ADVERTISEMENT

ಕೋಡಿ ಹರಿದ ಕಲ್ಲಹಳ್ಳಿಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:15 IST
Last Updated 22 ಅಕ್ಟೋಬರ್ 2017, 5:15 IST
ಚಿತ್ರದುರ್ಗ ತಾಲ್ಲೂಕಿನ ಕಲ್ಲಹಳ್ಳಿ ಕೆರೆಗೆ ಶನಿವಾರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬಾಗಿನ ಅರ್ಪಿಸಿದರು.
ಚಿತ್ರದುರ್ಗ ತಾಲ್ಲೂಕಿನ ಕಲ್ಲಹಳ್ಳಿ ಕೆರೆಗೆ ಶನಿವಾರ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬಾಗಿನ ಅರ್ಪಿಸಿದರು.   

ತುರುವನೂರು: ಚಿತ್ರದುರ್ಗ ತಾಲ್ಲೂಕಿನ ಕಲ್ಲಹಳ್ಳಿಕೆರೆ ಏಳು ವರ್ಷಗಳಲ್ಲಿ ಎರಡು ಬಾರಿ ತುಂಬಿದ್ದು, ಸುತ್ತಲಿನ ರೈತರಿಗೆ ಸಂತಸ ಉಂಟಾಗಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ತುಂಬಿದ ಕಲ್ಲಹಳ್ಳಿಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ‘ಎರಡೂವರೆ ವರ್ಷಗಳಿಂದ ಜಿಲ್ಲೆಯಲ್ಲಿ ಸಂಪೂರ್ಣ ಬರ ಆವರಿಸಿತ್ತು. ಬರ ಪರಿಹಾರವಾಗಿ ಹೊರ ರಾಜ್ಯಗಳಿಂದ ಮೇವು ತಂದು ಜಾನುವಾರಿಗೆ ರಕ್ಷಣೆ  ನೀಡಲಾಗಿತ್ತು. ಆದರೆ ಒಂದೂವರೆ ತಿಂಗಳಿಂದ ಸತತ ಮಳೆಯಾದ ಕಾರಣ, ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ಬಂದಿದೆ. ಕೆಲವು ಕೋಡಿ ಬಿದ್ದಿವೆ’ ಎಂದರು.

‘ಸ್ವಾತಂತ್ರ್ಯ ಪೂರ್ವ ಸಾಕಷ್ಟು ಕೆರೆಗಳನ್ನು ನಿರ್ಮಿಸಲಾಗಿದ್ದು, ಎಂಥ ಅತಿವೃಷ್ಟಿಯನ್ನಾದರೂ ತಡೆಯುತ್ತಿತ್ತು. ಈಗಲೂ ನೀರು ನಿಲ್ಲಿಸಲು ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಸಂಪರ್ಕ ಕಲ್ಪಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಸುರಿದ ಮಳೆ ನೀರು ಸಿಹಿ ನೀರು ಹೊಂಡ, ಸಂತೇಹೊಂಡ ತಲುಪಿ ಅಲ್ಲಿಂದ ಮಲ್ಲಾಪುರ ಕೆರೆ, ಗೋನೂರು ಕೆರೆ, ಬೊಮ್ಮೇನಹಳ್ಳಿ ಕೆರೆ, ಕಲ್ಲಹಳ್ಳಿ ಕರೆ ನಂತರ ಚಳ್ಳಕೆರೆ ತಾಲ್ಲೂಕಿನ ಕೆರೆಗಳಿಗೆ ಸೇರುತ್ತದೆ’ ಎಂದು ವಿವರಿಸಿದರು.

ADVERTISEMENT

ಈಗ ಉತ್ತಮ ಮಳೆಯಾಗಿದ್ದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಆದರೂ ಕೂಡ ಹಿರೇಗುಂಟನೂರು ಹೋಬಳಿಯಲ್ಲಿ ಉತ್ತಮ ಮಳೆಯಾಗಿಲ್ಲ. ಕೆರೆ, ಕಟ್ಟೆಗಳು ತುಂಬಿಲ್ಲ’ ಎಂದರು.

‘ಮಳೆ ಹೆಚ್ಚು ಬಂದಿದ್ದರಿಂದ ರಾಗಿ, ಮೆಕ್ಕೆಜೋಳ, ಶೇಂಗಾ ಬೆಳೆಯಲ್ಲಿ ಸೈನಿಕಹುಳು­ಬಾಧೆ ಹೆಚ್ಚಾಗಿ ನಷ್ಟ ಉಂಟಾಗಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಮರೆಡ್ಡಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಮೂರ್ತಪ್ಪ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಿರ್ಮಲ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.