ADVERTISEMENT

ಅಖಾಡದಲ್ಲಿ ಮಹಿಳಾ ಪೈಲ್ವಾನರ ‘ದಂಗಲ್‌’!

ಪ್ರಜಾವಾಣಿ ವಿಶೇಷ
Published 15 ಏಪ್ರಿಲ್ 2017, 8:49 IST
Last Updated 15 ಏಪ್ರಿಲ್ 2017, 8:49 IST
ಚಿತ್ರದುರ್ಗದಲ್ಲಿ ಕುಸ್ತಿಪಟುಗಳ ಸೆಣಸಾಟ	– ಸಾಂದರ್ಭಿಕ ಚಿತ್ರ
ಚಿತ್ರದುರ್ಗದಲ್ಲಿ ಕುಸ್ತಿಪಟುಗಳ ಸೆಣಸಾಟ – ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಜಿಲ್ಲಾ ಕುಸ್ತಿ ಸಂಘದವರು ಏಕನಾಥೇಶ್ವರಿ ದೇವಿ ಜಾತ್ರೆ ಹಾಗೂ ಭೇಟಿ ಉತ್ಸವದ ಅಂಗವಾಗಿ ಇದೇ 16ರಂದು ಐದನೇ ಬಾರಿಗೆ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದಾರೆ.

ಇಲ್ಲಿಯವರೆಗೂ ಕೇವಲ ಪುರಷರ ಕುಸ್ತಿ ಪಂದ್ಯಗಳನ್ನಷ್ಟೇ ಆಯೋಜಿಸಿದ್ದ ಸಂಘ, ಇದೇ ಮೊದಲ ಬಾರಿಗೆ ಮಹಿಳಾ ವಿಭಾಗದಲ್ಲೂ ಪಂದ್ಯಗಳನ್ನು ಆಯೋಜಿಸುತ್ತಿದೆ. ಈ ಮೂಲಕ ಕೋಟೆನಾಡಿನ ನಾಗರಿಕರಿಗೆ ಕೆಂಪು ಮಣ್ಣಿನ ಅಖಾಡದಲ್ಲಿ ಮಹಿಳಾ ಕುಸ್ತಿಪಟುಗಳ ಪಟ್ಟುಗಳನ್ನು ನೋಡುವ ಅವಕಾಶ ಕಲ್ಪಿಸಿದೆ. 16ರಂದು ಮಧ್ಯಾಹ್ನ ಎರಡು ಗಂಟೆಯಿಂದ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಿರ್ಮಿಸಿರುವ ಅಖಾಡದಲ್ಲಿ ಈ ಪಂದ್ಯಗಳು ಆರಂಭವಾಗುತ್ತವೆ. ಒಂದೊಂದು ಪಂದ್ಯ ಅರ್ಧ ಗಂಟೆಯವರೆಗೂ ನಡೆಯಲಿದ್ದು, ರಾತ್ರಿವರೆಗೂ ಮುಂದುವರಿಯುವ ಸಾಧ್ಯತೆ ಇದೆ.

ಎಲ್ಲೆಲ್ಲಿಯ ತಂಡಗಳು?: ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ, ಹರಿಯಾಣ, ನಮ್ಮದೇ ರಾಜ್ಯದ ಬೆಳಗಾವಿ, ಧಾರವಾಡ, ಮೈಸೂರು, ದಾವಣಗೆರೆ ಜಿಲ್ಲೆಗಳಿಂದ ಪುರುಷ ಪೈಲ್ವಾನ್‌ಗಳು  ಪಾಲ್ಗೊಳ್ಳಲು ಒಪ್ಪಿದ್ದಾರೆ.  ಚಿತ್ರದುರ್ಗದ ಪೈಲ್ವಾನರೂ ಅಖಾಡಕ್ಕೆ ಇಳಿಯುತ್ತಾರೆ. ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆ, ಸಾಂಗ್ಲಿ ಹಾಗೂ ಹರಿಯಾಣದಿಂದ ಮಹಿಳಾ ಕುಸ್ತಿಪಟುಗಳು ಭಾಗವಹಿಸುತ್ತಿದ್ದಾರೆ’ ಎಂದು ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಭರತ್  ಹಾಗೂ ಕಾರ್ಯದರ್ಶಿ ದಿಲೀಪ್ ಸೋನು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಏಳು ಮಂದಿ ರೆಫರಿಗಳು: ಕುಸ್ತಿ ಪಂದ್ಯಾವಳಿಗೆ ಏಳು ರೆಫರಿಗಳನ್ನು ಸಂಘ ಆಹ್ವಾನಿಸಿದೆ. ಬಹುತೇಕರು ಚಿತ್ರದುರ್ಗದವರಾಗಿದ್ದಾರೆ. ಉಳಿದಂತೆ ದಾವಣಗೆರೆ, ಮೈಸೂರಿನಿಂದ ಬರಲಿದ್ದಾರೆ. ಚಿತ್ರದುರ್ಗದ ಸಣ್ಣಗರಡಿಯ ಮರಡಪ್ಪ ಪೈಲ್ವಾನ್, ನರಸಿಂಹಪ್ಪ, ಬುರುಜನಹಟ್ಟಿ ಗರಡಿಯ ಪೈಲ್ವಾನ್ ತಿಪ್ಪೇಸ್ವಾಮಿ, ದೊಡ್ಡಗರಡಿಯ ಮೂರ್ತಪ್ಪ ಪೈಲ್ವಾನ್, ಹಗಲದಟ್ಟಿ ಗರಡಿಯ ಅಮ್ರು ಪೈಲ್ವಾನ್, ದಾವಣಗೆರೆಯ ಅಂತರರಾಷ್ಟ್ರೀಯ ಕುಸ್ತಿ ತರಬೇತುದಾರ ಶಿವಾನಂದ್ ರೆಫರಿಗಳಾಗಿ ಭಾಗವಹಿಸುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಮೈಸೂರಿನಿಂದ ಅಮೃತ್‌ ಪೈಲ್ವಾನ್ ರೆಫರಿ ಆಗಿರುತ್ತಾರೆ. ಅವರೊಂದಿಗೆ ಶಿವಾನಂದ ಕೂಡ ಸಾಥ್ ನೀಡುತ್ತಾರೆ ಎಂದು ಭರತ್ ವಿವರಣೆ ನೀಡಿದರು.

ಮಣ್ಣಿನ ಅಖಾಡದವರಿಗೆ ಮಾತ್ರ: ಈ ಪಂದ್ಯಾವಳಿಯಲ್ಲಿ ಮಣ್ಣಿನ ಅಖಾಡದಲ್ಲಿ ಅಭ್ಯಾಸ ಮಾಡಿರುವ ಪುರುಷ ಮತ್ತು ಮಹಿಳಾ ಪೈಲ್ವಾನರು  ಮಾತ್ರ ಭಾಗವಹಿಸುತ್ತಾರೆ. ಕ್ರೀಡಾನಿಲಯದಲ್ಲಿ ‘ಮ್ಯಾಟ್‌’ ಮೇಲೆ ಅಭ್ಯಾಸ ಮಾಡಿರುವ ಸ್ಪರ್ಧಿಗಳು ಇಲ್ಲಿ ಪಾಲ್ಗೊಳ್ಳುವುದಿಲ್ಲ. ಹಾಗಾಗಿಯೇ, ಈ ಪಂದ್ಯಾವಳಿಗೆ ಸ್ಪರ್ಧಿಗಳ ಸಂಖ್ಯೆ ಕಡಿಮೆ ಇದೆ. ದೇಶದ ಎಲ್ಲೆಡೆ ಸುಸಜ್ಜಿತ ಕ್ರೀಡಾಂಗಣದಲ್ಲಿ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ.

‘ಹರಿಯಾಣ, ದೆಹಲಿ ಪಂಜಾಬ್‌ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಕುಸ್ತಿಪಟುಗಳಿಗೆ ತುಂಬಾ ಪ್ರೋತ್ಸಾಹವಿದೆ. ನಮ್ಮ ಜಿಲ್ಲೆ ಕುಸ್ತಿಯ ತವರು. ಇಲ್ಲೂ ಸುಸಜ್ಜಿತ ಕ್ರೀಡಾಂಗಣವನ್ನು ಕಲ್ಪಿಸಿದರೆ, ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನಾಗಿ ಬೆಳೆಸಲು ಸಾಧ್ಯವಿದೆ’ ಎಂದು ಸಂಘದ ಕಾರ್ಯದರ್ಶಿ ದಿಲೀಪ್ ಅಭಿಪ್ರಾಯಪಡುತ್ತಾರೆ.

50 ಜೋಡಿ ನಿರೀಕ್ಷೆ : ‘ಪಂದ್ಯದಲ್ಲಿ 50 ಜೋಡಿಗಳು ಅಖಾಡಕ್ಕೆ ಇಳಿಯುವ ನಿರೀಕ್ಷೆ ಇದೆ. ಇದರಲ್ಲಿ ನಾಲ್ವರು ಮಹಿಳಾ ಕುಸ್ತಿಪಟುಗಳು ಪಂದ್ಯದಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ. ಪಂದ್ಯದ ವೇಳೆಗೆ ಸ್ಪರ್ಧಿಗಳ ಸಂಖ್ಯೆಯಲ್ಲಿವ್ಯತ್ಯಾಸವಾಗಬಹುದು’ ಎನ್ನುತ್ತಾರೆ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಭರತ್ ಹಾಗೂ ಕಾರ್ಯದರ್ಶಿ ದಿಲೀಪ್ ಸೋನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.