ADVERTISEMENT

ಕಾಡುಪ್ರಾಣಿಗಳಿಗಾಗಿ ಟ್ಯಾಂಕರ್‌ ನೀರು

ವಿಶೇಷ ವರದಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 4:40 IST
Last Updated 15 ಮಾರ್ಚ್ 2017, 4:40 IST

ಚಿತ್ರದುರ್ಗ: ಮಳೆ ಕೊರತೆಯಿಂದಾಗಿ ಜೋಗಿಮಟ್ಟಿ ಅರಣ್ಯದೊಳಗಿನ ಪ್ರಾಣಿಗಳ ಬಾಯಾರಿಕೆ ನೀಗಿಸಲು ಅರಣ್ಯ ಇಲಾಖೆ ಕಾಡಿನ ನಡುವೆ ಪುಟ್ಟ ಪುಟ್ಟ ನೀರಿನ ಹೊಂಡಗಳನ್ನು ನಿರ್ಮಿಸಿದ್ದು, ಆ ಹೊಂಡಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸುತ್ತಿದ್ದಾರೆ.

ಎರಡು ವರ್ಷಗಳ ಸತತ ಬರದಿಂದಾಗಿ ಅರಣ್ಯದೊಳಗಿನ ಗುಂಡಿ, ಹೊಂಡಗಳಲ್ಲಿ ನೀರು ಖಾಲಿಯಾಗಿದೆ. ಬಂಡೆಗಳ ನಡುವಿನ ನೀರಿನ ದೊಣೆಗಳಲ್ಲೂ ನೀರಿಲ್ಲ. ಹೀಗಾಗಿ ಪ್ರಾಣಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಪ್ರದೇಶದ ಆಯ್ದ 17 ಜಾಗಗಳಲ್ಲಿ ನೀರಿನ ಹೊಂಡಗಳನ್ನು (ವಾಟರ್ ಹೋಲ್ಸ್‌) ನಿರ್ಮಿಸಿ, ಅವುಗಳಲ್ಲಿ ಐದು ಗುಂಡಿಗಳಿಗೆ  ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ.

2015–16ನೇ ಸಾಲಿನಲ್ಲಿ ಜೋಗಿಮಟ್ಟಿಯನ್ನು ‘ವನ್ಯಜೀವಿ ಧಾಮ’ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದ ನಂತರ, ಪ್ರಾಣಿ ಮತ್ತು ಪಕ್ಷಿ ಸಂಕುಲದ ರಕ್ಷಣೆಗಾಗಿ ಅರಣ್ಯ ಇಲಾಖೆ ತೀವ್ರ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಎಲ್ಲೆಲ್ಲಿ ನೀರಿನ ತಾಣಗಳು: ಜೋಗಿಮಟ್ಟಿ ಅರಣ್ಯ ವ್ಯಾಪ್ತಿಯ ಕುಕ್ಕುಡೇಶ್ವರ ಕಟ್ಟೆ, ಬೀರಮಲ್ಲಪ್ಪನ ಕಟ್ಟೆ, ಗೋಪನಕಟ್ಟೆ, ಜೋಗಿಮಟ್ಟಿ ಅರಣ್ಯದೊಳಗಿನ ಮುಖ್ಯರಸ್ತೆಯಲ್ಲಿನ ಮೂರನೇ ತಿರುವು, ಅಡಿಗೆ ಕಲ್ಲು ಭಾಗದಲ್ಲಿರುವ ಕಟ್ಟೆಗಳನ್ನು ನಿರ್ಮಿಸಲಾಗಿದೆ.  ಕುಕ್ಕುಡೇಶ್ವರ ಕಟ್ಟೆಗೆ ಹೋಗುವ ದಾರಿ, ಬೆಳವನಮಟ್ಟಿ ದಾರಿ, ಬೀರಮಲ್ಲಪ್ಪನ ಹಟ್ಟಿ, ಜೋಗಿಮಟ್ಟಿ ರಸ್ತೆಯ 5ನೇ ತಿರುವು, ಅಡಿಗೆ ಕಲ್ಲು ಭಾಗದಲ್ಲಿ ಸಿಮೆಂಟ್ ಕಾಂಕ್ರೀಟ್ ನೀರಿನ ಹೊಂಡಗಳನ್ನು ತೆಗೆಸಲಾಗಿದೆ. ಎಲ್ಲ  ದಕ್ಕೂ ಸಿಮೆಂಟ್ ಕಾಂಕ್ರೀಟ್ ಹೊದಿಕೆ ಮಾಡಿ, ಮುಂದಿನ ದಿನ ಗಳಲ್ಲೂ ನೀರು ಸಂಗ್ರಹ   ಮಾಡಲಾಗಿದೆ.

ಜಿಪಿಎಸ್ ಕ್ಯಾಮೆರಾ : ನೀರು ಹೊಂಡ ಮತ್ತು ಗುಂಡಿಗಳನ್ನು ನಿರ್ಮಿಸಿರುವ ಸ್ಥಳಗಳ ಸಮೀಪದಲ್ಲಿ ಜಿಪಿಎಸ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇಪ್ಪತ್ತು ನಾಲ್ಕು ಗಂಟೆಗಳ ಕಾಲ ಕ್ಯಾಮೆರಾ ಚಾಲನೆಯಲ್ಲಿರುತ್ತದೆ. ಯಾವ ಸಮಯದಲ್ಲಿ ಪ್ರಾಣಿಗಳು ಬಂದು ನೀರು ಕುಡಿಯುತ್ತವೆ ಎಂಬುದನ್ನು ಸಮಯ, ದಿನಾಂಕ ಸಹಿತ ಚಿತ್ರವನ್ನು ದಾಖಲಿಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವಾರದಿಂದ ಜಿಪಿಎಸ್ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ದೃಶ್ಯ ಮತ್ತು ಚಿತ್ರಗಳ ಪ್ರಕಾರ, ನೀರಿನ ಹೊಂಡಗಳಿಗೆ ಮುಳ್ಳಂದಿ, ಕೃಷ್ಣಮೃಗ, ನವಿಲು, ಮುಗುಸಿ ಸೇರಿದಂತೆ ಹತ್ತು ಹಲವು ವಿವಿಧ ಪಕ್ಷಿಗಳು ಬಂದು ನೀರು ಕುಡಿದು ಹೋಗಿವೆ.

ಮಳೆಗಾಲಕ್ಕೂ ಹೊಂಡಗಳ ಸಿದ್ಧತೆ: ಜೋಗಿಮಟ್ಟಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿರುವ ಕೆನ್ನೆಡಲು, ಕಕ್ಕೆಹರವು ಭಾಗದಲ್ಲೂ ನೀರಿನ ಹೊಂಡಗಳನ್ನು ಮಾಡಲಾಗಿದೆ. ಈ ಹೊಂಡಗಳಲ್ಲಿ ಮುಕ್ಕಾಲುಪಾಲು ಮಳೆ ನೀರು ಸಂಗ್ರಹಕ್ಕಾಗಿ ಮಾಡಿದ್ದಾರೆ. ಉಳಿದ ಐದು ಹೊಂಡಗಳಿಗೆ ಮಾತ್ರ, ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ.

‘ಕಾಡಿನ ಹೊಂಡಗಳಿಗೆ ಚಿತ್ರದುರ್ಗ ನಗರ ಪ್ರದೇಶ ವ್ಯಾಪ್ತಿಯ ಕೊಳವೆ ಬಾವಿಗಳಿಂದಲೇ ನೀರು ಪೂರೈಕೆ ಮಾಡುತ್ತಿದ್ದೇವೆ. ಪ್ರತಿ ನಿತ್ಯ ಟ್ಯಾಂಕರ್‌ಗಳಲ್ಲಿ ನೀರು ಕೊಂಡೊಯ್ದು, ಎಲ್ಲೆಲ್ಲಿ ಹೊಂಡಗಳು ಖಾಲಿ ಯಾಗುತ್ತವೋ ಅವುಗಳಿಗೆ ನೀರು ಪೂರೈ ಸುತ್ತವೆ. ಕಳೆದ ಒಂದು ತಿಂಗಳಿನಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಒಂದು ವಾರದ ಕ್ಯಾಮೆರಾ ಟ್ರಾಪ್‌ನಲ್ಲಿ ಚಿತ್ರೀಕರಣವಾಗಿರುವುದನ್ನು ಮಾಧ್ಯಮ ಗಳಿಗೆ ನೀಡಿದ್ದೇವೆ’ ಎಂದು ಚಂದ್ರಶೇಖರ ನಾಯಕ್ ಮಾಹಿತಿ ನೀಡಿದರು.

**

ಒಂದು ತಿಂಗಳಿನಿಂದ ಐದು ಹೊಂಡಗಳಿಗೆ ನೀರು ತುಂಬಿಸುತ್ತಿದ್ದೇವೆ. ಕೆಲವು ಕಡೆ ಹೊಂಡಗಳನ್ನು ಮಾಡಿದ್ದೇವೆ. ಒಂದು ಸಾರಿ ಮಳೆ ಬಂದರೂ ನೀರು ಸಂಗ್ರಹವಾಗುತ್ತದೆ.
ಚಂದ್ರಶೇಖರ ನಾಯಕ್, ಡಿಎಫ್‍ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.