ADVERTISEMENT

‘ಸುಳ್ಳು ಹೇಳುವುದೇ ಬಿಜೆಪಿಯ ಸಾಧನೆ’

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 5:02 IST
Last Updated 19 ನವೆಂಬರ್ 2017, 5:02 IST
ಕಡೂರು ತಾಲ್ಲೂಕಿನ ಕಲ್ಲಾಪುರ ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ನಡೆಯಿತು.
ಕಡೂರು ತಾಲ್ಲೂಕಿನ ಕಲ್ಲಾಪುರ ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನ ನಡೆಯಿತು.   

ಕಡೂರು: ಕೇವಲ ಸುಳ್ಳು ಹೇಳುವುದೇ ಬಿಜೆಪಿಯ ಸಾಧನೆಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮನೆ ಮನೆಗೂ ಮುಟ್ಟಿಸುವಲ್ಲಿ ಕಾರ್ಯಕರ್ತರ ಶ್ರಮ ವಹಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ್ ಭಂಡಾರಿ ತಿಳಿಸಿದರು.

ತಾಲ್ಲೂಕಿನ ಕಲ್ಲಾಪುರ ಗ್ರಾಮದಲ್ಲಿ ಶನಿವಾರ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ವರ್ಣರಂಜಿತ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯಾವುದನ್ನೂ ಈಡೇರಿಸಲಿಲ್ಲ, ಜನರನ್ನು ಭ್ರಮಾಲೋಕದಲ್ಲಿ ತೇಲಾಡುವಂತೆ ಮಾಡಿದ್ದೇ ದೊಡ್ಡ ಸಾಧನೆ. ಆದರೆ ರಾಜ್ಯದಲ್ಲಿ ಅಧಿಕಾ ರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಗಳನ್ನು ಸಂಪೂರ್ಣ ಈಡೇರಿಸಿದ್ದು, ಮುಂದಿನ ಚುನಾವ ಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ’ ಎಂದರು.

ಕೆಪಿಸಿಸಿ ಕಾರ್ಯದರ್ಶಿ ತಾರಾ ನಾಥ್‌ಶೆಟ್ಟಿ ಮಾತನಾಡಿ ‘ಚುನಾವಣೆ ಸಮಯ ಬಂದಾಗ ಬಿಜೆಪಿಯವರಿಗೆ ಜಪ, ತಪ, ದೇವರು ಧರ್ಮ ಜ್ಞಾಪಕಕ್ಕೆ ಬರುತ್ತದೆ. ಇವರು ಮಾತ್ರವೇ ಹಿಂದೂಗಳಲ್ಲ, ಆದರೆ ನಾವು ಶ್ರೀರಾಮನನ್ನು ಹೃದಯ ಮಂದಿರದಲ್ಲಿ ಆರಾಧಿಸುತ್ತೇವೆ. ಅದನ್ನು ತೋರ್ಪಡಿಸಿಕೊಳ್ಳುವುದು ನಮ್ಮ ಕೆಲಸವಲ್ಲ, ಎಲ್ಲ ಜನಾಂಗಕ್ಕೂ ಸಮಾನತೆಯನ್ನು ನೀಡುವ ಏಕೈಕ ಪಕ್ಷ ಕಾಂಗ್ರೆಸ್. ಈ ಪಕ್ಷದ ಸಾಧನೆಯೇ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ರಹದಾರಿ ಎಂದರು.

ADVERTISEMENT

ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್ ಮಾತನಾಡಿ ‘ಮನೆಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ಪಕ್ಷಕ್ಕೆ ಅಪೂರ್ವ ಬೆಂಬಲ ವ್ಯಕ್ತವಾಗಿದ್ದು, ಪಕ್ಷದ ಸಾಧನೆಗಳನ್ನು ಜನತೆಗೆ ತಿಳಿಸುವುದು ಮತ್ತು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ವೈಫಲ್ಯವನ್ನು ಸಹ ತಿಳಿಸಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ನೀಡುವ ಭರವಸೆಗಳು ಪ್ರಸ್ತುತ ಸಾಧ ನೆಯ ಮುಂದುವರಿದ ಭಾಗವಾ ಗಿರುತ್ತದೆ’ ಎಂದು ನುಡಿದರು.

ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ ಮಾತನಾಡಿ ‘ಕಡೂರು ತಾಲ್ಲೂಕಿನಲ್ಲಿ ಈ ಅಭಿಯಾನ ಶೇ 85ರಷ್ಟು ಮುಗಿದಿದ್ದು, ಶೀಘ್ರವೇ ಸಂಪೂರ್ಣವಾಗಲಿದೆ. ಪಕ್ಷದ ಸಾಧನೆಯೇ ಮುಂದಿನ ಚುನಾ ವಣೆಯಲ್ಲಿ ಅಧಿಕಾರ ಹಿಡಿಯಲು ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್, ಸದಸ್ಯರಾದ ಕೆ.ಆರ್. ಮಹೇಶ್‍ ಒಡೆಯರ್, ಲೋಲಾಕ್ಷಿಬಾಯಿ, ಎಪಿಎಂಸಿ ಅಧ್ಯಕ್ಷ ಆರ್. ಓಂಕಾರಪ್ಪ, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ವಿನಾಯಕ್, ತಾಲ್ಲೂಕು ಪಂಚಾಯಿತಿ ಸದಸ್ಯ ದಾಸಯ್ಯನಗುತ್ತಿ ಚಂದ್ರಪ್ಪ, ಕೆ.ಎಸ್ ಆನಂದ್, ಕೆ.ಹೆಚ್. ರಂಗನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಅಜೇಯ್‍ಒಡೆಯರ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಕಲೀಮುಲ್ಲಾ, ವಕ್ತಾರ ಬಾಸೂರು ಚಂದ್ರಮೌಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.