ADVERTISEMENT

‘ಶಿಕ್ಷಣದಿಂದ ಸಮಾಜ ಬದಲಾವಣೆ’

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:12 IST
Last Updated 7 ನವೆಂಬರ್ 2017, 6:12 IST

ಮೂಡಿಗೆರೆ: ಮಹಿಳೆಯರು ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಬೆಂಗಳೂರಿನ ಕ್ರೈಸ್ತ ಧರ್ಮಗುರು ಚಾರ್ಲ್ಸ್‌ ಪುರ್ಟಾಡೊ ಅಭಿಪ್ರಾಯಪಟ್ಟರು. ತಾಲ್ಲೂಕಿನ ಬಣಕಲ್‌ ಗ್ರಾಮದಲ್ಲಿ ಕಪುಚಿನ್‌ ಕೃಷಿಕ ಸೇವಾ ಕೇಂದ್ರದ ವತಿಯಿಂದ ಸೋಮವಾರ ನಡೆದ ಮಹಿಳೆಯರ ಹಕ್ಕು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಕಲಿತ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತದೆ. ಶಿಕ್ಷಣ ಪಡೆಯುವುದರಿಂದ ಮಹಿಳೆಯರ ಪರವಾಗಿರುವ ಕಾನೂನುಗಳ ಅರಿವುಂಟಾಗಿ, ತಮ್ಮ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.

ವಿಮುಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ನಿರ್ದೇಶಕ ವಿನ್ಸೆಂಟ್‌ ಡಿಸೋಜ ಮಾತನಾಡಿ, ‘ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಬಾರದು. ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡು, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಬಳಸಿಕೊಳ್ಳಬೇಕು. ಕುಟುಂಬದಲ್ಲಿ ಮದ್ಯ ವ್ಯಸನಿಗಳಿದ್ದರೆ ಕುಟುಂಬದ ನೆಮ್ಮದಿಗೆ ಭಂಗವುಂಟಾಗುತ್ತದೆ ಎಂಬುದನ್ನು ಮಹಿಳೆಯು ಅರಿಯಬೇಕು’ ಎಂದರು.

ADVERTISEMENT

ವಿಮುಕ್ತಿ ಸ್ವಸಹಾಯ ಸಂಘಗಳ ಜೀನಿತ್‌ ಮಾತನಾಡಿ, ‘ಮಹಿಳೆಯರಿಗೆ ಅನುಕಂಪದ ಅಗತ್ಯವಿಲ್ಲ. ಬದಲಾಗಿ ಎಲ್ಲ ರಂಗಗಳಲ್ಲೂ ದುಡಿಯುವಂತೆ ಪ್ರೋತ್ಸಾಹಿಸುವ ಹೃದಯಗಳು ಬೇಕಾಗಿವೆ. ಸ್ವಾವಲಂಬಿತನದಿಂದ ಸಮಾಜದಲ್ಲಿ ಗೌರವ ಲಭಿಸುತ್ತದೆ.

ಕುಟುಂಬದಲ್ಲಿ ಶಾಂತಿ ಲಭಿಸಲು ಮಹಿಳೆಯರ ಪಾಲಿದ್ದು, ಮಹಿಳೆಯರು ತಮ್ಮ ಕುಟುಂಬಗಳನ್ನು ಸೂಕ್ತ ಮಾರ್ಗದಲ್ಲಿ ನಿಭಾಯಿಸಬೇಕು’ ಎಂದರು. ಒಕ್ಕೂಟದ ಉಪಾಧ್ಯಕ್ಷೆ ಅತಿಕಾಬಾನು, ಖಜಾಂಚಿ ಪವಿತ್ರ, ಹಾಗೂ ಬಣಕಲ್‌, ಗುಡ್ಡಟ್ಟಿ, ಮತ್ತಿಕಟ್ಟೆ, ಬಗ್ಗಸಗೋಡು, ಚಕ್ಕಮಕ್ಕಿ ಘಟಕಗಳ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.