ADVERTISEMENT

ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 9:40 IST
Last Updated 13 ಡಿಸೆಂಬರ್ 2017, 9:40 IST

ಚಿಕ್ಕಮಗಳೂರು: ದತ್ತಪೀಠದಲ್ಲಿ ಈಚೆಗೆ ನಡೆದ ದತ್ತ ಜಯಂತಿ ಆಚರಣೆ ವೇಳೆ ನಿಷೇಧಿತ ಪ್ರದೇಶದಲ್ಲಿನ ಗೋರಿಗಳಿಗೆ ದತ್ತ ಭಕ್ತರು ಹಾನಿ ಉಂಟು ಮಾಡಿದ್ದಾರೆ. ಶಾಸಕ ಸಿ.ಟಿ.ರವಿ ಅವರು ಪ್ರಕರಣದ ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ಏಕತಾ ವೇದಿಕೆ ಸಂಸ್ಥಾಪಕ ಅಫ್ಜಲ್ ಪಾಷಾ ಇಲ್ಲಿ ಮಂಗಳವಾರ ಒತ್ತಾಯಿಸಿದರು.

ಶಾಸಕರು ಕ್ಷೇತ್ರದ ಎಲ್ಲ ವರ್ಗ, ಸಮುದಾಯದವರ ಪ್ರತಿನಿಧಿ ಎಂಬುದನ್ನು ಮರೆಯಬಾರದು. ಗೋರಿಗಳಿಗೆ ಹಾನಿ ಉಂಟಾದಾಗ ಅದನ್ನು ಶಾಸಕರು ಸಮರ್ಥಿಸಿಕೊಂಡಿರುವುದು ಖಂಡನಾರ್ಹ. ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಚುನಾವಣೆ ಪ್ರಚಾರ ನಡೆಸಲಿ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗೋರಿಗಳಿಗೆ ಹಾನಿ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಸಂಘಟನೆಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡುತ್ತಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರು ಅನುಮತಿ ಕೇಳಲು ಹೋದವರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ. ಸಂಘಟನೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು. ವೇದಿಕೆ ಪ್ರಧಾನ ಕಾರ್ಯದರ್ಶಿ ಎಸ್.ದೀಪಕ್, ಸಂಘಟನಾ ಕಾರ್ಯದರ್ಶಿ ಇಮ್ರಾನ್ ಖಾನ್, ಸದಸ್ಯ ಖಲಂದರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.