ADVERTISEMENT

ಗ್ರಾಮದಲ್ಲಿ ದೇವತೆಗಳ ಸಂಗಮ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಮೇ 2017, 5:37 IST
Last Updated 17 ಮೇ 2017, 5:37 IST

ಚಿತ್ರದುರ್ಗ: ತಾಲ್ಲೂಕಿನ ಭೀಮಸಮುದ್ರ ಗ್ರಾಮದ ಶಕ್ತಿದೇವತೆ ಮುರುಡಾಂಬಿಕಾ ದೇವಿಯ ನೂತನ ದೇಗುಲ ಲೋಕಾರ್ಪಣೆ ಮಹೋತ್ಸವದ ಅಂಗವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಗ್ರಾಮದ ಎಲ್ಲ ದೇವತೆಗಳ ಅದ್ಧೂರಿ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.

ಕಣ್ಮನ ಸೆಳೆದ ಅಲಂಕಾರ: ಮೆರವಣಿಗೆ ಅಂಗವಾಗಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ದೇವತೆಗಳ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿವಿಧ ಬಗೆಯ ಪುಷ್ಪಗಳಿಂದ ದೇವತೆಗಳ ಅಲಂಕಾರ ಪ್ರಾರಂಭವಾಯಿತು. ಬೆಳಿಗ್ಗೆ 9.30ರ ಸುಮಾರಿಗೆ ವೈಭವೋಪೇತ ಮೆರವಣಿಗೆ ವೇಳೆ ಗ್ರಾಮದ ಭಕ್ತರಿಂದ ಮುರುಡಾಂಬಿಕಾ ದೇವಿಗೆ ಜಯವಾಗಲಿ ಎಂಬ ಹರ್ಷೋದ್ಗಾರಗಳು ಮೊಳಗಿದವು.

ದೇಗುಲ ಲೋಕಾರ್ಪಣೆ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದ ಬಳಿಕ ಮುರುಡಾಂಬಿಕಾ ದೇಗುಲದಿಂದ ಮೆರವಣಿಗೆ ಪ್ರಾರಂಭವಾಯಿತು. ಗ್ರಾಮದ ಬಸ್ ನಿಲ್ದಾಣ, ಬರಗೇರಮ್ಮ ದೇಗುಲ, ಎಪಿಎಂಸಿ ಮಾರುಕಟ್ಟೆ, ಬಾಲವಿಕಾಸ ಶಾಲಾ ಮಾರ್ಗ ಸೇರಿದಂತೆ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪುನಃ ದೇಗುಲ ತಲುಪಿತು. ಗ್ರಾಮದ ದೇವತೆಗಳ ಉತ್ಸವ ಮೂರ್ತಿ ಕಂಗೊಳಿಸುತ್ತಿದ್ದ ದೃಶ್ಯ ಕಂಡು ಬಂತು.

ADVERTISEMENT

ಗಮನ ಸೆಳೆದ ಕುಂಭ: ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಭೀಮಸಮುದ್ರ ಗ್ರಾಮದ ಉರುಮೆ ಕಲಾ ಸಂಘ, ಡೊಳ್ಳು ಕುಣಿತ, ತಮೆಟೆ ವಾದ್ಯ, ಕಹಳೆ, ಕರಡಿ ಚಮ್ಮಳ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಸುಮಾರು 20 ಮಂದಿ ಪೋತರಾಜರು ಭಾಗವಹಿಸಿ ಮೈಮೇಲೆ ಚಡಿ ಏಟು ಬಾರಿಸಿಕೊಳ್ಳುವ ಮೂಲಕ ಆಕರ್ಷಿಸಿದರು.

ದೇವಿಯ ವಿಶೇಷ: ಗ್ರಾಮದೇವತೆ ಮುರುಡಾಂಬಿಕಾ ದೇವಿ ಗ್ರಾಮವನ್ನು ಕಾಪಾಡುತ್ತಿದ್ದಳು ಎಂಬ ಪ್ರತೀತಿಯಿದೆ. ಗ್ರಾಮಕ್ಕೆ ಯಾವುದೇ ರೀತಿಯ ತೊಂದರೆ ಗಳು ಬಾರದಂತೆ, ದುಷ್ಟಶಕ್ತಿಗಳು ಗ್ರಾಮವನ್ನು ಪ್ರವೇಶಿಸದಂತೆ  ರಕ್ಷಿಸುತ್ತಿದ್ದಾಳೆ ಎನ್ನುತ್ತಾರೆ ಗ್ರಾಮಸ್ಥರು. ಈಗಲೂ ಗ್ರಾಮಸ್ಥರನ್ನು ಕಾಪಾಡುತ್ತಿದ್ದಾಳೆ ಎಂಬ ನಂಬಿಕೆಯಿಂದ ಭೀಮಸಮುದ್ರದ ಗ್ರಾಮಸ್ಥರೆಲ್ಲ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾ, ಆರಾಧಿಸುತ್ತಾ ಬಂದಿದ್ದೇವೆ’ ಎಂದು ತಿಳಿಸಿದರು.

ದೇಗುಲ ಕಳಸ ಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಭೀಮಸಮುದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಟಿ.ಜೆ.ಅರುಣ್‌ಕುಮಾರ್, ಜಿ.ಎಸ್‌. ಅನಿತ್‌ಕುಮಾರ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.