ADVERTISEMENT

ಡಿಜೆಗೆ ಅನುಮತಿ ನಿರಾಕರಣೆ: ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 9:51 IST
Last Updated 3 ಸೆಪ್ಟೆಂಬರ್ 2017, 9:51 IST

ಹೊಳಲ್ಕೆರೆ: ವಿರಾಟ್ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಡಿಜೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸಾವಿರಾರು ಭಕ್ತರು ಶನಿವಾರ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಡಿಜೆಗೆ ಅನುಮತಿ ಕೊಡಬೇಕು ಎಂದು ಪಟ್ಟು ಹಿಡಿದ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಕುಳಿತರು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಒಂಟಿಕಂಬದ ಮಠದ ಬಸವಾನಂದ ಸ್ವಾಮೀಜಿ, ಮಾಜಿ ಶಾಸಕ ಎಂ.ಚಂದ್ರಪ್ಪ, ಶಶಿಶೇಖರ ನಾಯ್ಕ, ಭಜರಂಗದಳದ ರಾಜ್ಯ ಸಂಚಾಲಕ ಶರಣ್ ಪಂಪ್ ವೇಲ್, ಪ್ರಬಂಜನ್ ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಸಾಥ್ ನೀಡಿದರು.

ಸುಮಾರು 3 ಗಂಟೆ ರಸ್ತೆಯಲ್ಲೇ ಕುಳಿತ ಜನ ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿದರು. ಡಿಜೆಗೆ ಅನುಮತಿ ನೀಡುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ADVERTISEMENT

ಶರಣ್ ಪಂಪ್‌ವೆಲ್ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಹಿಂದೂಗಳ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದೆ. ಗಣೇಶ ಉತ್ಸವ ಹಿಂದೂಗಳ ಪವಿತ್ರ ಹಬ್ಬವಾಗಿದ್ದು, ಅದರ ಆಚರಣೆಗೂ ನೂರೆಂಟು ವಿಘ್ನ ತರುತ್ತಿದೆ. 55 ಡಿಸಿಬಲ್ ಗಿಂತ ಹೆಚ್ಚು ಶಬ್ದ ಬರುವ ಧ್ವನಿವರ್ಧಕ ಬಳಸಬಾರದು ಎಂಬ ಷರತ್ತು ವಿಧಿಸಿರುವ ಸರ್ಕಾರ ಮಸೀದಿಗಳಲ್ಲಿ ದಿನಕ್ಕೆ 6 ಬಾರಿ ಆಜಾನ್ ಕೂಗುವ ಧ್ವನಿವರ್ಧಕಗಳ ಡೆಸಿಬಲ್ ಪರೀಕ್ಷಿಸಿದೆಯೇ? ಆದರೂ ನಾವು ಅದನ್ನು ಪ್ರಶ್ನಿಸಿಲ್ಲ. ವರ್ಷಕ್ಕೆ ಒಮ್ಮೆ ಆಚರಿಸುವ ಗಣೇಶ ಉತ್ಸವಕ್ಕೆ ಅಡ್ಡಿ ಪಡಿಸುವ ಇವರದು ಹಿಂದೂಗಳಿಗೆ ಒಂದು ನ್ಯಾಯ, ಮುಸ್ಲಿಮರಿಗೆ ಒಂದು ನ್ಯಾಯ ಎಂಬಂತಾಗಿದೆ’ ಎಂದು ಆರೋಪಿಸಿದರು.

ಮಾಜಿ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ‘ಬಾಲಗಂಗಾಧರ ತಿಲಕರು ಗಣೇಶ ಹಬ್ಬವನ್ನು ಸಾರ್ವಜನಿಕ ಉತ್ಸವವಾಗಿ ಆರಂಭಿಸಿದರು. ಹಿಂದೆ ಬ್ರಿಟಿಷರೇ ಗಣಪತಿ ಉತ್ಸವಕ್ಕೆ ಅನುಮತಿ ಕೊಡುತ್ತಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂಗಳ ಹಬ್ಬಗಳಿಗೆ ತೊಂದರೆ ಕೊಡತ್ತಿದ್ದು, ಬ್ರಿಟಿಷ್ ಸರ್ಕಾರವನ್ನೂ ಮೀರಿಸುತ್ತಿದ್ದಾರೆ. ನಮ್ಮದೇ ದೇಶದಲ್ಲಿ ನಮ್ಮ ಹಬ್ಬ ಮಾಡಲು ಸರ್ಕಾರದ ಭಿಕ್ಷೆ ಬೇಡುತ್ತಿರುವುದು ದುರಂತ’ ಎಂದರು.

ಮಾದಾರ ಚನ್ನಯ್ಯ ಮಾತನಾಡಿ, ಭಾರತೀಯ ಸಂಸ್ಕೃತಿಗೆ ಧಕ್ಕೆ ತರುವ ಪ್ರಯತ್ನ ಮಾಡಬಾರದು ಎಂದರು. ಶೋಭಾಯಾತ್ರೆಗೆ ಬಂದಿದ್ದ ಸಾವಿರಾರು ಸಂಖ್ಯೆಯ ಜನ ಡಿಜೆಗೆ ಅನುಮತಿ ಇಲ್ಲವೆಂದು ತಿಳಿದು ನಿರಾಶೆಗೊಂಡರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಬಿಸಿಲನ್ನೂ ಲೆಕ್ಕಿಸದೆ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಡಿಜೆಗೆ ಅನುಮತಿ ನೀಡದಿದ್ದರೆ ರಾತ್ರಿಯಾದರೂ ಇಲ್ಲೇ ಕೂರುವುದಾಗಿ ಹಠ ಹಿಡಿದರು. ಕೊನೆಗೆ 5 ಸ್ಪೀಕರ್ ಬಾಕ್ಸ್ ಡಿಜೆಗೆ ಅನುಮತಿ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.