ADVERTISEMENT

ಗೋಶಾಲೆಗಳಲ್ಲಿ ಮೇವಿನ ಸಮಸ್ಯೆ ಇಲ್ಲ: ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:07 IST
Last Updated 8 ಜುಲೈ 2017, 5:07 IST

ನಾಯಕನಹಟ್ಟಿ: ‘ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆಯುತ್ತಿರುವ 14 ಗೋಶಾಲೆಗಳಲ್ಲಿ ಎಲ್ಲಿಯೂ ಮೇವಿನ ಸಮಸ್ಯೆಯಿಲ್ಲ.ಈ ಬಗ್ಗೆ ರೈತರು ಅನಗತ್ಯ ಗೊಂದಲ ಸೃಷ್ಟಿಸಬಾರದು’ ಎಂದು ಉಪವಿಭಾಗಾಧಿಕಾರಿ ಟಿ.ರಾಘವೇಂದ್ರ ಹೇಳಿದರು.

‘ಎಲ್ಲಾ ಜಿಲ್ಲೆಗಳ ಗೋಶಾಲೆಗಳನ್ನು ನಿಯಮದಂತೆ ಮುಚ್ಚಲಾಗಿದೆ. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಮಳೆಯ ಕೊರತೆಯಿಂದ ಯಾವುದೇ ಗೋಶಾಲೆಯನ್ನೂ ಮುಚ್ಚಿಲ್ಲ. ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಮೇವು ಸರಬರಾಜು ಮಾಡಿದ ಗುತ್ತಿಗೆದಾರರಿಗೆ ಇದುವರೆಗೂ ಬಿಲ್ ಹಣ ಪಾವತಿಯಾಗಿಲ್ಲ. ಹೀಗಿದ್ದರೂ ರೈತರು ಹಾಗೂ ರಾಸುಗಳಿಗೆ ತೊಂದರೆ ಆಗದಂತೆ ಮೇವು ಪೂರೈಕೆ ಮಾಡಲಾಗುತ್ತಿದೆ. ಹಿರೇಕೆರೆ ಚೌಡಮ್ಮನ ಕಾವಲು ಪ್ರದೇಶದ ಗೋಶಾಲೆಯಲ್ಲಿ 3,291 ರಾಸುಗಳಿವೆ.  ದಿನಕ್ಕೆ ಪ್ರತಿ ಜಾನುವಾರಿಗೆ ಐದು ಕೆ.ಜಿ. ಮೇವು ನೀಡಲಾಗುತ್ತಿದೆ’ ಎಂದು ಹೇಳೀದರು.

ADVERTISEMENT

‘ರಾತ್ರಿ ಅಲ್ಲಿಯೇ ತಂಗುವ ರಾಸುಗಳಿಗೆ ಹೆಚ್ಚುವರಿಯಾಗಿ ಎರಡು ಕೆ.ಜಿ ಮೇವು ಪೂರೈಸಲಾಗುತ್ತಿದೆ. ಇದೀಗ ಅಲ್ಲಿನ ಗೋಶಾಲೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೇವು ನೀಡಲಾಗುತ್ತಿದೆ. ಈ ಮೊದಲು ಎಂಟು ಲೋಡ್ ಮೇವು ಸರಬರಾಜು ಆಗುತ್ತಿತ್ತು. ಇದೀಗ ಒಂದು ಲೋಡ್‌ ಹೆಚ್ಚಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.