ADVERTISEMENT

ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ

ನಗರಸಭೆ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಮಂಜುನಾಥ್ ಗೊಪ್ಪೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 5:13 IST
Last Updated 11 ಮಾರ್ಚ್ 2017, 5:13 IST
ಚಿತ್ರದುರ್ಗ:  ‘ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ನಗರದ ಅಭಿವೃದ್ಧಿಗೆ ಸಾಕಷ್ಟು ಹಣ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದು, ವರ್ಷದೊಳಗೆ ನಗರದ ರಸ್ತೆಗಳನ್ನು ದೂಳು ಮುಕ್ತವನ್ನಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿ ಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಗೊಪ್ಪೆ ಹೇಳಿದರು.
 
ಅಧ್ಯಕ್ಷರಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶುಕ್ರವಾರ ನಗರಸಭೆ ಕಚೇರಿಯಲ್ಲಿ  ವಾರ್ಷಿಕ ಸಂಭ್ರಮಾಚರಣೆ ನಡೆಸಿದ ನಂತರ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರು ಬಜೆಟ್‌ನಲ್ಲಿ ₹10 ಕೋಟಿ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೇ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ₹ 7.50 ಕೋಟಿ ನೀಡಿದ್ದಾರೆ.
 
ನಗರೋತ್ಥಾನದಲ್ಲಿ ₹ 30 ಕೋಟಿ, 2ನೇ ಹಂತದ ನಗರೋತ್ಥಾನದಲ್ಲಿನ ₹ 15 ಕೋಟಿ ಉಳಿಕೆ ಇದೆ ಈ ಅನುದಾನ ಸದ್ಬಳಕೆ ಮಾಡಿಕೊಂಡು ರಸ್ತೆ ಅಭಿವೃದ್ಧಿಪಡಿಸಲಾಗುವುದು’ ಎಂದರು.
 
‘ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ನೇತೃತ್ವದಲ್ಲಿ ಸಿಹಿನೀರು ಹೊಂಡದ ಹೂಳು ಎತ್ತಿಸಿದ್ದು, ನನಗೆ ವರ್ಷದಲ್ಲೇ ಸಂತೋಷ ಕೊಟ್ಟಂತಹ ಕೆಲಸ.  ನಗರಸಭೆಯಿಂದ ಹಣ ಖರ್ಚು ಮಾಡದೇ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೂಳೆತ್ತುವ ಕಾರ್ಯ ಮಾಡಲಾಗಿದೆ’ ಎಂದರು.
 
‘ಶೀಘ್ರದಲ್ಲೇ ₹ 60ರಿಂದ 70 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ನಂತರ ರಸ್ತೆ ನಿರ್ಮಾಣ ಮತ್ತಿತರ ಕಾರ್ಯಗಳನ್ನು ಮಾಡಲಾಗುತ್ತದೆ. ನಗರದ ಚಳ್ಳಕೆರೆ ಟೋಲ್ ಗೇಟ್ ವೃತ್ತದಿಂದ ಪ್ರವಾಸಿ ಮಂದಿರದವರೆಗೆ ₹ 5 ಕೋಟಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ ಮಾಡಲಾಗುವುದು’  ಎಂದು ಹೇಳಿದರು. 
 
ಮಾಜಿ ನಗರಸಭಾಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ‘ಮಂಜುನಾಥ್ ಅಧ್ಯಕ್ಷರಾದ ಅವಧಿಯಲ್ಲಿ ನಗರದ ಮೂಲ ಸೌಕರ್ಯಕ್ಕೆ ಒತ್ತು ನೀಡಿದ್ದಾರೆ. ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆ, ಸಿ.ಸಿ ರಸ್ತೆ, ಚರಂಡಿಗಳ ಕಾಮಗಾರಿ, ಆರ್‌ಸಿಸಿ ಡಕ್, ಸ್ವಚ್ಛತಾ ಕಾರ್ಯ, ಶೌಚಾಲಯ ನಿರ್ಮಾಣ, ಘನ ತ್ಯಾಜ್ಯ ವಿಲೇವಾರಿ ಕಾಮಗಾರಿಗಳು ನಡೆದಿವೆ’ ಎಂದು ಮೆಚ್ಚುಗೆ  ವ್ಯಕ್ತಪಡಿಸಿದರು.
 
‘ಪ್ರಸಕ್ತ ಸಾಲಿನ ಎಸ್‌ಎಫ್‌ಸಿ ಹಾಗೂ ನಗರಸಭೆ ನಿಧಿ ಅನುದಾನದಡಿ ಶೇ 24.10 ಮತ್ತು ಶೇ 7.5 ಹಾಗೂ ಶೇ 3ರ ಯೋಜನೆಯಡಿ ಎಸ್ಸಿ, ಎಸ್ಟಿ, ಇತರೆ ಒಬಿಸಿ ಹಾಗೂ ಅಂಗವಿಕಲರಿಗೆ ವೈಯಕ್ತಿಕ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದೆ’ ಎಂದು ಹೇಳಿದರು.
 
ನಗರಸಭೆ ಸದಸ್ಯರಾದ ಸರ್ದಾರ ಅಹಮ್ಮದ್ ಪಾಷ, ಸಿ.ಟಿ.ರಾಜೇಶ್, ತಿಪ್ಪೇಸ್ವಾಮಿ, ಪ್ರಸನ್ನ, ಮಂಜುಳಮ್ಮ, ಛಾಯಾ ಸುರೇಶ್, ಟಿ.ವೆಂಕಟೇಶ್, ಈರುಳ್ಳಿ ರಘು, ನಸ್ರೂಲ್ಲಾ, ಫಕ್ರುದ್ದೀನ್, ನಗರಸಭೆ ಆಯುಕ್ತ ಸಿ.ಚಂದ್ರಪ್ಪ, ವ್ಯವಸ್ಥಾಪಕಿ ಬಿ.ಆರ್.ಮಂಜುಳಾ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.