ADVERTISEMENT

ಬದಲಾವಣೆಗೆ ಹೊಂದಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:42 IST
Last Updated 25 ಏಪ್ರಿಲ್ 2017, 6:42 IST
ನರಸಿಂಹರಾಜಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ಮಾತನಾಡಿದರು.
ನರಸಿಂಹರಾಜಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ಮಾತನಾಡಿದರು.   

ನರಸಿಂಹರಾಜಪುರ: ‘ಬದುಕು ನಿಂತ ನೀರಾಗಿರದೆ ಅದು ಬದಲಾಗುವುದು ಜಗದ ನಿಯಮ. ಅದಕ್ಕೆ ಹೊಂದಿ ಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು’ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಕಾರ್ಯವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ತಲೆಮಾರಿನ ಅಂತರದಿಂದಾಗಿ ಪ್ರಸ್ತುತ ದಿನದಲ್ಲಿ ಏರಿಳಿತಗಳು ಉಂಟಾಗುತ್ತಿದ್ದು, ಇದರಿಂದ ಸಮಾಜಕ್ಕೆ ಒಳಿತು, ಕೆಡಕುಗಳು ಉಂಟಾಗುತ್ತಿವೆ. ಬದುಕು, ಶೈಕ್ಷಣಿಕ ಆಯ್ಕೆಗಳನ್ನು ಆತುರವಾಗಿ ತೆಗೆದುಕೊಳ್ಳದೆ ಯೋಚಿಸಿ ತೆಗೆದುಕೊಳ್ಳಬೇಕು. ಬದುಕನ್ನು ಫಲಪ್ರದವಾಗಿಸುವ ಕೆಲಸ ಮಾಡಬೇಕು’ ಎಂದರು.

ADVERTISEMENT

ಅರ್ಥಶಾಸ್ತ್ರವಿಭಾಗದ ಮುಖ್ಯಸ್ಥ ಸೈಯದ್ ನಿಜಾಮುದ್ದೀನ್ ಮಾತನಾಡಿ, ‘ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ. ನೈತಿಕತೆ, ಶಿಸ್ತು, ಉತ್ತಮ ಸಂಸ್ಕೃತಿ ಹಿರಿಯರ ವರ್ಗಾವಣೆಯಿಂದ ಬಂದಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ನಡವಳಿಕೆ ಯನ್ನು ತಿದ್ದಿಕೊಳ್ಳಬೇಕು’ ಎಂದು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅಣ್ಣಪ್ಪ ಎನ್.ಮಳೀಮಠ್ ಮಾತನಾಡಿ, ‘ವಿದ್ಯಾರ್ಥಿಗಳು ಪ್ರತಿಕ್ಷಣವನ್ನು ತಮ್ಮ ದಾಗಿಸಿಕೊಂಡಾಗ ಏಳಿಗೆಯಿದೆ. ಬದು ಕಿನ ಸಾಕ್ಷಾತ್ಕಾರವಾಗುತ್ತದೆ. ಕಾಲ ಮತ್ತು ಬದುಕನ್ನು ಉಪಯೋಗಿಸಿಕೊಂಡು ಶಿಕ್ಷಣದ ಮೂಲಕ ಅರ್ಥಪೂರ್ಣವಾಗಿ ಬದುಕು ರೂಪಿಸಿಕೊಳ್ಳಬೇಕು’ ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಪಿ.ಚಂದ್ರಶೇಖರ್ ಮಾತನಾಡಿ, ‘ಮುಗ್ಧತೆ ಮತ್ತು ತಾಯಿ ಕರುಣೆಯಿಂದ ಮಾತ್ರ ಜಗತ್ತನ್ನು ಗೆಲ್ಲಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸಮಾಜಶಾಸ್ತ್ರವಿಭಾಗದ ಮುಖ್ಯಸ್ಥ ಲಕ್ಷ್ಮಣ್ ನಾಯ್ಕ್ ಮಾತನಾಡಿ, ‘ಹಣ, ಸಂಪತ್ತನ್ನು ಕಳೆದುಕೊಂಡರೆ ಮತ್ತೆ ಸಂಪಾದಿಸಬಹುದು. ಉತ್ತಮ ನಡತೆ ಜೀವನದ ಕನ್ನಡಿಯಿದ್ದಂತೆ ಇದನ್ನು ಯಾವಾಗಲು ಕಳೆದುಕೊಳ್ಳಬಾರದು’ ಎಂದರು.

ಗ್ರಂಥಪಾಲಕ ಕೃಷ್ಣ ನಾಯ್ಕ್, ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಅಬ್ದುಲ್‌ ವಹಾಬ್ ಮಾತನಾಡಿದರು, ವಿದ್ಯಾರ್ಥಿಗಳಾದ ಶ್ರೇಯಾಲದೇವಿ, ಅಶ್ರಫ್, ಅನುಷಾ, ಅಭಿಜಿತ್, ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.