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಬಳಸ ಬೇಕಾಗಿದ್ದ ₹ 2 ಸಾವಿರ ಕೋಟಿ ಅನುದಾನವನ್ನು ಯಾವುದೇ ಯೋಜನೆ ಗಳಿಗೆ ಬಳಸಿಕೊಳ್ಳದೇ ಸ್ಥಗಿತಗೊಳಿಸಲಾ ಗಿತ್ತು. ತಾವು ಪರಿಶಿಷ್ಟ ಜನಾಂಗ ಕಲ್ಯಾಣ ಸಮಿತಿಯ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ, ಕಾವೇರಿ ನದಿಪಾತ್ರದ ಜಿಲ್ಲೆಗಳಿಗೆ ಅನುದಾನ ಲಭ್ಯವಾಗುವಂತೆ ಒತ್ತಾಯಿಸಿ ಅನುದಾನ ಮಂಜೂರು ಮಾಡಿಸಿದ್ದು, ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ₹ 6.27 ಕೋಟಿ ಅನುದಾನ ದೊರೆತಿದೆ. ಇದರಲ್ಲಿ ₹ 3.27 ಕೋಟಿ ಮೊತ್ತದಲ್ಲಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 113 ಮಂದಿ ಪರಿಶಿಷ್ಟ ಜಾತಿಯ ರೈತ ಕುಟುಂಬಗಳಿಗೆ ಕೊಳವೆಬಾವಿ ನಿರ್ಮಿಸಿ, ಪೈಪ್‌ಲೈನ್‌ ಅಳವಡಿಸಿ ಕೃಷಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಲಾಗು ವುದು. ಪ್ರತಿ ಫಲಾನುಭವಿಗಳಿಗೂ ₹ 3 ಲಕ್ಷ ವೆಚ್ಚದಲ್ಲಿ ಯೋಜನೆ ಅಳವಡಿಸಿಕೊಡಲಾಗುವುದು. ಉಳಿದ ಮೂರು ಕೋಟಿ ಮೊತ್ತವನ್ನು ದಲಿತ ಕಾಲೊನಿಗಳಿಗೆ ಮೂಲಸೌಲಭ್ಯ ಕಲ್ಪಿಸಲು ಬಳಸಲಾಗುವುದು ಎಂದರು.

ADVERTISEMENT

ಈ ಯೋಜನೆಯಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ 57 ಮಂದಿ ಪರಿಶಿಷ್ಟ ಜಾತಿ ಹಾಗೂ 2 ಮಂದಿ ಪರಿಶಿಷ್ಟ ಪಂಗಡದವರಿಗೆ ಹಾಗೂ ಚಿಕ್ಕಮಗ ಳೂರು ತಾಲ್ಲೂಕಿನಲ್ಲಿ 52 ಮಂದಿ ಪರಿಶಿಷ್ಟ ಜಾತಿ ಹಾಗೂ 2 ಮಂದಿ ಪರಿಶಿಷ್ಟ ಪಂಗಡದವರಿಗೆ ಯೋಜನೆ ಲಭ್ಯವಾಗಲಿದ್ದು, ಈ ಯೋಜನೆಯು ಪ್ರತಿ ವರ್ಷ ಜಾರಿಯಾಗುವುದರಿಂದ ಹಂತ ಹಂತವಾಗಿ ಪರಿಶಿಷ್ಟ ಜನಾಂಗದ ಎಲ್ಲಾ ಕುಟುಂಬಗಳಿಗೂ ತಲುಪುವಂತೆ ಮಾಡಲಾಗುವುದು ಎಂದರು.

ದಲಿತ ಕುಟುಂಬಗಳು ಸಣ್ಣ ರೈತರಾಗಿದ್ದು, ವೈಜ್ಞಾನಿಕ ಕೃಷಿ ನಡೆಸದ ಕಾರಣ, ಕೃಷಿಗೆ ಜಮೀನಿದ್ದರೂ ಆರ್ಥಿಕ ವಾಗಿ ಸಬಲರಾಗಿಲ್ಲ. ಆದ್ದರಿಂದ ತಾಲ್ಲೂ ಕಿನ ದಲಿತ ರೈತರಿಗಾಗಿಯೇ ಪರಿಶಿಷ್ಟ ಜಾತಿ ವಿವಿಧೋದ್ದೇಶ ಸಹಕಾರ ಸಂಘವಿದ್ದು, ಪ್ರತಿಯೊಬ್ಬ ರೈತರು ಸಂಗದ ಸದಸ್ಯರಾಗಿ ಸಂಘ ನೀಡುವ ಸಾಲವನ್ನು ಪಡೆದು, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಬಿಳಗುಳದಲ್ಲಿ ಕಳೆದ ವರ್ಷ ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದ ಈಶ್ವರ ಎಂಬ ರೈತರ ಜಮೀನಿನಲ್ಲಿ ಕೊಳವೆಬಾವಿ ನಿರ್ಮಿ ಸಲು ಸಾಂಕೇತಿಕ ಪೂಜೆ ಸಲ್ಲಿಸ ಲಾಯಿತು. ಹೆಸ್ಗಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಜಾವತಿ, ಸದಸ್ಯ ಗಿರೀಶ್‌, ಪ್ರಕಾಶ್‌, ರಮೇಶ್‌, ಬಿ.ಎಂ. ಶಂಕರ್‌, ಎಂಜಿನಿಯರ್‌ ಆನಂದ, ಗುತ್ತಿಗೆದಾರ ಮನೋಹರ್‌ ಮುಂತಾದವರಿದ್ದರು.

**

‘ಸಹಕಾರಿ ಬ್ಯಾಂಕುಗಳಲ್ಲಿ ₹3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುತ್ತಿದ್ದು, ಪರಿಶಿಷ್ಟ ಜನಾಂಗದವರು ಸಾಲದ ಲಾಭ ಪಡೆದು ವೈಜ್ಞಾನಿಕ ಕೃಷಿ ನಡೆಸಲು ಮುಂದಾಗಬೇಕು’ 
–ಬಿ.ಬಿ. ನಿಂಗಯ್ಯ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.