ADVERTISEMENT

‘ಸಂತೆ ಮೈದಾನ ಅಭಿವೃದ್ಧಿಗೆ ₹ 75ಲಕ್ಷ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:25 IST
Last Updated 8 ನವೆಂಬರ್ 2017, 6:25 IST

ತರೀಕೆರೆ: ಎಪಿಎಂಸಿ ಮಾರುಕಟ್ಟೆಯ ಅಧಿಕಾರಿಗಳು ಪ್ರಯತ್ನಪಟ್ಟರೆ ಇನ್ನಷ್ಟು ಆದಾಯ ಹೆಚ್ಚಿಸಿಕೊಂಡು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಬಹುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು. ಪಟ್ಟಣ ಎಪಿಎಂಸಿ ಆವರಣದಲ್ಲಿ ಸರ್ಕಾರದ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ₹4 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಎಪಿಎಂಸಿ ಆವರಣದಲ್ಲಿನ ಅಭಿವೃದ್ಧಿಯ ಕೆಲಸಗಳ ಜತೆಗೆ ರೈತರ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಅಜ್ಜಂ ಪುರ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ₹ 25ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಹಾಗು ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿನ ಸಂತೆ ಮೈದಾನ ಅಭಿವೃದ್ಧಿಗೆ ₹ 75ಲಕ್ಷ ಹಾಗೂ ಚರಂಡಿ ಕಾಮಗಾರಿಗೆ ₹25ಲಕ್ಷ ಗಳನ್ನು ನಗರೋತ್ಥಾನ ಯೋಜನೆಯಲ್ಲಿ ನಿರ್ವಹಿಸಲಾಗುವುದು ಎಂದರು.

ಎಪಿಎಂಸಿ ಅಧ್ಯಕ್ಷ ಕೆ.ಎಲ್.ನಾಗರಾಜ್ ಮಾತನಾಡಿ, ‘ಶಿವನಿ, ಅಜ್ಜಂಪುರಗಳಲ್ಲಿ ಉಪ ಮಾರುಕಟ್ಟೆ ಯನ್ನು ಅಭಿವೃದ್ಧಿ ಪಡಿಸ ಲಾಗುವುದು. ದ್ವಿದಳ ಬೆಳೆವ ರೈತರಿಗೆ ಅನುಕೂಲವಾಗುವಂತೆ ಲಿಂಗದಹಳ್ಳಿಯಲ್ಲಿ ಉಪ ಮಾರುಕಟ್ಟೆ ನಿರ್ಮಿಸಲಾಗುವುದು’ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ, ಮಾರುಕಟ್ಟೆ ರೈತರಿಗೆ ಪೂರಕವಾಗಿರಬೇಕು ಎಂದರು.

ADVERTISEMENT

ನಿರ್ದೇಶಕ ಎಂ.ನರೇಂದ್ರ ಮಾತನಾಡಿ, ‘ಮಾರುಕಟ್ಟೆಗೆ ₹ 2ಕೋಟಿ ಆದಾಯ ಬರುತ್ತಿದೆ. ರೈತ ನಿವಾಸ ನಿರ್ಮಿಸಲು ಸರ್ಕಾರ ವ್ಯವಸ್ಥೆ ಮಾಡಬೇಕು’ ಎಂದರು.
ಮುಖ್ಯ ಕಾರ್ಯದರ್ಶಿ ಸಿದ್ದರಾಜು, ಉಪಾಧ್ಯಕ್ಷ ಪಾಂಡುರಂಗ ಜಾಧವ್, ನಿರ್ದೇಶಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.