ADVERTISEMENT

ಹಸಿರು ಬೆಟ್ಟಕ್ಕೆ ಕಾಂಕ್ರಿಟ್ ಗೋಡೆ ಪೆಟ್ಟು!

ಪ್ರವಾಸಿ ತಾಣ ಅಭಿವೃದ್ಧಿ ಯೋಜನೆ ಪರಿಸರಾಸಕ್ತ ಸಂಘಟನೆಗಳ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 5:26 IST
Last Updated 24 ಮಾರ್ಚ್ 2017, 5:26 IST
ಚಿಕ್ಕಮಗಳೂರು ತಾಲ್ಲೂಕಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಕಾಂಕ್ರಿಟ್‌ ತಡೆಗೋಡೆ ನಿರ್ಮಿಸಿ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಧಕ್ಕೆ ಉಂಟು ಮಾಡಿರುವುದು.
ಚಿಕ್ಕಮಗಳೂರು ತಾಲ್ಲೂಕಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಕಾಂಕ್ರಿಟ್‌ ತಡೆಗೋಡೆ ನಿರ್ಮಿಸಿ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಧಕ್ಕೆ ಉಂಟು ಮಾಡಿರುವುದು.   

ಚಿಕ್ಕಮಗಳೂರು: ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರವಾಸಿಗಳಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಪಶ್ಚಿಮಘಟ್ಟದ ಚಂದ್ರದ್ರೋಣ ಪರ್ವತ ಶ್ರೇಣಿಯ ಯಾವುದೇ ಪ್ರದೇಶದಲ್ಲಿ ಪ್ರವಾಸಿ ತಾಣ ಅಭಿವೃದ್ಧಿ ಯೋಜನೆ ಕೈಗೊಳ್ಳುವುದನ್ನು ಪರಿಸರಾಸಕ್ತ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.

ಪಶ್ಚಿಮಘಟ್ಟದ ಅತಿ ಎತ್ತರದ ಬೆಟ್ಟ ಮುಳ್ಳಯ್ಯನಗಿರಿ. ಇದರ ತಪ್ಪಲಿನಲ್ಲಿರುವ ಸೀತಾಳಯ್ಯನಗಿರಿ, ಇದಕ್ಕೆ ಹೊಂದಿಕೊಂ ಡಿರುವ ದತ್ತಪೀಠ, ನಿಸರ್ಗ ನಿರ್ಮಿತ ನೀರಿನ ಮೂಲ ಗಾಳಿಕೆರೆ ಹಾಗೂ ಇತರೆ ಅರಣ್ಯ ಪ್ರದೇಶಗಳಲ್ಲಿ ಪ್ರಾಕೃತಿಕ ಸೌಂದರ್ಯ ವೀಕ್ಷಣೆಗೆ ಹಲವು ಸೌಲಭ್ಯ ನೀಡಲು ರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮ ಪ್ರಯತ್ನಿಸುತ್ತಿರುವುದು ಸರಿಯಲ್ಲ ಎಂದು ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಟ್ರಸ್ಟ್‌ ಮುಖ್ಯಸ್ಥ ಡಿ.ವಿ.ಗಿರೀಶ್, ವೈಲ್ಡ್‌ ಕ್ಯಾಟ್-ಸಿ ಸಂಘಟನೆ ಮುಖ್ಯಸ್ಥ ಶ್ರೀದೇವ್ ಹುಲಿಕೆರೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬೆಟ್ಟಗಳಲ್ಲಿ ವ್ಯೂ ಪಾಯಿಂಟ್, ವೀಕ್ಷಣಾ ಗೋಪುರ, ಸೀತಾಳಯ್ಯನ ಗಿರಿಯಲ್ಲಿ ಕಾಫಿ ಶಾಪ್, ವಿಶ್ರಾಂತಿಗೃಹ ಅಭಿವೃದ್ಧಿಪಡಿಸಲು ಮುಂದಾಗಿರು ವುದಾಗಿ ನಿಗಮದ ಅಧ್ಯಕ್ಷ ಎ.ಎನ್.ಮ ಹೇಶ್ ಅವರ ಹೇಳಿಕೆ, ಆ ಸೂಕ್ಷ್ಮ ಪ್ರದೇಶಗಳಿಗೆ ಮಾರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಮುಳ್ಳಯ್ಯನಗಿರಿ, ಮುತ್ತೋಡಿ ಹಾಗೂ ಕುದುರೆಮುಖ ಭಗವತಿ ಅರಣ್ಯ ಪ್ರದೇಶಗಳಲ್ಲಿ ಚಾರಣ ಪಥ ಅಥವಾ ಎಕೋ ಟ್ರಯಲ್ ಮಂಜೂರಾಗಿವೆ ಎಂದು ತಿಳಿಸಿದ್ದು, ಸುರಕ್ಷಿತ ಪಥ ಗುರುತಿ ಸಲು ಅರಣ್ಯ ಇಲಾಖೆಗೆ ಸೂಚಿಸಿರು ವುದು ಸರಿಯಲ್ಲ.

ಇದರ ಜತೆಗೆ ಕುದುರೆ ಮುಖ ಹೃದಯಭಾಗದ ಭಗವತಿ ನಿಸರ್ಗ ಶಿಬಿರ ನವೀಕರಿಸುವುದು, ಕೆಮ್ಮಣ್ಣು ಗುಂಡಿ ಪ್ರವಾಸಿಧಾಮದಲ್ಲಿ ಕಾರ್ಪೊ ರೇಟ್ ಶೈಲಿಯ ಸೌಲಭ್ಯ ಒದಗಿಸುವುದು ಹಾಗೂ ಚಾರ್ಮಾಡಿ ಮಳೆಕಾಡಿನ ಮಲಯಮಾರುತ ವಿಶ್ರಾಂತಿ ಗೃಹವನ್ನು ಜಂಗಲ್‌ಲಾಡ್ಜ್ ನಿಗಮಕ್ಕೆ ಸೇರಿಸಿಕೊಳ್ಳು ವುದು ಅನಾವಶ್ಯಕ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರಿಸರ ಪ್ರವಾಸೋದ್ಯಮವೆಂದರೆ ಈ ಸೂಕ್ಷ್ಮ ಪ್ರದೇಶಗಳಲ್ಲಿ ಹಲವು ಸೌಲಭ್ಯ, ಕಾಂಕ್ರಿಟ್ ಕಟ್ಟಡಗಳ ನಿರ್ಮಾ ಣವಲ್ಲ. ಅದರ ಬದಲು ಆ ಪ್ರದೇಶದ ನೈಸರ್ಗಿಕ ಸ್ಥಿತಿಯನ್ನೆ ಕಾಪಾಡಿಕೊಂಡು ಅಲ್ಲಿಗೆ ಜನ ಕಾಲ್ನಡಿಗೆಯಲ್ಲೆ ಹೋಗುವ ಮೂಲಕ ಆ ಪರಿಸರದ ಪ್ರಾಮುಖ್ಯತೆ ಅರ್ಥ ಮಾಡಿಕೊಳ್ಳುವ ಒಂದು ಅಧ್ಯಯನ ಪ್ರವಾಸವೆಂಬುವುದನ್ನು ನಿಗಮದ ಅಧ್ಯಕ್ಷರು ಅರ್ಥಮಾಡಿ ಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಈಗಾಗಲೇ ಈ ಬೆಟ್ಟ ಪ್ರದೇಶಗಳಲ್ಲಿ ಹೋಂಸ್ಟೇಗಳು ಅತಿ ಹೆಚ್ಚಾಗಿ ತಲೆಎತ್ತುತ್ತಿವೆ. ಜೊತೆಗೆ ಮುಳ್ಳಯ್ಯನಗಿರಿ ಬಳಿ ರೆಸಾರ್ಟ್‌ಗಳ ನಿರ್ಮಾಣವೂ ಆರಂಭವಾಗಿದೆ. ಇವುಗಳು ಈ ಸೂಕ್ಷ್ಮ ಪ್ರದೇಶಗಳಿಗೆ ಒಗ್ಗುವ ಸೌಲಭ್ಯಗಳಲ್ಲ, ಈ ಪ್ರದೇಶ ಕೇವಲ ಗಿರಿ ಪ್ರದೇಶವಾಗಿರದೆ, ವಿಶ್ವದ ಅತ್ಯಂತ ಅಪರೂಪದ ಶೋಲಾ ಕಾಡುಗಳನ್ನು ಹಾಗೂ ಹುಲಿ ಸೇರಿದಂತೆ ವಿವಿಧ ರೀತಿಯ ಪ್ರಾಣಿ, ಅನೇಕ ವೈವಿಧ್ಯಮಯ ಪಕ್ಷಿ ಸಂಕುಲ ಹೊಂದಿದೆ.

ಮನುಷ್ಯ ಹಾಗೂ ವಾಹನಗಳ ಓಡಾಟ ಇಲ್ಲಿ ಹೆಚ್ಚಾದಂತೆ ಈ ಪ್ರಾಣಿಗಳ ಸ್ವಚ್ಛಂದ ಬದುಕಿಗೆ ಅವು ಒಂದು ರೀತಿಯ ಅಡೆತಡೆಗಳಾಗಿ ಮಾರಕವಾ ಗಬಹುದು ಎಂಬುದನ್ನು ನೆನಪಿನಲ್ಲಿ ಟ್ಟುಕೊಳ್ಳಬೇಕೆಂದು ತಿಳಿಸಿದ್ದಾರೆ.

ಇಂತಹ ಸೌಲಭ್ಯಗಳನ್ನು ಕೈಮರ ಅಥವಾ ಚಿಕ್ಕಮಗಳೂರಿನಲ್ಲಿ ನೀಡಲಿ. ಈ ಬೆಟ್ಟ ಪ್ರದೇಶಗಳಿಗೆ ಜನ ಹೋಗಿ ನಿಸರ್ಗ ಸೌಂದರ್ಯ ಹಾಗೂ ಆ ಸೌಂದರ್ಯದೊಳಗೆ ಅಡಗಿರುವ ಪ್ರಾಕೃತಿಕ ವೈವಿಧ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವಕಾಶವಿ ರಬೇಕೇ ಹೊರತು, ಇಂತಹ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಸೌಲಭ್ಯಗಳನ್ನು ನೀಡುವ ಮೂಲಕ ಆ ಸೂಕ್ಷ್ಮತೆಗೆ ಧಕ್ಕೆ ತರಬಾರದೆಂದು ಹೇಳಿದ್ದಾರೆ.

ಇದ್ದಕ್ಕಿದ್ದ ಹಾಗೆ ಸೌಲಭ್ಯ ನೀಡುವ ಮೂಲಕ ಈ ಪ್ರದೇಶಗಳನ್ನು ಜನಜಂ ಗುಳಿಯ ತಾಣವಾಗಿ ಮಾಡುವ ಹಾಗೂ ಕಸದ ಕೊಂಪೆಯಾಗಿಸುವ ಮಾರ್ಗವನ್ನು ತೆರೆಯಲು ಸರ್ಕಾರ ಮುಂದಾಗ ಬಾರದು. ಒಮ್ಮೆ ಇಲ್ಲಿ ಕಾಫಿ ಶಾಪ್ ಅಥವಾ ಇನ್ನಿತರ ಸೌಲಭ್ಯ ನೀಡಲು ಆರಂಭಿಸಿದರೆ ಈ ಒಂದು ಶಾಂತ, ನೀರವ ಪ್ರದೇಶ ತನ್ನೆಲ್ಲಾ ನಿಸರ್ಗ ಸಹಜ ಶಾಂತ ಸ್ವರೂಪ ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬೆಟ್ಟ ಪ್ರದೇಶಗಳಿಗೆ ಕೇಬಲ್ ಕಾರ್ ಅಳವಡಿಸುವ ಅವಶ್ಯಕತೆಯೂ ಇಲ್ಲ. ಜಂಗಲ್ ಲಾಡ್ಜ್‌ಗಳನ್ನು ಹೊಸ ದಾಗಿ ತೆರೆಯುವುದರಿಂದ ಶ್ರೀಮಂತ ಪ್ರವಾಸಿಗಳಿಗೆ ಅನುಕೂಲವೇ ಹೊರತು, ಸಾಮಾನ್ಯರಿಗೆ ಹಾಗೂ ನಿಸರ್ಗದ ಅಧ್ಯಯನಕ್ಕೆ ಬರುವವರಿಗೆ ಯಾವ ಪ್ರಯೋಜನವೂ ಇಲ್ಲ ಹಾಗೂ ಅವರಿಗೆ ಎಟುಕುವುದು ಇಲ್ಲ.

ADVERTISEMENT

ಈ ಹಿನ್ನೆಲೆಯಲ್ಲಿ ಜಂಗಲ್ ಲಾಡ್ಜ್‌ಗಳನ್ನು ಮತ್ತೆ ಹೊಸದಾಗಿ ತೆರೆಯುವ ಅವಶ್ಯಕತೆ ಇಲ್ಲ. ಕುದುರೆಮುಖದಲ್ಲಿರುವ ನೇಚರ್ ಕ್ಯಾಂಪನ್ನು ಜಂಗಲ್ ಲಾಡ್ಜ್‌ಗೆ ನೀಡಬಾ ರದು ಹಾಗೂ ಮುತ್ತೋಡಿಯಲ್ಲಿ ಈ ವಸತಿ ಗೃಹದ ಅವಶ್ಯಕತೆಯೂ ಇಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.