ADVERTISEMENT

ಅಕ್ಕ- ತಂಗಿಯರ ಭೇಟಿಗೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:16 IST
Last Updated 25 ಏಪ್ರಿಲ್ 2017, 5:16 IST
ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಕಟ್ಟೆ ಗೇಟ್‌ನಲ್ಲಿರುವ ಕರಿಯಮ್ಮ ದೇವಿ ದೇವಾಲಯ.
ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಕಟ್ಟೆ ಗೇಟ್‌ನಲ್ಲಿರುವ ಕರಿಯಮ್ಮ ದೇವಿ ದೇವಾಲಯ.   

ಹೊಳಲ್ಕೆರೆ: ತಾಲ್ಲೂಕಿನ ಬೊಮ್ಮನ ಕಟ್ಟೆಯ ಕರಿಯಮ್ಮದೇವಿ ಜಾತ್ರೆಯು ಏ.25ರಿಂದ 27ರವರೆಗೆ ನಡೆಯಲಿದೆ. ಒಂಬತ್ತು ವರ್ಷಗಳ ನಂತರ ಉತ್ಸವ ನಡೆಯುತ್ತಿರುವುದು ಭಕ್ತರ ಸಂತಸ ಇಮ್ಮಡಿಗೊಳಿಸಿದೆ.

ಕುತೂಹಲ ಮೂಡಿಸಿದ ಅಕ್ಕ-ತಂಗಿ ಭೇಟಿ: ಗ್ರಾಮದೇವತೆ ಕರಿಯಮ್ಮ ದೇವಿ ಹಾಗೂ ಪಕ್ಕದ ಗ್ರಾಮ ಇಡೇಹಳ್ಳಿಯ ಚೌಡಮ್ಮ ದೇವಿ ಅಕ್ಕ- ತಂಗಿ ಎಂದೇ ಭಕ್ತರ ನಂಬಿಕೆ. ಏ.25ರ ಸಂಜೆ ಇಡೇಹಳ್ಳಿಯ ಚೌಡಮ್ಮ ದೇವಿ ಬೊಮ್ಮನಕಟ್ಟೆ ಗ್ರಾಮಕ್ಕೆ ಬರಲಿದ್ದು, ಅಕ್ಕ-ತಂಗಿಯರ ಭೇಟಿಯ ದೃಶ್ಯ ರೋಚಕವಾಗಿರುತ್ತದೆ.

‘ಚೌಡಮ್ಮ ದೇವಿ ಗ್ರಾಮ ಪ್ರವೇಶಿಸುತ್ತಿದ್ದಂತೆ ಕರಿಯಮ್ಮ ದೇವಿ ಕೂಡ ತಂಗಿಯನ್ನು ಸ್ವಾಗತಿಸಲು ಹೋಗುತ್ತಾಳೆ. ಆಗ ಎರಡೂ ದೇವತೆಗಳನ್ನು ಭೇಟಿ ಮಾಡಿಸಲು ಭಕ್ತರು ಹರಸಾಹಸಪಡುತ್ತಾರೆ. ಇಬ್ಬರನ್ನೂ ಭೇಟಿ ಮಾಡಿಸಲು ಭಕ್ತರು ಎಷ್ಟೇ ಪ್ರಯತ್ನ ಮಾಡಿದರೂ ಎರಡೂ ದೇವತೆಗಳು ಹಿಂದೆ ಸರಿಯುತ್ತವೆ. ಬಹಳ ದಿನಗಳ ನಂತರ ನಡೆಯುವ ಭೇಟಿಯಾದ್ದರಿಂದ ಎರಡೂ ದೇವತೆಗಳು ಬೇಗನೆ ಸೇರುವುದಿಲ್ಲ. ಭಕ್ತರು ಅಕ್ಕ–ತಂಗಿಯರನ್ನು ಸಮಾಧಾನ ಮಾಡಿ, ಹೊಸ ಸೀರೆ ಉಡಿಸಿ, ಹತ್ತಾರು ಬಾರಿ ಪೂಜೆ ಸಲ್ಲಿಸಿದ ನಂತರ ಇಬ್ಬರೂ ಭೇಟಿಯಾಗುತ್ತಾರೆ. ಆಗ ಭಕ್ತರು ನಿಟ್ಟುಸಿರು ಬಿಡುತ್ತಾರೆ. ನಂತರ ಎರಡೂ ದೇವತೆಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ’ ಎಂದು ಗ್ರಾಮದ ಮುಖಂಡ ನಾಗಾನಾಯ್ಕ ಹೇಳುತ್ತಾರೆ.

ADVERTISEMENT

‘ಚೌಡಮ್ಮ ದೇವಿ ಇಲ್ಲದೆ ಜಾತ್ರೆ ನಡೆಯುವುದೇ ಇಲ್ಲ. ಜಾತ್ರೆ ಮುಗಿದ ನಂತರ ತಂಗಿ ಚೌಡಮ್ಮನನ್ನು ಅವರ ಊರಿಗೆ ಕಳಿಸುವಾಗಲೂ ನಾನು ಹೋಗುವುದಿಲ್ಲ ಎಂದು ಹಟ ಹಿಡಿಯುತ್ತಾಳೆ. ಇನ್ನೇನು ದೇವಿಯನ್ನು ಇಡೇಹಳ್ಳಿಗೆ ಕಳಿಸಲು ಸಿದ್ಧವಾಗುತ್ತಿದ್ದಂತೆ ಗೌಡರ ಮನೆ, ಪೂಜಾರಿ ಮನೆ ಹಾಗೂ ಬೇರೆ ಭಕ್ತರ ಮನೆಯ ಒಳಗೆ ಹೋಗಿ ಕೂರುತ್ತಾಳೆ. ಜಾತ್ರೆ ಮುಗಿದ ಮೇಲೆ ದೇವಿಯನ್ನು ಕಳಿಸಲು ಎರಡು ಮೂರು ದಿನಗಳಾದರೂ ಬೇಕು. ಇಡೇಹಳ್ಳಿಯಲ್ಲಿ ಚೌಡಮ್ಮ ದೇವಿ ಜಾತ್ರೆ ನಡೆಯುವಾಗ ನಮ್ಮ ಊರಿನ ಕರಿಯಮ್ಮ ದೇವಿ ಅಲ್ಲಿಗೆ ಹೋಗುತ್ತಾಳೆ’ ಎಂದು ಅವರು ಹೇಳುತ್ತಾರೆ.

ಅಪಘಾತ ತಡೆಯುವ ನಂಬಿಕೆ: ‘ಬೊಮ್ಮನಕಟ್ಟೆ ಗ್ರಾಮದಲ್ಲಿ ಕರಿಯಮ್ಮದೇವಿಯ ದೇವಾಲಯ ಇದ್ದು, ಅಲ್ಲಿ ದೇವಿಯ ಮೂರ್ತಿ ಇದೆ. ಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿರುವ ಹೊಳಲ್ಕೆರೆ-– ಹೊಸದುರ್ಗ ರಾಜ್ಯ ಹೆದ್ದಾರಿ ಪಕ್ಕದಲ್ಲಿ ದೇವಿಯ ಮತ್ತೊಂದು ದೇವಾಲಯವಿದೆ. ಅಲ್ಲಿ ದೇವಿಯು ಲಿಂಗದ ರೂಪದಲ್ಲಿ ಒಡಮೂಡಿದ್ದಾಳೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ದೇವಿಗೆ ಕೈಮುಗಿಯದೆ ಮುಂದೆ ಹೋಗುವುದಿಲ್ಲ. ಕೆಲವರು ಅಪಘಾತಗಳು ಸಂಭವಿಸದಿರಲಿ
ಎಂದು ಹರಕೆ ಹೊರುತ್ತಾರೆ’ ಎನ್ನುತ್ತಾರೆ ಗ್ರಾಮದ ಎಲ್ಐಸಿ ಕರಿಯಾ ನಾಯ್ಕ.

‘ನಾನು 15 ವರ್ಷಗಳಿಂದ ಇದೇ ಮಾರ್ಗದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತೇನೆ. ಕೆಲವೊಮ್ಮೆ ತಡರಾತ್ರಿಯಲ್ಲೂ ಹೋಗುತ್ತೇನೆ. ಪ್ರತಿ ದಿನವೂ ದೇವಿಗೆ ಕೈಮುಗಿದು ಮುಂದೆ ಹೋಗುತ್ತೇನೆ. ಇದರಿಂದ ಇಷ್ಟು ವರ್ಷಗಳಲ್ಲಿ ನನಗೆ ಒಂದು ದಿನವೂ ತೊಂದರೆ ಆಗಿಲ್ಲ’ ಎನ್ನುತ್ತಾರೆ ಸಾಂತೇನಹಳ್ಳಿ ಗ್ರಾಮದ ಜಿ.ಎಚ್.ಶಿವಪ್ರಕಾಶ್.

ದೇವಾಲಯದಲ್ಲಿ ನೆಲೆಸಿದ್ದ ಅಜ್ಜಿ: ‘ಬೊಮ್ಮನಕಟ್ಟೆ ಗೇಟ್‌ನಲ್ಲಿ ದೇವಿಯ ಹಳೆಯ ದೇವಾಲಯ ಇತ್ತು. ದೇವಾಲಯ ಬೀಳುವ ಸ್ಥಿತಿಯಲ್ಲಿದ್ದುದರಿಂದ ಅದನ್ನು ಕೆಡವಿ ಈಗ ಹೊಸ ದೇವಾಲಯ ಕಟ್ಟಲಾಗುತ್ತಿದೆ. ಹಳೆಯ ದೇವಾಲಯ ಇದ್ದಾಗ ಲೋಕದೊಳಲು ಗ್ರಾಮದ ಅಜ್ಜಿಯೊಬ್ಬರು ಇಲ್ಲೇ ನೆಲೆಸಿದ್ದರು. ದೇವಾಲಯಕ್ಕೆ ಬಾಗಿಲು ಇಲ್ಲದಿದ್ದರೂ ಅಲ್ಲಿಯೇ ಮಲಗುತ್ತಿದ್ದರು. ದೇವಿಯು ತನ್ನ ಪವಾಡದಿಂದ ಕರಡಿ, ಚಿರತೆಗಳಿಂದ   ಅಜ್ಜಿಯನ್ನು ಕಾಪಾಡಿತ್ತು’ ಎಂದು ಗ್ರಾಮದ ಎಂ.ಕೆ.ದಾನಪ್ಪ, ಟಿ.ಮೂರ್ತಿ, ಲಕ್ಷ್ಮಣ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.