ADVERTISEMENT

‘ಕಾಲುಬಾಯಿ ಮುಕ್ತ ರಾಷ್ಟ್ರ: 2020 ಗುರಿ’

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 3:56 IST
Last Updated 19 ಏಪ್ರಿಲ್ 2017, 3:56 IST
ಚಿಕ್ಕಜಾಜೂರು: ‘ಜಾನುವಾರಿಗೆ ಬರುವ ಕಾಲುಬಾಯಿ ಜ್ವರದಿಂದ ರಾಷ್ಟ್ರವನ್ನು 2020ರ ವೇಳೆಗೆ ಮುಕ್ತಗೊಳಿಸಬೇಕು ಎಂಬ ಗುರಿ ಸರ್ಕಾರದ್ದಾಗಿದೆ’ ಎಂದು ಪಶು ವೈದ್ಯಾಧಿಕಾರಿ ಡಾ.ವಿಶ್ವನಾಥ್‌ ತಿಳಿಸಿದರು.
 
ಸಮೀಪದ ಚಿಕ್ಕಂದವಾಡಿ ಗ್ರಾಮದಲ್ಲಿ ಮಂಗಳವಾರ ಜಾನುವಾರಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು. ‘ಸರ್ಕಾರದ ಯೋಜನೆಯಂತೆ ವರ್ಷದಲ್ಲಿ ಎರಡು ಬಾರಿ ಲಸಿಕೆ ಹಾಕಲಾಗುತ್ತಿದ್ದು, ಇದು 12ನೇ ಸುತ್ತಿನ ಕಾರ್ಯಕ್ರಮವಾಗಿದೆ.

ಲಸಿಕೆ ಹಾಕಿದ ಜಾನುವಾರಿಗೆ ಈಗ ಮೈಕ್ರೋ ಚಿಪ್‌ ಅಳವಡಿಸಲಾಗಿದೆ. ರಕ್ತದ ಮಾದರಿಯನ್ನು ದಾವಣಗೆರೆಯ ಪ್ರಾದೇಶಿಕ ರೋಗ ತಪಾಸಣಾ ಕೇಂದ್ರಕ್ಕೆ ಕಳುಹಿಸಲಾಗುವುದು.

27ನೇ ದಿನದಂದು ಮತ್ತೆ ರಕ್ತದ ಮಾದರಿ ಪರೀಕ್ಷಿಸಿದ ನಂತರ, ಈ ಹಿಂದೆ ಲಸಿಕೆ ಹಾಕಿದ್ದ ಜಾನುವಾರಿನ ರಕ್ತದ ಮಾದರಿಯನ್ನು ಪರೀಕ್ಷಿಸಲಾಗುವುದು. ಇದರಿಂದ ಲಸಿಕೆಯ ಪ್ರಯೋಜನ ತಿಳಿದುಬರಲಿದೆ’ ಎಂದು ತಿಳಿಸಿದರು.
 
‘ಏ.17ರಿಂದ 20 ದಿನಗಳ ಕಾಲ ಬಿ. ದುರ್ಗ ಹೋಬಳಿಯ 55 ಗ್ರಾಮಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಹೋಬಳಿಯಲ್ಲಿ 20 ಸಾವಿರಕ್ಕೂ ಹೆಚ್ಚು ಜಾನುವಾರು ಇವೆ’ ಎಂದರು.ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಮಂಜುನಾಥ್‌ ಹಾಗೂ ಉಪ ಕೇಂದ್ರದ ಸಹಾಯಕರು ಮತ್ತು ಸಿಬ್ಬಂದಿ ಇದ್ದರು.

ಸಿರಿಗೆರೆ:  ‘ಜಾನುವಾರು ಕಾಲುಬಾಯಿ ರೋಗಕ್ಕೆ ತುತ್ತಾಗದಂತೆ ರೈತರು ಲಸಿಕೆ ಹಾಕಿಸುವುದು ಉತ್ತಮ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ತಿಪ್ಪೇಸ್ವಾಮಿ ಹೇಳಿದರು. 
 
ಪಶು ಚಿಕಿತ್ಸಾಲಯದ ಆವರಣದಲ್ಲಿ ಸೋಮವಾರ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಮಳೆ ಹೆಚ್ಚಾದಾಗ ಮತ್ತು ನೀರಿನ ಅಭಾವದಿಂದ ಹಲವು ರೋಗಗಳಿಗೆ ಜಾನುವಾರು ತುತ್ತಾಗುತ್ತಿವೆ. ಇದರಿಂದ ಪಾರಾಗಲು ಮುನ್ನೆಚ್ಚರಿಕೆಯಾಗಿ ವೈದ್ಯಕೀಯ ಪರೀಕ್ಷಕರನ್ನು ಭೇಟಿ ಮಾಡಿ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.
 
ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸುಮಾ ನಾಗರಾಜು, ಸಹಾಯಕ ನಿರ್ದೇಶಕರಾದ ಡಾ.ಬಿ.ಬೊಮ್ಮಯ್ಯ, ಡಾ.ಸತೀಶ್‌ ಕುಮಾರ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಎಸ್.ಶಶಿಧರ, ಸ್ವಾಮಿ, ಸಾಬ್‌ಜಾನ್‌ ಸಾಬ್‌, ಸಿದ್ದೇಶ್ವರಯ್ಯ, ಶೇಖರ್‌ ನಾಯ್ಕ್‌, ಪಶು ಚಿಕಿತ್ಸಾಲಯದ ಸಿಬ್ಬಂದಿ, ಗ್ರಾಮಸ್ಥರಾದ ಅರವಿಂದಪ್ಪ, ತಿಮ್ಮರಾಜು, ಬಸವರಾಜು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.