ADVERTISEMENT

ಯಶಸ್ಸಿಗೆ ಅರ್ಹತೆ, ಅವಕಾಶ ಮುಖ್ಯ

ನಗೆಹಬ್ಬದಲ್ಲಿ ಪ್ರಭಾವತಿ ಎಂ.ಹಿರೇಮಠ್ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 7:04 IST
Last Updated 3 ಫೆಬ್ರುವರಿ 2017, 7:04 IST
ಯಶಸ್ಸಿಗೆ ಅರ್ಹತೆ, ಅವಕಾಶ ಮುಖ್ಯ
ಯಶಸ್ಸಿಗೆ ಅರ್ಹತೆ, ಅವಕಾಶ ಮುಖ್ಯ   

ಚಿಕ್ಕಮಗಳೂರು: ‘ಮಕ್ಕಳ ಯಶಸ್ಸಿಗೆ ಅರ್ಹತೆ ಹಾಗೂ ಅವಕಾಶ ಇರಬೇಕು. ಅವುಗಳನ್ನು ನೀಡಿದಾಗ ಮಕ್ಕಳು ಯಶಸ್ಸು ಪಡೆಯಲು ಸಾಧ್ಯ’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ್ ಅಭಿಪ್ರಾಯಪಟ್ಟರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ವಿಕಾಸ ಅಕಾಡೆಮಿ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಗೆ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು. 

ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರ ತರಲು ಸಾಂಸ್ಕೃತಿಕ ಕಾರ್ಯಕ್ರಮಗಳು ಮುಖ್ಯ. ಅವಕಾಶಗಳಿಂದ ವಂಚಿತರಾದರೆ ಪ್ರತಿಭೆ ಹೊರತರಲು ಸಾಧ್ಯವಿಲ್ಲ. ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಉತ್ತಮ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ಬೆಳೆಸುವಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಮಹತ್ವ ಎಂದರು.

ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ಗುರಿ ಸಾಧನೆಗೆ ಏಕಾಗ್ರತೆ, ಶ್ರದ್ಧೆ, ನಿರಂತರ ಅಭ್ಯಾಸ ಮುಖ್ಯ. ಪ್ರಸ್ತುತ ಬಾಲ ವ್ಯವಸ್ಥೆಯಲ್ಲಿ ಲಭ್ಯವಿರುವ ಮಾಹಿತಿಯಲ್ಲಿ ದಾರಿ ತಪ್ಪಿಸುವ ಸಾಧ್ಯತೆಗಳಿವೆ. ಮಹಾತ್ಮರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು. ಸೋಲನ್ನೆ ಗೆಲುವಿನ ಮೆಟ್ಟಿಲನ್ನಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಪಿ.ನಟರಾಜ್ ಮಾತನಾಡಿ, ಮಕ್ಕಳ ಹಕ್ಕು ರಕ್ಷಣಾ ಸಮಿತಿ ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಿಸುತ್ತಿದೆ. ಮಕ್ಕಳಿಗೆ ಶಿಕ್ಷಣದ ಹಕ್ಕುಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಅನಾಥ ಹಾಗೂ ಬೀದಿ ಬದಿ, ಚಿಂದಿ ಆಯುವ ಮಕ್ಕಳನ್ನು ಬಾಲ ಮಂದಿರದಲ್ಲಿ ಸೇರಲು ಅವಕಾಶವಿದ್ದು, ಅವರಿಗೆ ಎಲ್ಲ ಸವಲತ್ತುಗಳನ್ನು ನೀಡುವ ಜತೆಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
 
ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಮಾತನಾಡಿ, ಬಾಲವಿಕಾಸ ಅಕಾಡೆಮಿ ಮಕ್ಕಳ ಯೋಗಕ್ಷೇಮ ಹಾಗೂ ಅವರ ಪ್ರತಿಭೆ ಹೊರತರಲು ಕಾರ್ಯಪ್ರವೃತ್ತವಾಗಿದೆ. 6ರಿಂದ 18 ವಯೋಮಾನದ ಮಕ್ಕಳಲ್ಲಿ ಬೌದ್ಧಿಕ ಮಟ್ಟ ವೃದ್ಧಿಸಲಾಗುತ್ತದೆ. ಸಾಂಸ್ಕೃತಿಕ ಕಲೆ ಕ್ರೀಡೆಯಲ್ಲದೇ ಪರೀಕ್ಷಾ ಪೂರ್ವ ಸಿದ್ಧತೆಗೂ ತರಬೇತಿ ನೀಡುತ್ತಿದೆ ಎಂದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾ ಧೀಶ ದಯಾನಂದ್ ವಿ. ಹಿರೇಮಠ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣಾ ಇಲಾಖೆ ಉಪ ನಿರ್ದೇಶಕ ನಾಗೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಸಿ ಬಸವರಾಜಯ್ಯ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.