ADVERTISEMENT

ಕೃಷಿ ಪರಿಕರ ಬಾಡಿಗೆ ಪರಿಷ್ಕರಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 5:25 IST
Last Updated 19 ಜುಲೈ 2017, 5:25 IST

ಚಿತ್ರದುರ್ಗ: ‘ಬರಗಾಲದ ಕಾರಣ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿನ ಕೃಷಿ ಪರಿಕರಗಳ ಬಾಡಿಗೆ ದರವನ್ನು ಈ ವರ್ಷ ಪರಿಷ್ಕರಿಸುವುದು ಬೇಡ’ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೃಷಿ ಯಂತ್ರಧಾರೆಯ 17 ಕೇಂದ್ರಗಳಿವೆ. ವಿಎಸ್‌ಟಿ ಸಂಸ್ಥೆಯಿಂದ 10 ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ (ಎಸ್‌ಕೆಆರ್‌ಡಿಪಿ) ಏಳು ಕೇಂದ್ರಗಳನ್ನು ನಡೆಸಲಾಗುತ್ತಿದೆ’ ಎಂದರು.

‘ಬೇಸಾಯ ಮತ್ತು ಕೊಯ್ಲು, ನಿರ್ವಹಣೆಗೆ ಯಂತ್ರಗಳನ್ನು ಖಾಸಗಿಯವರಿಗಿಂತ ಕಡಿಮೆ ಬಾಡಿಗೆ ನಿಗದಿಗೊಳಿಸಲಾಗಿದೆ. ಬಿತ್ತನೆ ಕೂರಿಗೆ ಬಾಡಿಗೆ ದರ ಗಂಟೆಗೆ ₹450ಗಳಿದ್ದು ಇದರ ಪರಿಷ್ಕರಿಸಬೇಕು’ ಎಸ್‌ಕೆಆರ್‌ಡಿಪಿ ಅಧಿಕಾರಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಬರದಿಂದ ಈ ವರ್ಷ ಪರಿಷ್ಕರಣೆ ಮಾಡುವುದಿಲ್ಲ.

ಈ ಕೇಂದ್ರಗಳು ವಾಣಿಜ್ಯ ಉದ್ದೇಶಕ್ಕಿಂತಲೂ ಸೇವಾ ದೃಷ್ಟಿಯಿಂದ ಸರ್ಕಾರ ರೂಪಿಸಿದೆ. ಇದರಿಂದ ಹೆಚ್ಚು ರೈತರಿಗೆ ಅನುಕೂಲ ಆಗಬೇಕು’ ಎಂದು ಸ್ಪಷ್ಟಪಡಿಸಿದರು.
‘ರೈತರು ಖಾಸಗಿ ಫೈನಾನ್ಸ್‌ಗಳಿಂದ ಸಾಲ ಮಾಡಿ ಟ್ರ್ಯಾಕ್ಟರ್ ಖರೀದಿಸುವ ಬದಲು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಯಂತ್ರಗಳನ್ನು ಕಡಿಮೆ ದರದಲ್ಲಿ ಬಾಡಿಗೆ ಪಡೆದುಕೊಳ್ಳಬೇಕು.

ADVERTISEMENT

ಸಾಲ ಮಾಡಿ, ಕಂತು ಕಟ್ಟಲು ಸಾಧ್ಯವಾಗದಿದ್ದಾಗ ಸರ್ಕಾರವನ್ನು ನೆರವಿಗೆ ಕರೆಯುವ ಬದಲು, ಸರ್ಕಾರವೇ ಸ್ಥಾಪಿಸಿರುವ ಕೃಷಿ ಯಂತ್ರಧಾರೆ ಕೇಂದ್ರಗಳ ಬಳಕೆ ಮಾಡಿ
ಕೊಳ್ಳುವಂತೆ ರೈತರಿಗೆ ತಿಳಿಸಿ’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಹಿರಿಯೂರಿನ ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ, ರೈತರಿಗೆ ಮತ್ತು ರೈತ ಮಹಿಳೆಯರಿಗೆ ಕೃಷಿ ತಾಂತ್ರಿಕತೆ ಬಗ್ಗೆ ತರಬೇತಿ ನೀಡಿ ಅಧ್ಯಯನ ಪ್ರವಾಸ ಕೈಗೊಳ್ಳಲಾಗುತ್ತದೆ. ಕಳೆದ ವರ್ಷ ಇಲ್ಲಿ 776 ಜನರಿಗೆ ವಿವಿಧ ತರಬೇತಿ ನೀಡುವ ಮೂಲಕ ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಬೇರೆ ಬೇರೆ ಜಿಲ್ಲೆಗಳಿಗೆ ಹೋಗಲಾಗಿತ್ತು ಎಂದು ಬಬ್ಬೂರು ಕೆವಿಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

‘ಕೃಷಿಭಾಗ್ಯ ಯೋಜನೆಯಡಿ ರೈತರಿಗೆ ಕೃಷಿಹೊಂಡ, ಡೀಸೆಲ್ ಪಂಪ್‌ಸೆಟ್, ಪೈಪ್‌ಗಳನ್ನು ಸಹಾಯಧನದಲ್ಲಿ ನೀಡಲಾಗುತ್ತದೆ. ಈ ವರ್ಷ ಕೃಷಿಭಾಗ್ಯ ಯೋಜನೆಯಡಿ 2,500ರಷ್ಟು ಭೌತಿಕ ಗುರಿ ಹೊಂದಲಾಗಿದೆ. ಈ ಯೋಜನೆಯಲ್ಲಿ ಕೆಲವು ರೈತರು ಯಶಸ್ವಿ ಆಗಿದ್ದಾರೆ’ ಎಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಣಣ್ ಕಳ್ಳಣ್ಣನವರ್ ತಿಳಿಸಿದರು.

‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯು 2009–10ರಿಂದ ಪ್ರಾರಂಭವಾಗಿದ್ದು 2014–15ರ ವರೆಗೆ ಆರು ತಂಡಗಳಿಂದ 28 ಯೋಜನೆಗಳನ್ನು ಅನುಷ್ಠಾನ ಮಾಡಿ ಜಿಲ್ಲೆಯಲ್ಲಿ ₹151 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಲಕ್ಷ್ಮಣ್ ಮಾಹಿತಿ ನೀಡಿದರು.

ಜಲಾನಯನ ಯೋಜನೆ ಕುರಿತು ಪ್ರತ್ಯೇಕವಾಗಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ಅಂದು ವಿವರವಾದ ವರದಿ ಸಲ್ಲಿಸಬೇಕು ಎಂದು ಎಲ್ಲಾ ಕೃಷಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ  ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಂ.ತಿಮ್ಮಪ್ಪ, ಕೃಷಿ ಸಮನ್ವಯ ಸಮಿತಿ ಸದಸ್ಯರಾದ ತಿಮ್ಮಾರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ.ಚಂದ್ರಪ್ಪ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿಂಗೇಗೌಡ, ಕೃಷಿ ಉಪನಿರ್ದೇಶಕ ಶಿವಕುಮಾರ್, ಸುಜಾತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ರೈತ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿರುವ ಕೃಷಿ ಯಂತ್ರಧಾರೆ ಕೇಂದ್ರಗಳು: 17

 2,581 ರೈತರು ಕಳೆದ ವರ್ಷ ಬಾಡಿಗೆ ಪಡೆದವರು

₹ 37.40ಲಕ್ಷ ಬಂದಿರುವ ಆದಾಯ

₹43.38ಲಕ್ಷ ಆಗಿರುವ ವೆಚ್ಚ 

₹ 5.97ಲಕ್ಷ ಹೆಚ್ಚುವರಿ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.