ADVERTISEMENT

ತಂಬಾಕಿಗೆ ಕಡಿವಾಣ: ಸುಂದರ ಬದುಕಿಗೆ ಸೋಪಾನ

ಇಂದು ವಕೀಲರ ಭವನದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

ಪ್ರಜಾವಾಣಿ ವಿಶೇಷ
Published 31 ಮೇ 2016, 10:12 IST
Last Updated 31 ಮೇ 2016, 10:12 IST
ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಮರಳು ಶಿಲ್ಪ ಕಲೆಯ ಮೂಲಕ ಕಲಾವಿದರೊಬ್ಬರು ಜಾಗೃತಿ ಮೂಡಿಸಿದರು. (ಸಂಗ್ರಹ ಚಿತ್ರ )
ತಂಬಾಕು ರಹಿತ ದಿನಾಚರಣೆ ಪ್ರಯುಕ್ತ ಮರಳು ಶಿಲ್ಪ ಕಲೆಯ ಮೂಲಕ ಕಲಾವಿದರೊಬ್ಬರು ಜಾಗೃತಿ ಮೂಡಿಸಿದರು. (ಸಂಗ್ರಹ ಚಿತ್ರ )   

ಚಿತ್ರದುರ್ಗ: ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ, ಸಾರ್ವಜನಿಕ ಧೂಮಪಾನ ನಿಷೇಧಿಸಲಾಗಿದ್ದು, ಕಾನೂನು ಉಲ್ಲಂಘಿಸಿದರೆ ದಂಡ ಜತೆಗೆ ಕಠಿಣ ಕ್ರಮ. ಪ್ರತಿ ಅಂಗಡಿ,ಕಚೇರಿಗಳ ಎದುರು ಧೂಮಪಾನ ನಿಷೇಧದ ಬೋರ್ಡ್ ತಗುಲಿಸಬೇಕು.. ತಂಬಾಕು ನಿಯಂತ್ರಣ ಕಾಯ್ದೆಯ ಜಾರಿಗೆ ಕಟ್ಟು ನಿಟ್ಟಿನ ಪ್ರಯತ್ನ...

ಇಂಥ ಅನೇಕ ಘೋಷಣೆ, ಸಲಹೆ, ಕಾಯ್ದೆ, ಕಾನೂನು, ಬೆದರಿಕೆ...ಎಲ್ಲವುಗಳ ನಡುವೆಯೂ ತಂಬಾಕು ನಿಯಂತ್ರಣ ವನ್ನು ಹದ್ದುಬಸ್ತಿಗೆ ತರಲು ಸಾಧ್ಯ ವಾಗುತ್ತಿಲ್ಲ. ಇಂಥ ‘ನಿಯಂತ್ರಣ’ಗಳ ನಡುವೆಯೇ ದೇಶದಲ್ಲಿ ತಂಬಾಕಿನಿಂದ ಬಾಯಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ಬಾಯಿ ಕಾನ್ಸರ್ ಹೊಂದಿರುವ ರಾಷ್ಟ್ರ ಎಂಬ ‘ಕುಖ್ಯಾತಿ’ಗೆ ಪಾತ್ರವಾಗಿದೆ. 

ಭಾರತದಲ್ಲಿ ಪುರುಷರ ಮತ್ತು ಮಹಿಳೆಯರ ತಂಬಾಕಿನಿಂದ ಬರುವ ಕ್ಯಾನ್ಸರಿನ ಪ್ರಮಾಣ ಕ್ರಮವಾಗಿ ಶೇ 56.4 ಮತ್ತು ಶೇ 44.9 ರಷ್ಟಿದೆ. ಧೂಮಪಾನದಿಂದಶೇ 90 ರಷ್ಟು ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ರೋಗಗಳು ಹರಡುತ್ತವೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಇಷ್ಟೆಲ್ಲ ಭಯ ಹುಟ್ಟಿಸಿದರೂ ಧೂಮಪಾನ, ತಂಬಾಕು ಸೇವನೆ ನಿಯಂತ್ರಣವಾಗುತ್ತಿಲ್ಲ. ಇಂಥ ಪರಿಸ್ಥಿತಿಯ ನಡುವೆಯೇ ಮತ್ತೊಂದು ವಿಶ್ವ ತಂಬಾಕು ರಹಿತ ದಿನ (ಮೇ 31) ಆಚರಣೆ ಎದುರಾಗಿದೆ.

ತಂಬಾಕು ಸೇವನೆಯ ಪರಿಣಾಮಗಳು : ತಂಬಾಕು ದೇಹದ ವಿವಿಧ ಭಾಗಗಳಾದ ಬಾಯಿ, ಗಂಟಲು, ಶ್ವಾಸ ಕೋಶ,. ಜಠರ, ಮೂತ್ರಪಿಂಡ, ಬ್ಲಾಡರ್, ಕ್ಯಾನ್ಸರಿಗೆ ಕಾರಣವಾಗುತ್ತದೆ ಎಂದು ಶ್ವಾಸಕೋಶ ತಜ್ಞರು ಅಭಿಪ್ರಾಯಪಡುತ್ತಾರೆ.

ತಂಬಾಕು ಹೃದಯ ಮತ್ತು ರಕ್ತನಾಳಗಳ ರೋಗಕ್ಕೆ ದಾರಿ ಮಾಡು ತ್ತದೆ. ಹೃದಯಾಘಾತ, ಎದೆ ನೋವು ಹಠಾತ್ ಹೃದಯಘಾತದಿಂದ ಸಾವು, ಪಾರ್ಶ್ವವಾಯು, ಹೊರ ರಕ್ತನಾಳಗಳ ವ್ಯಾಧಿ, ಕಾಲಿನ ಗ್ಯಾಂಗ್ರಿನ್.. ಹೀಗೆ ಅಂಗಾಗಳ ಸಮಸ್ಯೆಗೆ ಕಾರಣವಾಗುತ್ತದೆ.

ಒಂದು ಮೂಲದ ಮಾಹಿತಿ ಪ್ರಕಾರ ಭಾರತದಲ್ಲಿನ ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಗೆ ಶೇ.82ರಷ್ಟು ತಂಬಾಕು, ಧೂಮಪಾನ ಕಾರಣ ವಾಗುತ್ತಿದೆ. ತಂಬಾಕು ಸೇವೆನಯಿಂದ ಪರೋಕ್ಷವಾಗಿ ಶ್ವಾಸಕೋಶದ ಕ್ಷಯ ಕಾಣಿಸಿಕೊಳ್ಳುತ್ತದೆ. ಸಿಗರೇಟು, ಬೀಡಿ. ಸೇದುವಿಕೆಯಿಂದ ಟಿ.ಬಿ ಸಾಧ್ಯತೆ ಹೆಚ್ಚುತ್ತದೆ.

ಅತಿಯಾದ ಧೂಮಪಾನ ಮಾಡುವವರಲ್ಲಿ ಪಾದಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದು ಕಾಲುಗಳಲ್ಲಿ ಗ್ಯಾಂಗ್ರೀನ್‌ಗೆ ಕಾರಣವಾಗಬಹುದು. 
ಪ್ರತಿ ದಿನ ಎರಡು ಪ್ಯಾಕ್ ಸಿಗರೇಟ್ ಸೇದುವ ವ್ಯಕ್ತಿಯೊಂದಿಗೆ ನಿರಂತರವಾಗಿ ಜೀವಿಸುವ ವ್ಯಕ್ತಿಯೂ ಪರೋಕ್ಷವಾಗಿ ಸಿಗರೇಟ್ ಸೇದಿದಷ್ಟೇ ಅನಾರೋಗ್ಯ ಪೀಡಿತನಾಗುತ್ತಾನೆ ಎನ್ನುತ್ತಾರೆ ವೈದ್ಯರು.

ಸಾವು–ನೋವು, ಅಂಕಿ ಅಂಶ : ದೇಶದಲ್ಲಿ  ವರ್ಷ 8 ರಿಂದ 9 ಲಕ್ಷ ಮಂದಿ ತಂಬಾಂಕು ಸೇವನೆಯಿಂದ ಬರುವ ಕಾಯಿಲೆಗಳಿಂದ ಸಾವಿಗೀಡಾಗುತ್ತಾರೆ. ತಂಬಾಕು ಸೇವಿಸುವವರಲ್ಲಿ ಅರ್ಧದಷ್ಟು ಹದಿಹರೆಯದವರು.

ತಂಬಾಕು ಸೇವನೆ ಪುರುಷರಲ್ಲಿ ನಂಪುಸತ್ವಕ್ಕೆ ಕಾರಣವಾಗುತ್ತದೆ. ತಂಬಾಕು ಧೂಮಪಾನ ಸೇವನೆಯಿಂದ ಮಹಿಳೆಯ­ರಲ್ಲಿ ಈಸ್ಟ್ರೊಜನ್  ಪ್ರಮಾಣ ಕಡಿಮೆಯಾಗುತ್ತದೆ.  ಋತುಬಂಧದ ಏರುಪೇರು, ದೈಹಿಕ ಚಟುವಟಿಕೆಯ ಸಾಮರ್ಥ್ಯ ಕ್ಷೀಣ, ಸಹನಾ ಶಕ್ತಿಯನ್ನು ಕುಂದಿಸುತ್ತದೆ. ಸಂತಾನೋತ್ಪತ್ತಿ ಮೇಲೂ ಪರಿಣಾಮ ಬೀರಬಹುದು.  ಎನ್ನುತ್ತಾರೆ ಪ್ರಸವ (ಗೈನೋಕಾಲಜಿಸ್ಟ್) ತಜ್ಞರು.

ಇಂದು ವಿಶ್ವ ತಂಬಾಕು ರಹಿತ ದಿನಾಚರಣೆ:
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ವಕೀಲರ ಭವನದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಯೋಜಿಸಲಾಗಿದೆ.   ಜಾಗೃತಿ ಜಾಥಾ ಮತ್ತು ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿದೆ.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರ ಡಾ. ರಂಗನಾಥ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT