ADVERTISEMENT

ಮೂಲ ಸೌಲಭ್ಯ ವಂಚಿತ ಕೆರೆಹೊಸಳ್ಳಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 10:01 IST
Last Updated 8 ಫೆಬ್ರುವರಿ 2018, 10:01 IST
ತರೀಕೆರೆ ತಾಲ್ಲೂಕಿನ ಕೆರೆಹೊಸಳ್ಳಿ ಗ್ರಾಮದಲ್ಲಿ ಹತ್ತು ವರ್ಷಗಳ ಹಿಂದೆ ಕಟ್ಟಲಾದ ಓವರ್ ಹೆಡ್ ಟ್ಯಾಂಕ್
ತರೀಕೆರೆ ತಾಲ್ಲೂಕಿನ ಕೆರೆಹೊಸಳ್ಳಿ ಗ್ರಾಮದಲ್ಲಿ ಹತ್ತು ವರ್ಷಗಳ ಹಿಂದೆ ಕಟ್ಟಲಾದ ಓವರ್ ಹೆಡ್ ಟ್ಯಾಂಕ್   

ತರೀಕೆರೆ: ಸಮೀಪದ ಕೆರೆಹೊಸಳ್ಳಿ ಗ್ರಾಮವು ಅನೇಕ ಸಮಸ್ಯೆಗಳಿಂದ ನರಳುತ್ತಿದ್ದು, ಸಂಬಂಧಪಟ್ಟ ಅಧಿಕಾರಿ ಗಳು ಕೂಡಲೇ ಕ್ರಮವಹಿಸ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಟ್ಟಣದಿಂದ 5 ಕೀ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಕೃಷಿ ಹಾಗೂ ಹೈನುಗಾರಿಕೆ ಪ್ರಮುಖ ಉದ್ಯೋಗ. ಸುಮಾರು 190ಕ್ಕು ಹೆಚ್ಚು ಮನೆಗಳಿದ್ದು, ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು 11 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ನೀರು ಪೂರೈಸಲು ಒವರ್‍ಹೆಡ್ ಟ್ಯಾಂಕ್ ನಿರ್ಮಿಸಿದ್ದು, ಟ್ಯಾಂಕ್‍ಗೆ ನೀರು ತುಂಬಿಸಲಿಕ್ಕಾಗಿ ಅರಸಿನಕೆರೆ ಬಳಿ ಕೊಳವೆಬಾವಿಯನ್ನು ಕೊರೆಸಿ ಪೈಪ್‍ಲೈನ್ ಕಾಮಗಾರಿ ನಡೆಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿಗೆ ನಿರ್ವಹಣೆಯನ್ನು ಹಸ್ತಾಂತರಿಸದಿರುವುದರಿಂದ ಈವರೆಗೆ ಇದರ ನಿರ್ವಹಣೆಯಾಗಿಲ್ಲ.

ಟ್ಯಾಂಕ್ ಕಾಮಗಾರಿಯು ಕಳಪೆ ಯಾಗಿರುವುದರಿಂದ ಶಿಥಿಲಗೊಂಡಿದ್ದು, ಇದರ ದುರಸ್ತಿ ಮಾಡಬೇಕಿದೆ. ಮುಂದಿನ ನೀರು ತುಂಬಿ ಕುಡಿಯಲು ಸಿಗುತ್ತದೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ಕಳೆದುಕೊಂಡಿದ್ದಾರೆ. ಗ್ರಾಮದ ಪ್ರವೇಶ ದ್ವಾರದಲ್ಲಿ ನಿರ್ಮಿಸಲಾಗಿರುವ ಕಿರು ನೀರು ಸರಬರಾಜು ಘಟಕವು ಸಹ ಕಳಪೆ ಕಾಮಗಾರಿಯಿಂದ ಕೂಡಿದ್ದು, ಈವರೆಗೆ ಇಲ್ಲಿಗೂ ಸಹ ನೀರು ಹರಿಸಲಾಗಿಲ್ಲ.

ADVERTISEMENT

ಕಿರು ನೀರು ಘಟಕಕ್ಕೆ ನೀರು ಬಾರದಿರುವುದರಿಂದ ಜಾನುವಾರಿಗೆ ಕುಡಿಯುವ ನಿರ್ಮಿಸಿರುವ ನೀರಿನ ತೊಟ್ಟಿ ಅನಾಥವಾಗಿದೆ. ಬಿದ್ದಿದೆ. ಮೇವು ಮೇಯಲು ಹೋದ ದನಕರು  ಸಂಜೆ ಮನೆಗೆ ಬಂದು ನೀರು ಕುಡಿಯುವ ಪರಿಸ್ಥಿತಿಯಿದೆ. ಕೆರೆಹೊಸಳ್ಳಿ ಗ್ರಾಮವು ಬರಗಾಲಕ್ಕೆ ತುತ್ತಾಗಿರುವ ಗ್ರಾಮವಾಗಿರುವುದರಿಂದ ತೋಟದಕೆರೆಯ ಕೊಳವೆಬಾವಿಯಿಂದ ಮೂರು ದಿನಕ್ಕೊಮ್ಮೆ ಮಾತ್ರ ಗ್ರಾಮ ಪಂಚಾಯಿತಿಯು ಕುಡಿಯಲು ನೀರು ನೀಡುತ್ತಿದೆ. ಇದೇ ನೀರನ್ನು ಸ್ನಾನ, ಗೃಹಕಾರ್ಯ ಹಾಗೂ ಮನೆಯಲ್ಲಿರುವ ಕೈತೋಟಗಳಿಗೆ ಮತ್ತು ಜಾನುವಾರುಗಳಿಗೂ ಬಳಸಬೇಕಿದೆ ಎಂದು ರೈತರು ಸಿಟ್ಟು ಪ್ರದರ್ಶಿಸುತ್ತಾರೆ.

ಹಳಿಯೂರು ಗ್ರಾಮದಿಂದ ಕೆರೆಹೊಸಳ್ಳಿಗೆ ಸಂಪರ್ಕ ಕಲ್ಪಸುವ ರಸ್ತೆಯು ತೀರ ಹದಗೆಟ್ಟು ಗುಂಡಿಗಳಾಗಿ ಓಡಾಡಲು ಆಗದ ಸ್ಥಿತಿಯನ್ನು ನಿರ್ಮಿಸಿವೆ. ತರೀಕೆರೆಯಿಂದ ಅಮೃತಾ ಪುರಕ್ಕೆ ಬಸ್ ವ್ಯವಸ್ಥೆ ಹಿಂದೆ ಇತ್ತು. ಗ್ರಾಮಕ್ಕೆ ಬರುವ ಜನರು ಚಾಕೋನಹಳ್ಳಿ ಗೇಟ್ ಬಳಿ ಇಳಿದು ಗ್ರಾಮ ಸೇರುತ್ತಿದ್ದರು. ಆದರೆ ರಸ್ತೆ ಹದಗೆಟ್ಟು ಬಸ್‍ಗಳು ಬರದ ಸ್ಥಿತಿ ನಿರ್ಮಾಣವಾಗಿದೆ.

ಪ್ರೌಢಶಾಲೆಗೆ ಹೋಗುವ ಮಕ್ಕಳು ಹಳಿಯೂರುವರೆಗೂ ನಡೆದುಕೊಂಡೆ ಹೋಗಬೇಕು. ಇದರಿಂದಾಗಿ ಮಕ್ಕಳು ಮನೆಗೆ ಬರುವವರೆಗೆ ಪೋಷಕರಲ್ಲಿ ಸಮಧಾನವಿರುವುದಿಲ್ಲ. ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ಅರಳಿಮರದ ಬಿಳಲು ಹಾಗೂ ರೆಂಬೆಗಳು ರಸ್ತೆಗೆ ಚಾಚಿಕೊಂಡಿದ್ದು, ಅರಣ್ಯ ಇಲಾಖೆಯವರು ಅನಾಹುತವಾಗುವ ಮೊದಲೇ ಕ್ರಮಕೈಗೊಳ್ಳಲಿ ಎಂಬುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ದಾದಾಪೀರ್, ತರೀಕೆರೆ

ನೀರು ಸರಬರಾಜು ಇಲಾಖೆಯವರು ಮುಂದಿನ ವಾರದಲ್ಲಿ ಓವರ್ ಹೆಡ್ ಟ್ಯಾಂಕ್‍ ಅನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಿದ್ದು, ನೀರು ಹರಿಸಲು ಪರಿಶೀಲಿಸಲಾಗುವುದು
ಮಂಜಪ್ಪ, ಬೆಟ್ಟದಹಳ್ಳಿ ಪಿಡಿಒ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.