ADVERTISEMENT

ಕನ್ನಡ ಭಾಷೆ ಜಾಗೃತಿಗೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:25 IST
Last Updated 24 ಮೇ 2017, 5:25 IST

ಚಿತ್ರದುರ್ಗ: ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕಡ್ಡಾಯವಾಗಿ ಕನ್ನಡ ಅನುಷ್ಠಾನ ಮಾಡಲಾಗುತ್ತಿದ್ದು, ಇಲಾಖೆಗಳ ಜಿಲ್ಲಾ ವೆಬ್‌ಸೈಟ್‌ನಲ್ಲಿಯೂ ಕನ್ನಡವನ್ನು ಅಳವಡಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಇಲಾಖೆಗಳಂತೆ ಸಂಘ, ಸಂಸ್ಥೆಗಳು, ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಕನ್ನಡದಲ್ಲಿ ಮೊದಲು ಹೆಸರು ಹಾಕಿ ನಂತರ ಇತರೆ ಭಾಷೆಯಲ್ಲಿ ನಾಮಫಲಕ ಹಾಕಬೇಕು ಎಂದು ಸೂಚಿಸಿದರು.

ಕನ್ನಡ ಹೊರತುಪಡಿಸಿ ಇತರೆ ಭಾಷೆ ಪ್ರಧಾನವಾಗಿರಬಾರದು. ಸಂಘ, ಸಂಸ್ಥೆಗಳು, ಅಂಗಡಿಗಳಿಗೆ ಪರವಾನಗಿ ನೀಡುವಾಗ ಇದೇ ಷರತ್ತಿಗೆ ಒಳಪಟ್ಟು ಪರವಾನಗಿ ನೀಡಲು ಪೌರಾಯುಕ್ತರು, ಮುಖ್ಯಾಧಿಕಾರಿಗೆ ತಿಳಿಸಬೇಕು. ಕನ್ನಡ ವಾತಾವರಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಭಿಯಾನ ಕೈಗೊಳ್ಳುವ ಮೂಲಕ ಕನ್ನಡ ಜಾಗೃತಿ ಮೂಡಿಸಲಾಗುವುದು ಎಂದರು.

ADVERTISEMENT

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಕನ್ನಡವನ್ನು ಮೊದಲ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಲು ಅವಕಾಶ ಇದೆ ಎಂದರು.
ನಗರದಲ್ಲಿ ಅಳವಡಿಸಲಾಗಿರುವ ಪ್ರಚಾರದ ಹೆದ್ದಾರಿ ಫಲಕಗಳಲ್ಲಿ ಕೆಲವು ಖಾಸಗಿ ಶಾಲೆಗಳು ಇಂಗ್ಲಿಷ್ ಭಾಷೆಯಲ್ಲಿ ಮುದ್ರಣ ಮಾಡಲಾಗಿದೆ.

ಮೊದಲ ಅದ್ಯತೆ ಕನ್ನಡದಲ್ಲಿ ಮುದ್ರಿಸಿ, ಅಗತ್ಯವಿದ್ದಲ್ಲಿ ಇತರೆ ಭಾಷೆ ಬಳಕೆ ಮಾಡಬೇಕು ಎಂಬ ಕುರಿತು ನಗರಸಭೆ ಆಯುಕ್ತರು ಪರಿಶೀಲನೆ ನಡೆಸಿ ಪರವಾನಗಿ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಅಂಗಡಿಗಳ ಮುಂಭಾಗದಲ್ಲಿಯೂ ಹೆಸರನ್ನು ಮೊದಲು ಕನ್ನಡದಲ್ಲಿ ಪ್ರಕಟಿಸಿ ನಂತರ ಇತರೆ ಭಾಷೆಯಲ್ಲಿ ಪ್ರಕಟ ಮಾಡಬೇಕು.

ಲೇವಾದೇವಿ ಗಿರಿವಿದಾರರು ಗುಜರಾತಿಯಲ್ಲಿ ಬಿಲ್ ಮುದ್ರಣ ಮಾಡಲಾಗಿದೆ ಎಂದು ದೂರು ಬಂದಿದೆ. ಆದ್ದರಿಂದ ಮೊದಲು ಕನ್ನಡದಲ್ಲಿ ರಸೀದಿಗಳನ್ನು ಮುದ್ರಣ ಮಾಡಬೇಕು. ಅದಕ್ಕಾಗಿ ಕನ್ನಡ ಭಾಷೆಯ ಜಾಗೃತಿ ಮೂಡಿಸಲು ಕನ್ನಡ ಜಾಗೃತಿ ಸಮಿತಿಯಿಂದ ಅಭಿಯಾನ ಕೈಗೊಳ್ಳುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಅಗತ್ಯ ಇದ್ದು, ಮುಂದಿನ ದಿನಗಳಲ್ಲಿ ಇದನ್ನು ಕೈಗೊಳ್ಳಲಾಗುತ್ತದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ರವೀಂದ್ರ, ಕನ್ನಡ ಜಾಗೃತ ಸಮಿತಿ ಸದಸ್ಯರಾದ ಪ್ರೊ.ಚಂದ್ರಶೇಖರ್ ತಾಳ್ಯ, ಡಾ.ಕರಿಯಪ್ಪ ಮಾಳಗಿ, ಪ್ರೊ.ಚಿತ್ರಲಿಂಗಪ್ಪ, ಸಾಹಿತಿ ತಿಪ್ಪಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ಪೌರಾಯುಕ್ತ ಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.