ADVERTISEMENT

ಕಟಾವು ಹಂತದಲ್ಲಿರುವ ಈರುಳ್ಳಿ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 9:53 IST
Last Updated 16 ಸೆಪ್ಟೆಂಬರ್ 2017, 9:53 IST
ಹಿರಿಯೂರು ತಾಲ್ಲೂಕಿನ ಯರಬಳ್ಳಿಯ ಲಕ್ಷ್ಮೀರಂಗನಾಥ್ ಎಂಬ ರೈತರ ಜಮೀನಿನಲ್ಲಿ ಮಳೆನೀರು ನಿಂತಿರುವ ಕಾರಣ ಕಟಾವು ಹಂತಕ್ಕೆ ಬಂದಿದ್ದ ಈರುಳ್ಳಿ ಬೆಳೆ ಕೊಳೆಯುತ್ತಿರುವುದು.
ಹಿರಿಯೂರು ತಾಲ್ಲೂಕಿನ ಯರಬಳ್ಳಿಯ ಲಕ್ಷ್ಮೀರಂಗನಾಥ್ ಎಂಬ ರೈತರ ಜಮೀನಿನಲ್ಲಿ ಮಳೆನೀರು ನಿಂತಿರುವ ಕಾರಣ ಕಟಾವು ಹಂತಕ್ಕೆ ಬಂದಿದ್ದ ಈರುಳ್ಳಿ ಬೆಳೆ ಕೊಳೆಯುತ್ತಿರುವುದು.   

ಹಿರಿಯೂರು: ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಗುರುವಾರ ರಾತ್ರಿಯೂ ಮುಂದುವರಿದಿದ್ದು, ಯರಬಳ್ಳಿಯಲ್ಲಿ ಕಟಾವಿಗೆ ಬಂದಿದ್ದ ಈರುಳ್ಳಿ ಬೆಳೆ ಹೊಲಗಳಲ್ಲಿ ನೀರು ನಿಂತಿರುವ ಕಾರಣ ಕೊಳೆಯ ತೊಡಗಿದೆ.

ಯರಬಳ್ಳಿಯ ಜಿ. ಲಕ್ಷ್ಮೀರಂಗನಾಥ್ ಎಂಬುವವರು ಮೂರು ಎಕರೆ ಜಮೀನಿನಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದು 15–20 ದಿನದಲ್ಲಿ ಕಟಾವು ಮಾಡಲಾಗುತ್ತಿತ್ತು. ಮಳೆಯಿಂದ ಜಮೀನಿನಲ್ಲಿ ನೀರು ತುಂಬಿರುವ ಕಾರಣ ಬೆಳೆ ಕೊಳೆತು ಹೋಗಿದ್ದು ಸುಮಾರು ₹ 5 ಲಕ್ಷ ನಷ್ಟವಾಗಿದೆ.

ಇದೇ ಗ್ರಾಮದ ಲಕ್ಕಮ್ಮ ಎಂಬುವವರ 2 ಎಕರೆ ಪ್ರದೇಶದಲ್ಲಿದ್ದ ಈರುಳ್ಳಿ ಬೆಳೆ ಕೊಳೆತುಹೋಗಿದ್ದು ಸುಮಾರು ₹ 2 ಲಕ್ಷ ನಷ್ಟ ಸಂಭವಿಸಿದೆ. ಎಚ್. ನಾಗರಾಜ ಎಂಬುವವರ 2 ಎಕರೆ ಪ್ರದೇಶದಲ್ಲಿ ಹಾಕಿದ್ದ ಟೊಮೊಟೊ ಬೆಳೆ ಮಳೆಗೆ ಸಿಕ್ಕಿ ನಾಶವಾಗಿದೆ ಎಂದು ಗ್ರಾಮದ ಮುಖಂಡ ರಾಜಣ್ಣ ತಿಳಿಸಿದ್ದಾರೆ.

ADVERTISEMENT

ಈ ನಡುವೆ ಸುಮಾರು 40 ವರ್ಷದ ನಂತರ ತಾಲ್ಲೂಕಿನ ಗೂಡನೂರನಹಳ್ಳಿಯ ಸಣ್ಣ ಮತ್ತು ದೊಡ್ಡ ಕೆರೆಗಳು ಭರ್ತಿಯಾಗಿರುವುದು ಸಂತಸದ ವಿಚಾರ ಎಂದು ರಾಜಣ್ಣ
ಹೇಳಿದ್ದಾರೆ.

ಮಳೆ ವಿವರ: ಈಶ್ವರಗೆರೆ ಗ್ರಾಮದಲ್ಲಿ 68.6 ಮಿ.ಮೀ. ಮಳೆಯಾಗಿದ್ದರೆ, ಸೂಗೂರಿನಲ್ಲಿ 46.2ಮಿ.ಮೀ., ಬಬ್ಬೂರಿನಲ್ಲಿ 18.4ಮಿ.ಮೀ., ಹಿರಿಯೂರಿನಲ್ಲಿ 13.2ಮಿ.ಮೀ., ಇಕ್ಕನೂರಿನಲ್ಲಿ 12.2ಮಿ.ಮೀ. ಹಾಗೂ ಜವನಗೊಂಡನಹಳ್ಳಿಯಲ್ಲಿ 5 ಮಿ.ಮೀ. ಮಳೆಯಾಗಿದೆ ಎಂದು ತಹಶೀಲ್ದಾರ್ ವೆಂಕಟೇಶಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.