ADVERTISEMENT

ಹಿಡುವಳಿದಾರರ ಹಿತಕಾಯಲು ಮನವಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 7:44 IST
Last Updated 24 ಮೇ 2017, 7:44 IST

ಚಿಕ್ಕಮಗಳೂರು: ಜಿಲ್ಲೆಯ ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯಪೂರ್ವದಿಂದಲೂ ಸಾಗುವಳಿ ಮಾಡುತ್ತಿರುವ ಕಂದಾಯ ದಾಖಲಾತಿ ಹೊಂದಿರುವ ರೈತರನ್ನು ಒಕ್ಕಲೆಬ್ಬಿಸದೆ, ಅಲ್ಲಿಯೇ ಜೀವನ ಮುಂದುವರಿಸಲು ಅವಕಾಶ ಕಲ್ಪಿಸಬೇಕು’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ಅಧ್ಯಕ್ಷ ಬಿ.ಎಸ್‌.ಜೈರಾಮ್‌ ಇಲ್ಲಿ ಮಂಗಳವಾರ ಒತ್ತಾಯಿಸಿದರು.

‘ಸರ್ಕಾರದ ಮುಖ್ಯ ಕಾರ್ಯದರ್ಶಿ ಇಲ್ಲಿನ ಹಿಡುವಳಿ ಪ್ರದೇಶಗಳನ್ನು ಒತ್ತು ವರಿ ಪ್ರದೇಶವೆಂದು ತಪ್ಪಾಗಿ ಅರ್ಥೈಸಿ ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ನಾಲ್ಕು ದಶಕಗಳಿಂದ ಇಲ್ಲಿ ನೆಲೆಸಿ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರು ಆತಂಕಗೊಂಡಿದ್ದಾರೆ. ನಿರ್ಧಾರ ಕಾರ್ಯಗತಗೊಂಡಲ್ಲಿ ನೂರಾರು ಕುಟುಂಬಗಳು ಬೀದಿಗೆ ಬೀಳಲಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘ಮಹಾರಾಜರ ಆಳ್ವಿಕೆ ಮತ್ತು ನಂತರದ ಸರ್ಕಾರಗಳು ಈ ಸಾಗುವಳಿ ಜಮೀನಿನ ಹಕ್ಕು ನೀಡಿ, ಹಿಡುವಳಿ ಪ್ರದೇಶವನ್ನಾಗಿಸಿ ಕಂದಾಯ ಮತ್ತು ಅರಣ್ಯ ಇಲಾಖೆ  ದಾಖಲೆಗಳನ್ನು ರೈತರಿಗೆ ನೀಡಿರುತ್ತಾರೆ. ಸುಮಾರು 40 ವರ್ಷಗಳಿಂದಲೂ ಮಸಗಲಿ ಮೀಸಲು ಅರಣ್ಯದಲ್ಲಿ  ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರು, ಬಡವರು ಈ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡು, ಹಿಡುವಳಿ ಜಾಗದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. 196 ಕುಟುಂಬ ಗಳು ಇಲ್ಲಿ ವಾಸವಾಗಿದ್ದು,  6000 ಜನ ಆಶ್ರಯ ಪಡೆದಿದ್ದಾರೆ’ ಎಂದರು.

ADVERTISEMENT

‘ಆಂಧ್ರಪ್ರದೇಶದಲ್ಲಿಯೂ ಇಂಥದ್ದೇ ಸಮಸ್ಯೆಯಿದ್ದು, ಆ ರಾಜ್ಯವು ಕೇಂದ್ರ ಸರ್ಕಾರದ ಮೂಲಕ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲು ಮನವಿ ಮಾಡಿದೆ. ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಸಗಲಿ ಮೀಸಲು ಅರಣ್ಯದ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು, ಹಿಡುವಳಿದಾರರು ಹಿತ ಕಾಯಬೇಕು’ ಎಂದು ಮನವಿ ಮಾಡಿದರು.

‘ರೈತರು, ಮಹಿಳಾ ಸ್ವ-ಸಹಾಯ ಸಂಘಗಳು, ಗ್ರಾಮೀಣ ಜನರಿಗೆ ನೀಡಿರುವ ಸಾಲಮನ್ನಾಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವತಿಯಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗು ತ್ತಿದ್ದು, ಕೆಜಿಎಫ್ ನಿಯೋಗವು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದೆ’ ಎಂದರು.  

ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯ ಗ್ರಾಮಗಳ ಹಿಡುವಳಿದಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ಜಿ.ಗಿರೀಶ್‌, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್, ಉಪಾಧ್ಯಕ್ಷ ಕೆ.ಯು.ರತೀಶ್, ಆವತಿ ಬೆಳಗಾರರ ಸಂಘದ ಅಧ್ಯಕ್ಷ ಪುಟ್ಟೇಗೌಡ, ಕಸಬಾ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಎಸ್‌.ಲಿಂಗಪ್ಪಗೌಡ, ವಸ್ತಾರೆ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.