ADVERTISEMENT

ತುಂಬಲಿವೆ ಕೆರೆಗಳು

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 12:11 IST
Last Updated 4 ಜೂನ್ 2018, 12:11 IST
ತುಂಬಲಿವೆ ಕೆರೆಗಳು
ತುಂಬಲಿವೆ ಕೆರೆಗಳು   

ಪ್ರತಿನಿತ್ಯ ಬೆಳಿಗ್ಗೆ ದಿನಪತ್ರಿಕೆ ಓದುವುದು ನನ್ನ ಹವ್ಯಾಸ. ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಕ್ಷೇತ್ರದ ಸಮಸ್ಯೆಗಳನ್ನು ಹಾಗೂ ಮತದಾರರಲ್ಲಿ ಅನೇಕರು ಸಾರಿಗೆ, ನೀರಾವರಿ, ಮೂಲಸೌಕರ್ಯ ಒದಗಿಸುವಂತೆ ಸಲಹೆ ನೀಡಿರುವುದನ್ನು ಗಮನಿಸಿದ್ದೇನೆ. ಅವುಗಳ ಅನುಷ್ಠಾನಕ್ಕೂ ಶ್ರಮಿಸುತ್ತೇನೆ.

‘ದಿಕ್ಸೂಚಿ’ಯಲ್ಲಿ ‘ಕೃಷಿ ಮಾರುಕಟ್ಟೆಯ ಅಭಿವೃದ್ಧಿ’ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಹೊಸದುರ್ಗಕ್ಕೆ ಸೇರಿಕೊಂಡಿದ್ದ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಬೇರ್ಪಡಿಸಿ 2008ರಲ್ಲಿ ತಾಲ್ಲೂಕಿಗೆ ಪ್ರತ್ಯೇಕ ಮಾರುಕಟ್ಟೆ ತಂದವನೇ ನಾನು. 2013ರಲ್ಲಿ ನಾನು ಸೋತಿದ್ದರಿಂದ ಐದು ವರ್ಷ ಮಾರುಕಟ್ಟೆಯನ್ನು ನಿರ್ಲಕ್ಷಿಸಲಾಗಿತ್ತು. ಈಗ ಮತ್ತೆ ಮಾರುಕಟ್ಟೆ ಅಭಿವೃದ್ಧಿಗೆ ಮುಂದಾಗುತ್ತೇನೆ.

ಖಂಡಿತ ಜನರ ನಂಬಿಕೆ ಉಳಿಸಿಕೊಳ್ಳುತ್ತೇನೆ. ನಾನು ಮೊದಲಿನಿಂದಲೂ ಸಾರ್ವಜನಿಕರ ನಡುವೆಯೇ ಬೆಳೆದು ಬಂದಿದ್ದೇನೆ. ಅಭಿವೃದ್ಧಿಯ ದೃಷ್ಟಿಯಿಂದಲೇ ಜನ ನನ್ನನ್ನು ಆಯ್ಕೆ ಮಾಡಿದ್ದಾರೆ. ನಾನು ಉತ್ತಮ ಕಾರ್ಯ ಮಾಡುವುದಾಗಿ ಜನರಿಗೂ ನನ್ನ ಮೇಲೆ ವಿಶ್ವಾಸ ಇದೆ. ಇದರಿಂದಲೇ ಅಭೂತ ಪೂರ್ವವಾಗಿ ನನ್ನನ್ನು ಮತ್ತೊಮ್ಮೆ ಗೆಲ್ಲಿಸಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದಷ್ಟೇ ಅಲ್ಲ ಅವರ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತೇನೆ.

ADVERTISEMENT

ಶಾಸಕನಾಗಿ ಆಯ್ಕೆ ಆದರೆ, ಕ್ಷೇತ್ರದ ಕೆರೆಗಳನ್ನು ತುಂಬಿಸುವುದಾಗಿ ಭರವಸೆ ನೀಡಿದ್ದೆ. ಅದರಂತೆ ಕೆರೆ ತುಂಬಿಸುವುದು ನನ್ನ ಮೊದಲ ಆದ್ಯತೆ ಆಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯುತ್ತೇನೆ. ನಂತರ ಯೋಜನೆ ಜಾರಿಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಕೆರೆಗಳು ತುಂಬಿದರೆ ಅಂತರ್ಜಲ ಹೆಚ್ಚುತ್ತದೆ. ಆಗ ಕುಡಿಯುವ ನೀರಿನ ಸಮಸ್ಯೆ ತಂತಾನೆ ಬಗೆಹರಿಯುತ್ತದೆ. ರೈತರೂ ನೆಮ್ಮದಿಯಾಗಿ ಇರುತ್ತಾರೆ. ಇನ್ನು ರಸ್ತೆ, ಶಾಲಾ ಕಾಲೇಜುಗಳ ನಿರ್ಮಾಣಕ್ಕೂ ಆದ್ಯತೆ ನೀಡುತ್ತೇನೆ.

ನಾನು ನಾಲ್ಕು ಬಾರಿ ಶಾಸಕನಾಗಿದ್ದು, ರಾಜಕೀಯದಲ್ಲಿ 40 ವರ್ಷಗಳ ಅನುಭವ ಇದೆ. ಸುಮ್ಮನೆ ಕೂತರೆ ಅನುದಾನ ಬರುವುದಿಲ್ಲ. ಅದರಂತೆ ಕ್ಷೇತ್ರಕ್ಕೆ ಅಗತ್ಯವಾದ ಕೆಲಸಗಳಿಗೆ ಹಣ ತರಲು ವಿವಿಧ ಇಲಾಖೆಗಳನ್ನು ಸಂಪರ್ಕಿಸಬೇಕು.

ನಾನು ಬಿಜೆಪಿ ಶಾಸಕನಾಗಿದ್ದು, ರಾಜ್ಯದಲ್ಲಿ ನಮ್ಮ ಸರ್ಕಾರ ಇಲ್ಲ. ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ನಾನು ವಿರೋಧ ಪಕ್ಷದ ಶಾಸಕನಾಗಿದ್ದೆ. ಆಗ ನೂರಾರು ಕೋಟಿ ರೂಪಾಯಿ ಅನುದಾನ ತಂದು ಭರಮಸಾಗರ ಕ್ಷೇತ್ರದಲ್ಲಿ ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಿ ‘ರಸ್ತೆರಾಜ’ ಎಂಬ ಬಿರುದು ಪಡೆದಿದ್ದೆ. ಈಗ ‘ಮೂಲಸೌಕರ್ಯ ಕಲ್ಪಿಸುವ ರಾಜ’ ಎಂಬುದಾಗಿ ಜನತೆ ಕರೆಯುವಂತೆ ಕಾರ್ಯ ನಿರ್ವಹಿಸುತ್ತೇನೆ. ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಜನರ ನಿರೀಕ್ಷೆಯೂ ಇದೇ ಆಗಿದ್ದು, ಐದು ವರ್ಷ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಕ್ಷೇತ್ರದ ಮಹಿಳೆಯರು ‘ಚಂದ್ರಣ್ಣ ಉತ್ತಮ ಕೆಲಸ ಮಾಡುತ್ತಾರೆ’ ಎಂಬ ಭರವಸೆ ಇಟ್ಟು ನನಗೆ ಹೆಚ್ಚು ಮತ ನೀಡಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿಗೊಳಿಸದೆ ಕೆಲಸ ಮಾಡುತ್ತೇನೆ. ಅವರ ಸಗಣಿ, ಬಳಿದು ರಂಗೋಲಿ ಹಾಕುವ ಸ್ಥಳದಲ್ಲೆಲ್ಲಾ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕನಸಿದೆ. ಹಿಂದೆ 2008ರಲ್ಲಿ ನಾನು ಇಲ್ಲಿನ ಶಾಸಕನಾದಾಗ ಹೊಳಲ್ಕೆರೆ ಪಟ್ಟಣ ಒಂದು ಹಳ್ಳಿಯಂತಿತ್ತು. ಆಗ ಪಟ್ಟಣವನ್ನು ಅಭಿವೃದ್ಧಿಪಡಿಸುವ ಮೂಲಕ ಹೊಸ ರೂಪ ನೀಡಿದ್ದೆ. ಇದೇ ತಳಹದಿಯ ಮೇಲೆ ಕ್ಷೇತ್ರವನ್ನು ಮತ್ತಷ್ಟು ಮಾದರಿಯಾಗಿ ರೂಪಿಸುತ್ತೇನೆ.

ಸಾಂತೇನಹಳ್ಳಿ ಸಂದೇಶ್ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.