ADVERTISEMENT

ಮಲೆನಾಡಿನಲ್ಲೀಗ ಕಲ್ಲೇಡಿ ಕಟಂ!

ಖರ್ಚಿಲ್ಲದೇ ಏಡಿಸಾರಿನ ಭೋಜನ ತಯಾರಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 13:06 IST
Last Updated 10 ಜೂನ್ 2018, 13:06 IST

ಮಲೆನಾಡಿನಲ್ಲೀಗ ಮಳೆಯ ಸೊಬಗು. ಧೋ ಎಂದು ಸುರಿವ ಮಳೆಯಲ್ಲಿಯೇ ಏಡಿ, ಕಳಿಲೆ, ಅಣಬೆ ಹುಡುಕುವ ಸಂಭ್ರಮ ಅನುಭವಿಸಿದವರಿಗಷ್ಟೇ ಗೊತ್ತು! ಮಲೆನಾಡಿನಲ್ಲಿ ರೋಹಿಣಿ ಮಳೆಯ ಆರ್ಭಟ ಹೆಚ್ಚು. ಆದ್ದರಿಂದಲೇ ಏನೋ ‘ರೋಣಿ ಮಳೆಯಲ್ಲಿ ಓಣಿಯೆಲ್ಲಾ ಕೆಸರಾಗಿ, ಏರಿ ಬದುವಲ್ಲಿ ಏಡಿ ಬಂದು...! ಎಂಬ ಗಾದೆ ಮಾತು ರೋಹಿಣಿ ಮಳೆಯ ಮಹತ್ವವನ್ನು ಸಾರುತ್ತದೆ.

ರೋಹಿಣಿ ಮಳೆಯು ಏಡಿಗಳ ಸಂತಾನೋತ್ಪತ್ತಿಯ ಕಾಲಘಟ್ಟ. ಆದ್ದರಿಂದಲೇ ಕಲ್ಲು ಸಂದಿಯಲ್ಲಿ ಅಡಗಿ ಕುಳಿತ ಏಡಿಗಳು ರೋಹಿಣಿ ಮಳೆಯ ಕಾಲದಲ್ಲಿ ಕಲ್ಲಿನಿಂದ ಹೊರ ಬಂದು ಮರಿಗಳನ್ನು ನೀರಿನಲ್ಲಿ ಸೋಸುವ ಕಾರ್ಯ ಮಾಡುತ್ತವೆ. ಇದನ್ನು ಅರಿತಿರುವ ಮಾಂಸಾಹಾರ ಪ್ರಿಯರು ರೋಹಿಣಿ ಮಳೆಯಲ್ಲಿ ಖರ್ಚಿಲ್ಲದೇ ಏಡಿಸಾರಿನ ಮೂಲಕ ಮಾಂಸಾಹಾರ ಸವಿಯುತ್ತಾರೆ.

ಇತ್ತೀಚೆಗೆ ಸಂಜಯ್‌ ಎಂಬ ಗೆಳೆಯರೊಬ್ಬರು ತಮ್ಮ ಫೇಸ್‌ಬುಕ್‌ ಗೋಡೆಯ ಮೇಲೆ ಏಡಿ ಹಿಡಿಯಲು ತೆರಳುವ ಸಂದೇಶವನ್ನು ಬರೆದುಕೊಂಡಿದ್ದರು. ಕುತೂಹಲದಿಂದ ಏಡಿ ಹಿಡಿಯುವ ಕಾಯಕವನ್ನು ನೋಡಬೇಕೆಂದು ಹೋದಾಗ ಸಂಜಯ್‌, ಭರತ್‌ ಅವರನ್ನೊಳಗೊಂಡ ಗುಂಪು ಏಡಿ ಹಿಡಿಯುತ್ತಿದ್ದು, ಅದನ್ನು ಹತ್ತಿರದಿಂದ ಕಂಡಾಗ ಅನೇಕ ಅಚ್ಚರಿ ಸಂಗತಿಗಳು ಕಾಣಸಿಕ್ಕವು.

ADVERTISEMENT

ಮಲೆನಾಡಿನಲ್ಲಿ ಸಿಗುವ ಏಡಿಗಳಲ್ಲಿ ಮೂರು ಪ್ರಕಾರಗಳಿವೆ. ಅವುಗಳೆಂದರೆ ಕಲ್ಲೇಡಿ, ಹುಲ್ಲೇಡಿ, ಹಾಲೇಡಿ. ಇದರಲ್ಲಿ ಕಲ್ಲೇಡಿ ಹಾಗೂ ಹುಲ್ಲೇಡಿಗಳನ್ನು ಆಹಾರವನ್ನಾಗಿ ಬಳಸಿದರೆ, ಹಾಲೇಡಿ ಮಾತ್ರ ಸೇವನೆಗೆ ನಿಷಿದ್ಧ. ಅಲ್ಪಾಯುಷಿಯಾದ ಹುಲ್ಲೇಡಿಗಳನ್ನು ಭತ್ತದ ಗದ್ದೆಗಳಲ್ಲಿ ಮಾತ್ರ ಕಾಣಲು ಸಾಧ್ಯ. ಭತ್ತದ ಗದ್ದೆಗಳಲ್ಲಿ ಬೆಳೆಯುವ ಕಳೆಯನ್ನು ತಿಂದು ಬದುಕುವ ಹುಲ್ಲೇಡಿಗಳು ಕೇವಲ ಒಂದೂವರೆ ತಿಂಗಳು ಮಾತ್ರ ಬದುಕುಳಿಯುತ್ತವೆ. ಭತ್ತದ ಗದ್ದೆಗಳಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಗದ್ದೆಯಲ್ಲಿಯೇ ತಮ್ಮ ಬದುಕಿನ ಪಯಣ ಮುಗಿಸುತ್ತವೆ. ಇದರ ನಡುವೆಯೇ ಗದ್ದೆಯ ಕಳೆ ಕೀಳುವ ಮಹಿಳೆಯರು ಹುಲ್ಲೇಡಿಗಳನ್ನು ಹಿಡಿದು, ಹುಲ್ಲೇಡಿ ಹುರುಕುಲು, ಹುಲ್ಲೇಡಿಪಜ್ಜಿ ಮುಂತಾದ ಬಗೆಯ ಖಾದ್ಯಗಳನ್ನು ತಯಾರಿಸುವುದು ಮಲೆನಾಡಿನ ಹಳ್ಳಿಮೆನೆಯ ಪಾಕಶಾಲೆಯ ಹೆಗ್ಗಳಿಕೆಯಾಗಿದೆ.

ದೀರ್ಘಾಯುಷಿಯಾದ ಕಲ್ಲೇಡಿಗಳು ವರ್ಷಪೂರ್ತಿ ಬದುಕುತ್ತವೆಯಾದರೂ, ರೋಹಿಣಿ ಮಳೆಯ ಕಾಲಘಟ್ಟದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಹರಿಯುವ ಝರಿ, ತೊರೆ, ನದಿಗಳಲ್ಲಿರುವ ಕಲ್ಲುಬಂಡೆಗಳ ನಡುವೆ ಜೀವನ ನಡೆಸುವುದು ಕಲ್ಲೇಡಿಗಳ ವಿಶೇಷ. ನೀರು ಹರಿಯುವ ಕಾವಲುಗಳ ಇಕ್ಕೆಲಗಳಲ್ಲಿರುವ ಬಿಲಗಳಲ್ಲೂ ಕಲ್ಲೇಡಿಗಳು ವಾಸ ಮಾಡುತ್ತವೆ. ಇಂತಹ ಬಿಲದಲ್ಲಿರುವ ಕಲ್ಲೇಡಿಗಳನ್ನು ಹಿಡಿಯಲು ಕಲ್ಲುಗುಂಡಿಗೆಯಿರಬೇಕು. ಏಕೆಂದರೆ ಕಲ್ಲೇಡಿಗಳಿಗಾಗಿ ಬಿಲದೊಳಕ್ಕೆ ಕೈ ಹಾಕಿದಾಗ, ಹಾವುಗಳು ಸಿಗುವುದಂಟು! ಏಡಿ ಹಿಡಿಯಲು ಬಿಲದೊಳಕ್ಕೆ ಹೋದ ಕೈ ಹಾವನ್ನು ಎಳೆದು ತಂದ ಉದಾಹರಣೆಗಳು ಗ್ರಾಮೀಣ ಜನರ ಬಾಯಲ್ಲಿ ಹಾವಿಗಿಂತಲೂ ವೇಗವಾಗಿ ಹರಿದಾಡುತ್ತವೆ.

ಮಲೆನಾಡಿನಲ್ಲಿ ಏಡಿ ಹಿಡಿಯುವುದೇ ಸೊಬಗಿನ ಕಾರ್ಯ. ಸಮಾನ ಮನಸ್ಕರ ಗುಂಪು ಏಡಿ ಹಿಡಿಯಲು ತೆರಳುತ್ತದೆ. ಇವರಲ್ಲಿ ಕಲ್ಲು ಎತ್ತುವರರು, ನೀರಿನಲ್ಲಿ ಕೈಹಾಕಿ ಏಡಿ ಹುಡುಕುವವರು, ಹಿಡಿದ ಏಡಿಗಳ ಕಾಲು ಮುರಿದು ಬ್ಯಾಗಿನೊಳಗೆ ಹಾಕುವವರು, ಬ್ಯಾಗು ಹಿಡಿಯುವವರು ಹೀಗೆ ಏಡಿ ಹಿಡಿಯುವ ಕೆಲಸದಲ್ಲಿ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಹಂಚುವುದುಂಟು. ಏಡಿ ಅಡಗಿ ಕುಳಿತಿರುವ ಕಲ್ಲನ್ನು ಎತ್ತಲು ದಢೂತಿ ದೇಹದವರು ಮುಂದಾದರೆ, ಧೈರ್ಯಶಾಲಿಗಳು ನೀರೊಳಗೆ ಕೈ ಹಾಕಿ ಏಡಿ ಹಿಡಿಯುವ ಜವಾಬ್ದಾರಿ ಹೊರುತ್ತಾರೆ. ಸ್ವಲ್ಪ ಆಲಸಿಗಳಿದ್ದವರು ಬ್ಯಾಗು ಹಿಡಿಯುವ ಕೆಲಸ ನಮ್ಮದು ಎಂದು ಬಿಡುತ್ತಾರೆ. ಒಟ್ಟಿನಲ್ಲಿ ಏಡಿ ಹಿಡಿದು, ಕಾಡಿನಲ್ಲಿಯೇ ಒಲೆಹಾಕಿ ಏಡಿ ಹುರುಕುಲು ಮಾಡಿ ಸವಿಯುವ ಸಂಭ್ರಮ ಸ್ಟಾರ್‌ ಹೋಟೆಲ್‌ಗಳಲ್ಲಿ ದುಬಾರಿ ಬೆಲೆ ನೀಡಿ ಮೃಷ್ಟನ್ನ ಭೋಜನ ಸವಿದುದ್ದಕ್ಕಿಂತ ಹೆಚ್ಚಿನ ಸಂಭ್ರಮ ನೀಡುತ್ತದೆ.

ವಾಸುದೇವ, ಮೂಡಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.