ADVERTISEMENT

ಶಾಸಕರಿಂದ ಏಕಪಕ್ಷೀಯ ನಿರ್ಧಾರ: ಕಾಂಗ್ರೆಸ್‌ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:58 IST
Last Updated 19 ಏಪ್ರಿಲ್ 2017, 5:58 IST
ಚಿಕ್ಕಮಗಳೂರು: ಸರ್ಕಾರಿ ಕೆಲಸಗಳನ್ನು ಸ್ಥಳೀಯ ಶಾಸಕರು ಬಿಜೆಪಿ ಪಕ್ಷದ ಕಾರ್ಯಕ್ರಮ ಮಾಡಿಕೊಂಡು ಏಕ ಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಇದಕ್ಕೆ ಆಸ್ಪದ ನೀಡದಂತೆ ಆಗ್ರಹಿಸಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಇತ್ತೀಚೆಗೆ ಜಿಲ್ಲಾಧಿಕಾರಿ ಜಿ.ಸತ್ಯವತಿಗೆ ಮನವಿ ಸಲ್ಲಿಸಿದರು.
 
ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳಡಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಉಲ್ಲಂಘಿಸಿ ಏಕ ಪಕ್ಷೀಯವಾಗಿ ಉದ್ಘಾಟಿಸಲಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 
 
‘ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನದ ಅಡಿಯಲ್ಲಿ ಅಭಿವೃದ್ಧಿ ಪಡಿಸಿರುವ ನಗರದ ಮಹಾತ್ಮ ಗಾಂಧಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಗಳನ್ನು ಶಾಸಕರು ಒಬ್ಬರೆ ಉದ್ಘಾಟಿಸಿದ್ದಾರೆ.
 
ನಗರಸಭೆಯ ಯಾವುದೇ ಸಭೆಯಲ್ಲಿ ಪ್ರಸ್ತಾಪಿಸದೆ ವಿರೋಧ ಪಕ್ಷ ಸ್ಥಾನದಲ್ಲಿರುವ ಕಾಂಗ್ರೆಸ್ ಸದಸ್ಯರಿಗೂ ಮಾಹಿತಿ ನೀಡದೆ, ಕಾಟಾಚಾರಕ್ಕೆ ಉದ್ಘಾಟನೆಯ ಹಿಂದಿನ ದಿನ ಸಂಜೆ ಆಹ್ವಾನ ಪತ್ರಿಕೆಗಳನ್ನು ನೀಡಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
 
ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಸೂಚನೆ ಪಾಲಿಸದೆ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿ ರುವ ಅಧಿಕಾರಿಗಳ ವಿರುದ್ಧ ಒಂದು ವಾರದ ಒಳಗೆ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
 
ಪಕ್ಷದ ಜಿಲ್ಲಾಧ್ಯಕ್ಷ ಡಾ.ಡಿ.ಎಲ್‌. ವಿಜಯಕುಮಾರ್ ಮಾತನಾಡಿ, ಶಾಸಕರು ಅಭಿವೃದ್ಧಿ ಕೆಲಸಗಳ ಜತೆಗೆ ಸರ್ಕಾರಿ ನಿಯಮದಂತೆ ತುರ್ತು ಸಭೆ ಕರೆದು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉದ್ಘಾಟಿಸದಿರುವುದು ವಿಷಾದನೀಯ ಸಂಗತಿ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿ ಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು’ ಎಂದು ಆಗ್ರಹಿಸಿದರು. 
 
ಪಕ್ಷದ ಮುಖಂಡರಾದ ಎಂ.ಎಲ್. ಮೂರ್ತಿ, ಅರಣ್ಯ ಮತ್ತು ವಸತಿ ವಿಹಾರ ಧಾಮಗಳ ನಿಗಮದ ಅಧ್ಯಕ್ಷ ಎ.ಎನ್. ಮಹೇಶ್, ಸಿಡಿಎ ಅಧ್ಯಕ್ಷ ಸೈಯದ್ ಹನೀಫ್, ಮಾಜಿ ಅಧ್ಯಕ್ಷ ಚಂದ್ರೇಗೌಡ, ಸೇವಾದಳ ಅಧ್ಯಕ್ಷ ಆನಂದ್, ನಗರಸಭೆ ಸದಸ್ಯರಾದ ರೂಬೆನ್ ಮೊಸೆಸ್, ಎಚ್.ಎಸ್. ಪುಟ್ಟ ಸ್ವಾಮಿ, ಸಿ.ಪಿ.ಲಕ್ಮಣ್, ಸುರೇಖಾ ಸಂಪತ್‌ರಾಜ್, ಅನು ಮಧುಕರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.