ADVERTISEMENT

ಒಆರ್‌ಎಸ್, ಜಿಂಕ್ ಮಾತ್ರೆ ವಿತರಣೆಗೆ ಕ್ರಮ

ಜಿಲ್ಲೆಯ 1.56 ಲಕ್ಷ ಮಕ್ಕಳಿಗೆ ವಿತರಣೆ; ಡಿಎಚ್‌ಒ ಡಾ.ಬಿ.ವಿ.ನೀರಜ್

​ಪ್ರಜಾವಾಣಿ ವಾರ್ತೆ
Published 26 ಮೇ 2018, 10:15 IST
Last Updated 26 ಮೇ 2018, 10:15 IST
ಒಆರ್‌ಎಸ್, ಜಿಂಕ್ ಮಾತ್ರೆ ವಿತರಣೆಗೆ ಕ್ರಮ
ಒಆರ್‌ಎಸ್, ಜಿಂಕ್ ಮಾತ್ರೆ ವಿತರಣೆಗೆ ಕ್ರಮ   

ಚಿತ್ರದುರ್ಗ: ಪ್ರಸಕ್ತ 2018–19ನೇ ಸಾಲಿನ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕದ ಅಂಗವಾಗಿ ಐಡಿಸಿಎಫ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳಿರುವ ಎಲ್ಲ ಮನೆಗಳಿಗೂ ಒಆರ್‌ಎಸ್ ದ್ರಾವಣದ
ಪಾಕೆಟ್ ವಿತರಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ವಿ. ನೀರಜ್ ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ 5 ವರ್ಷದೊಳಗೆ 1,56,323 ಮಕ್ಕಳಿದ್ದಾರೆ. ಮನೆಯಲ್ಲದೆ 2,135 ಶಾಲೆಗಳಲ್ಲಿ ಹಾಗೂ 2,132 ಅಂಗನವಾಡಿ ಕೇಂದ್ರಗಳಲ್ಲೂ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟು 2,41,634 ಒಆರ್‌ಎಸ್ ಪೊಟ್ಟಣ ವಿತರಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

‘ಒಆರ್‌ಎಸ್ ದ್ರಾವಣ ಯಾವ ರೀತಿ ತಯಾರಿಸಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಗುವುದು. ತಾಯಿಯ ಎದೆ ಹಾಲಿನ ಮಹತ್ವದ ಕುರಿತು ಇದೇ ಸಂದರ್ಭದಲ್ಲಿ ಅರಿವು ಮೂಡಿಸಲಾಗುವುದು. ಜಿಲ್ಲೆಯಾದ್ಯಂತ 5,88,951 ಜಿಂಕ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ. ಅತಿಸಾರ ಭೇದಿ ಇರುವ ಮಕ್ಕಳಿಗೆ 14 ದಿವಸಗಳು ಪ್ರತಿ ದಿನಕ್ಕೆ 1 ರಂತೆ ಜಿಂಕ್ ಮಾತ್ರೆಯನ್ನು ಕುಡಿಯುವ ನೀರು ಇಲ್ಲವೇ ತಾಯಿಯ ಎದೆ ಹಾಲಿನಲ್ಲಿ ಬೆರೆಸಿ ಕುಡಿಸಬೇಕು’ ಎಂದು ಹೇಳಿದ್ದಾರೆ.

ADVERTISEMENT

ಜಿಲ್ಲೆಯ ಸರ್ಕಾರಿ ಉಪ ಕೇಂದ್ರಗಳು ಹಾಗೂ ಆರೋಗ್ಯ ಸಂಸ್ಥೆಗಳಲ್ಲಿ ಈಗಾಗಲೇ ಒಆರ್‌ಎಸ್ ಮತ್ತು ಜಿಂಕ್ ಒಳಗೊಂಡು 440 ಕಾರ್ನರ್ ಸ್ಥಾಪಿಸಲಾಗಿದೆ. ಎಲ್ಲ ರೀತಿಯಲ್ಲೂ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

28ರಿಂದ ಜೂನ್ 9ರವರೆಗೆ ಪಾಕ್ಷಿಕ

ಮೇ 28 ರಿಂದ ಜೂ 9 ರವರೆಗೂ ಅತಿ ಸಾರ ಭೇದಿ ನಿಯಂತ್ರಣ ಪಾಕ್ಷಿಕ ನಡೆಯಲಿದೆ. ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ 28 ರಂದು ಬೆಳಿಗ್ಗೆ 10 ಕ್ಕೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಎನ್. ರವೀಂದ್ರ ಪಾಕ್ಷಿಕ ಉದ್ಘಾಟಿಸಲಿದ್ದಾರೆ ಎಂದು ಇಲಾಖೆಯ ಆರ್‌ಸಿಎಚ್‌ ಅಧಿಕಾರಿ ಡಾ. ಕುಮಾರಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ತಪ್ಪದೇ 5 ವರ್ಷದೊಳಗಿನ ಮಕ್ಕಳಿಗೆ ಒಆರ್‌ಎಸ್ ದ್ರಾವಣ ಹಾಗೂ ಝಿಂಕ್ ಮಾತ್ರೆ ಹಾಕಿಸಿ ಎಂದು ಅವರು ಮನವಿ ಮಾಡಿದ್ದಾರೆ.

**
ಒಆರ್‌ಎಸ್ ದ್ರಾವಣ ಮತ್ತು ಜಿಂಕ್ ಮಾತ್ರೆ ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಲಾಗುವುದು
ಡಾ.ಬಿ.ವಿ.ನೀರಜ್, ಜಿಲ್ಲಾ ಆರೋಗ್ಯಾಧಿಕಾರಿ
**
ಜಿಲ್ಲೆಯ 1370 ವಿಎಚ್‌ಎನ್‌ಡಿಗಳಲ್ಲಿ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಹದಿಹರೆಯದವರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವುದು
–  ಡಾ.ಕುಮಾರಸ್ವಾಮಿ, ಆರ್‌ಸಿಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.