ADVERTISEMENT

ಸರ್ಕಾರಿ ಕಚೇರಿ ಆವರಣದ ಅಂಗಡಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 9:19 IST
Last Updated 3 ಸೆಪ್ಟೆಂಬರ್ 2017, 9:19 IST

ಬೀರೂರು: ಪಟ್ಟಣದ ಅಟಲ್‍ಜಿ ಜನಸ್ನೇಹಿ ಕೇಂದ್ರ( ನಾಡಕಚೇರಿ) ಆವರಣದಲ್ಲಿ ಖಾಸಗಿ ವ್ಯಕ್ತಿಗಳು ವ್ಯಾಪಾರ ನಡೆಸುವ ಸಲುವಾಗಿ ಕಬ್ಬಿಣದ ಪೆಟ್ಟಿಗೆ ಅಂಗಡಿ ಸ್ಥಾಪಿಸಲು ಯತ್ನ ನಡೆಸಿದ್ದು ಇದಕ್ಕೆ ಅನುಮತಿ ನೀಡಬಾರದು ಎಂದು ಪುರಸಭೆ ಮಾಜಿ ಸದಸ್ಯ ಬಿ.ವಿ.ಮಹೇಶ್ವರಪ್ಪ ಮತ್ತು ಕೆ.ಎಚ್.ಜಗದೀಶ್ ತಾಲ್ಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

‘ನಾಡಕಚೇರಿ ನಡೆಯುತ್ತಿರುವ ಸ್ಥಳವು ತಾಲ್ಲೂಕು ಪಂಚಾಯಿತಿಗೆ ಸೇರಿದ್ದು, ಉಪ ತಹಶೀಲ್ದಾರರ ಕಚೇರಿಯೂ ಆಗಿರುವ ನಾಡಕಚೇರಿಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ದಾಖಲೆಗಳು, ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳು, ಉಪಕರಣಗಳು, ಕಡತಗಳು ಇರುತ್ತವೆ. ಇದು ಸರ್ಕಾರಿ ಕಚೇರಿಯಾಗಿರುವುದರಿಂದ ಇಲ್ಲಿ ಖಾಸಗಿಯವರು ಸ್ವಹಿತ ಕಾಪಾಡಿಕೊಳ್ಳುವ ವ್ಯವಹಾರ ನಡೆಸಲು ಅನುಮತಿ ಇಲ್ಲ, ಭದ್ರತೆ ದೃಷ್ಟಿಯಿಂದಲೂ ಇದು ಸಮಂಜಸವಲ್ಲ. ಹಾಗಿದ್ದರೂ ಉಪ ತಹಶೀಲ್ದಾರರ ಗಮನಕ್ಕೆ ಬಂದು ಇಲ್ಲಿ ಅಂಗಡಿ ಸ್ಥಾಪಿಸಲು ಪ್ರಯತ್ನ ನಡೆದಿದೆ. ಈ ಕುರಿತು ಉಪ ತಹಶೀಲ್ದಾರರನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.

‘ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ತಹಶೀಲ್ದಾರರು ಕೂಡಾ ಇಲ್ಲಿ ಅಂಗಡಿ ನಡೆಸಲು ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಅಷ್ಟಾಗಿಯೂ ಇಲ್ಲಿ ಖಾಸಗಿ ವ್ಯಕ್ತಿಗಳು ವ್ಯಾಪಾರ ನಡೆಸಲು ಅನುವು ಮಾಡಿಕೊಡುವುದಾದರೆ ಇತರರಿಗೂ ಅವಕಾಶ ಕಲ್ಪಿಸಲಿ’ ಎಂದು ಮಹೇಶ್ವರಪ್ಪ ಆಗ್ರಹಿಸಿದ್ದಾರೆ.

ADVERTISEMENT

ನಿತ್ಯ ನೂರಾರು ನಾಗರಿಕರು, ಗ್ರಾಮಸ್ಥರು ನಾಡಕಚೇರಿಗೆ ಭೇಟಿ ನೀಡುತ್ತಾರೆ, ಇಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶೌಚಾಲಯ ನಿರ್ವಹಿಸಲು, ಕುಡಿಯುವ ನೀರು ಒದಗಿಸಲು ಕಚೇರಿ ಆಡಳಿತ ಮುಂದಾಗಿಲ್ಲ. ಈ ಕುರಿತು ಕ್ರಮ ವಹಿಸಲು ಮೇಲಧಿಕಾರಿಗಳು ಉಪ ತಹಶೀಲ್ದಾರ್ ಕಚೇರಿಗೆ ಆದೇಶ ನೀಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.